ಮೂಲಭೂತ ಸೌಲಭ್ಯಕ್ಕಾಗಿ ವ್ಯಾಪಾರಿಗಳ ಮನವಿ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಜ.11
ಬೀದಿ ಬದಿಯಲ್ಲಿನ ಬಡ ವ್ಯಾಪಾರಿಗಳಿಗೆ ಸೂಕ್ತ ಹಾಗೂ ಶಾಶ್ವತ ಸ್ಥಳವನ್ನು ನಿಗದಿಗೊಳಿಸುವ ಜತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗುರುವಾರ ಪಟ್ಟಣದ ನೂರಾರು ಬೀದಿ ಬದಿಯ ವ್ಯಾಪಾರಸ್ಥರು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಆಗ್ರಹಪೂರ್ವಕ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆ ನಡೆದಿತ್ತು: ದಶಕಗಳಿಂದಲೂ ಮುಖ್ಯ ರಸ್ತೆಗಳ ಅಕ್ಕ-ಪಕ್ಕದಲ್ಲಿಯೇ ಹಣ್ಣು, ಹೂವು, ಬಳೆ, ಅರಿಶಿನ-ಕುಂಕುಮ ಮೊದಲಾದ ವಸ್ತುಗಳನ್ನು ಪಟ್ಟಣದ ಮುಖ್ಯ ರಸ್ತೆ ಹಾಗೂ ವೃತ್ತಗಳ ಬಳಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದ ಬಡ ವ್ಯಾಪಾರಿಗಳನ್ನು ಕಳೆದ ಮೂರು ತಿಂಗಳ ಹಿಂದೆಯಷ್ಟೇ, ಕೋಟೆ ರಸ್ತೆಯಲ್ಲಿನ ಕವರ್ ಡೆಕ್‌ನ ಬಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಏಕಾಏಕಿ ಬೀದಿ ಬದಿಯ ವ್ಯಾಪಾರಿಗಳನ್ನು ಸ್ಥಳಾಂತರಿಸಿದ ಪುರಸಭೆ ಹಾಗೂ ಪೊಲೀಸರು, ಸ್ಥಳಾಂತರಿಸಿದ ಜಾಗದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸಿಕೊಡದಿರುವ ಪುರಸಭೆಯ ನಿರ್ಲಕ್ಷತೆಯಿಂದ ಬೇಸತ್ತು ಪ್ರತಿಭಟನೆಯನ್ನೂ ಕೈಗೊಂಡಿದ್ದರು.
ಮನವಿ: ಆದರೆ, ಇದಾವುದಕ್ಕೂ ಕಿವಿಗೊಡದ ಪುರಸಭೆಯ ನೀತಿಯನ್ನು ಖಂಡಿಸಿ, ಗುರುವಾರದಂದು ನೂರಾರು ಬೀದಿ ಬದಿಯ ವ್ಯಾಪಾರಿಗಳು ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಹರೀಶ್ ಅವರಿಗೆ ಆಗ್ರಹಪೂರ್ವಕ ಮನವಿ ಸಲ್ಲಿಸಿದರು. ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಬೀದಿ ಬದಿಯ ವ್ಯಾಪಾರಿಗಳನ್ನು ಸ್ಥಳಾಂತರಿಸುತ್ತಿರುವುದಾಗಿ ತಿಳಿಸಿರುವ ಪುರಸಭೆ ಹಾಗೂ ಪೊಲೀಸ್ ಇಲಾಖೆ, ಇಂದಿಗೂ ಬೀದಿ ಬದಿಯಲ್ಲಿಯೇ ವ್ಯಾಪಾರ ನಡೆಸುತ್ತಿರುವ ತರಕಾರಿ ವ್ಯಾಪಾರಿಗಳನ್ನು ಸ್ಥಳಾಂತರಿಸದೇ ಇರುವ ಕುರಿತಂತೆ ಪುರಸಭೆಯ ದ್ವಂದ್ವ ನೀತಿಯ ವಿರುದ್ಧ ಅಸಮಾಧಾನಗೊಂಡರು.
ಸ್ಪಷ್ಟನೆ: ಪುರಸಭೆಯ ಮುಖ್ಯಾಧಿಕಾರಿ ಹರೀಶ್ ಮಾತನಾಡಿ, ಬೀದಿ ಬದಿ ವ್ಯಾಪಾರವನ್ನು ಸೂಕ್ತ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಈ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಮಾರ್ಚ್ -ಏಪ್ರಿಲ್‌ನಲ್ಲಿ ಹೊಸ ಕ್ರಿಯಾ ಯೋಜನೆಯನ್ನು ಕೈಗೆತ್ತಿಕೊಂಡು ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುವುದು. ಆದರೂ, ಅಲ್ಲಿಯವರೆಗೂ ಸ್ಥಳಾಂತರಿಸಲಾಗಿರುವ ಸ್ಥಳಕ್ಕೆ ತುರ್ತು ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ಪುರಸಭೆ ಬದ್ಧವಾಗಿರುವುದಾಗಿ ತಿಳಿಸಿದರು.