ಶಿಕ್ಷಕರ ಮೇಲೆ ಹಲ್ಲೆ: ನೌಕರರ ಸಂಘ ಖಂಡನೆ
ಚನ್ನರಾಯಪಟ್ಟಣ: ಪಟ್ಟಣದ ಪೇಟೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾಡಿದ ತಪ್ಪನ್ನು ಶಿಕ್ಷಕರು ವಿರೋಧಿಸಿದ ಕಾರಣ ಪೋಷಕರು ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಶಾಲಾ ಕಲಿಕಾ ಸಾಮಗ್ರಿಗಳನ್ನು ಹಾಳು ಮಾಡಿರುವುದು ಖಂಡನಿಯವಾಗಿದ್ದು, ಹಲ್ಲೆಗೆ ಕಾರಣರಾದ ಪುಂಡರನ್ನು ಬಂಧಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿ ಹೇಳುವ ಬದಲಾಗಿ ಕೆಲವು ಪುಂಡರನ್ನು ಕರೆದುಕೊಂಡು ಬಂದು ಶಿಕ್ಷಕ ಮತ್ತು ಶಿಕ್ಷಕಿಯರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು, ಹಲ್ಲೆ ಮಾಡಲು ಬಂದಿದ್ದ ಎಲ್ಲರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೇ ಶಾಲಾ ಅವದಿಯಲ್ಲಿ ಇಬ್ಬರು ಪೋಲಿಸರನ್ನು ನಿಯೋಜನೆ ಮಾಡಿದರೆ ಪುಂಡರ ಗುಂಪನ್ನು ತಡೆಯುವ ಜತೆಗೆ ಶಿಕ್ಷಕ ವರ್ಗದವರಿಗೆ ರಕ್ಷಣೆ ನೀಡಿದಂತಾಗುತ್ತದೆ ಎಂದು ತಿಳಿಸಿದರು. ನೌಕರರ ಸಂಘದ ನವೀನ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜೇಗೌಡ ಹಾಗೂ ಇತರರು ಇದ್ದರು.
ಎಸ್ಬಿಎಂನಿಂದ ಶಾಲೆಗಳಿಗೆ ಆಕ್ವಾಗಾರ್ಡ್ಕೊಡುಗೆ
ರಾಮನಾಥಪುರ: ಇಲ್ಲಿಗೆ ಸಮೀಪದ ಬೆಳವಾಡಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಶುದ್ಧವಾದ ಕುಡಿಯುವ ನೀರು ಉಪಯೋಗಿಸಲು ಅನುಕೂಲವಾಗುವಂತೆ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ವತಿಯಿಂದ ಇತ್ತೀಚೆಗೆ ಆಕ್ವಾಗಾರ್ಡ್ ನೀಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಪ್ರಮೋದ್ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ 1913ನೇ ನ. 14ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕರ್ನಾಟಕದಲ್ಲಿ ಉದಯಿಸಿತು. ಕಳೆದ 2013ನೇ ನ. 14ರಂದು ಎಸ್ಬಿಎಂ ಶತದಿನೋತ್ಸವ ಆಚರಿಸಿಕೊಂಡಿದ್ದು, ಇದರ ಅಂಗವಾಗಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಆಕ್ವಾಗಾರ್ಡ್ ವಿತರಿಸುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಪಾಂಡುರಂಗ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪಾಪೇಗೌಡ, ಬ್ಯಾಂಕ್ನ ಕ್ಯಾಷಿಯರ್ ಹರೀಶ್ ಇದ್ದರು.
ತಿಳಿವಳಿಕೆ ಉಳ್ಳವರಲ್ಲೇ ಏಡ್ಸ್ ಹೆಚ್ಚು: ಆತಂಕ
ಹಾಸನ: ವೇಗವಾಗಿ ಹರಡುತ್ತಿರುವ ಏಡ್ಸ್ಗೆ ತಿಳಿಯುವಳಿಕೆ ಇರುವ ಜನತೆಯೇ ಈಡಾಗುತ್ತಿದ್ದಾರೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಮೇಲ್ವಿಚಾರಕ ಬಿ.ಎಂ. ರವಿಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಸನ ಜಿಲ್ಲೆ 13ನೇ ಸ್ಥಾನದಲ್ಲಿದೆ. ಹೆಚ್.ಐ.ವಿ. ಬಗ್ಗೆ ತಿಳಿವಳಿಕೆಯುಳ್ಳ ಜನರಲ್ಲೇ ಏಡ್ಸ್ ಹರಡುತ್ತಿದೆ. ಭಾರತ ಸಾಂಸ್ಕೃತಿಕವಾಗಿ ವಿಶ್ವದಲ್ಲೇ ಗಮನ ಸೆಳೆದಿದ್ದರೂ ಹೆಚ್ಐವಿ ಹರಡಿರುವ ಪ್ರಮಾಣದಲ್ಲಿ 2ನೇ ಸ್ಥಾನದಲ್ಲಿರುವುದು ನೋವಿನ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಸಿ. ಜಯದೇವಯ್ಯ, ಉಪನ್ಯಾಸಕ ವೆಂಕಟೇಶ್ ದೇವಿಪುರ ಮಾತನಾಡಿದರು. ಉಪನ್ಯಾಸಕ ಎ.ಆರ್. ಸುಬ್ಬಶೆಟ್ಟಿ ನಿರೂಪಿಸಿದರು.
ಗಾಯನ ಕಾರ್ಯಕ್ರಮ
ಹಾಸನ ಜಿಲ್ಲಾ ಗಮಕ ಕಲಾ ಪರಿಷತ್ ವತಿಯಿಂದ ಸೀತಾರಾಮಾಂಜನೇಯ ದೇವಾಲಯದ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ಏರ್ಪಡಿಸಿರುವ ಗಮಕ ಹಬ್ಬ - ಕವಿ ನಮನ ಕಾರ್ಯಕ್ರಮದಲ್ಲಿ ಶುಭ ರಾಘವೇಂದ್ರ ಅವರಿಂದ ಶ್ರೀ ಶಂಕರಾಯಣ ಕಾವ್ಯ ಕುರಿತು ಗಾಯನ ಏರ್ಪಡಿಸಲಾಗಿತ್ತು. ಕೃಪಾ ಮಂಜುನಾಥ ವ್ಯಾಖ್ಯಾನ ನೀಡಿದರು.
ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಒತ್ತಾಯ
ಹಾಸನ: ಗ್ರಾಮಾಂತರ ಭಾಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನುದಾನಿತ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಆದ್ಯತೆ ನೀಡಬೇಕು ಎಂದು ನಿವೃತ್ತ ಅಧಿಕಾರಿ ಹೆಚ್.ಎಸ್. ಗೋವಿಂದೇಗೌಡ ತಿಳಿಸಿದರು. ಅರಕಲಗೂಡು ತಾಲೂಕಿನ ಗಂಗೂರು ಗ್ರಾಪಂ ವ್ಯಾಪ್ತಿಯ ರಾಗಿಮರೂರು ವರನಂದಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸೈಕಲ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಜನಪ್ರತಿನಿಧಿಗಳು ಶಾಲಾ ಮೈದಾನದ ಸುತ್ತ ಕಾಂಪೌಂಡ್, ಕಟ್ಟಡ ನವೀಕರಣಕ್ಕೆ ಸಹಕರಿಸಬೇಕೆಂದು ಅವರು ಎಂದು ಮನವಿ ಮಾಡಿದರು. ಮುಖ್ಯ ಶಿಕ್ಷಕ ವೈ.ಟಿ. ಲಕ್ಷ್ಮಣ್, ಶಾಲಾವಾರ್ಷಿಕ ವರದಿ ಮಂಡಿಸಿದರು. ಗಂಗೂರು ಗ್ರಾಪಂ ಅಧ್ಯಕ್ಷ ದೇವ ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ ಗಣೇಶ್, ಉಪಾಧ್ಯಕ್ಷೆ ಸಾಕಮ್ಮ ಯೋಗೇಗೌಡ, ವಿದ್ಯಾಸಂಸ್ಥೆ ಕಾರ್ಯದರ್ಶಿ ಅಮೃತೇಶ್, ರಾಜೇಗೌಡ, ಪೋಷಕರು ವರ್ಗದವರು ಇದ್ದರು. ಶಿಕ್ಷಕ ಜಗದೀಶ್ ಸ್ವಾಗತಿಸಿದರು. ಶಿವರಾಮ ನಾಯಕ ನಿರೂಪಿಸಿದರು. ಹೆಚ್.ಸಿ. ರಾಖೇಶ್ ವಂದಿಸಿದರು. ಶಾಲೆಯ 31 ಮಕ್ಕಳಿಗೆ ಸೈಕಲ್ ವಿತರಿಸಲಾಯಿತು.
ನುಗ್ಗೇಹಳ್ಳಿಯಲ್ಲಿ ವೈಭವದ ವೈಕುಂಠ ಏಕಾದಶಿ
ನುಗ್ಗೇಹಳ್ಳಿ: ನುಗ್ಗೇಹಳ್ಳಿಯ ಶ್ರೀ ಪೇಟೆ ತಿರುಮಲ ದೇವಸ್ಥಾನದಲ್ಲಿ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅರ್ಚಕ ಪ್ರಸನ್ನ ಕೇಶವಾಚಾರ್ ನೇತೃತ್ವದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ವಿಶೇಷವಾಗಿ ಪುಷ್ಪಾಲಂಕಾರ ಮತ್ತು ಶ್ರೀ ಮಹಾಲಕ್ಷ್ಮಿ ಅಮ್ಮನವರಿಗೆ ಅರಿಶಿನ ಅಲಂಕಾರ, ಭೂ ವರಾಹಸ್ವಾಮಿಗೆ ಪುಷ್ಪಾಲಂಕಾರ, ಗಣಪತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಭಕ್ತಿಗೀತೆ ಹಾಗೂ ದೇವರ ನಾಮಗಳನ್ನು ಹಾಡುವವರಿಗೆ ಹಾಡಿಗೊಂದು ಲಾಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ ಸಾಮೂಹಿಕ ವಿಷ್ಣು ಸಹಸ್ರನಾಮ ಕಾರ್ಯಕ್ರಮ ಹಾಗೂ ವಿದ್ವಾನ್ ಎನ್.ಜೆ. ಸೋ. ನರಸಿಂಹನ್ ಅವರಿಂದ ವೈಕುಂಠ ಏಕಾದಶಿ ಮಹತ್ವದ ಬಗ್ಗೆ ಪ್ರವಚನ ಏರ್ಪಡಿಸಲಾಗಿತ್ತು.
ಪುರಸಭೆ ಮುಖ್ಯಾಧಿಕಾರಿ ನಿಧನಕ್ಕೆ ಸಂತಾಪ
ಸಕಲೇಶಪುರ: ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ವೀರಭದ್ರಯ್ಯ ನಿಧನಕ್ಕೆ ಪುರಸಭೆ ಅಧ್ಯಕ್ಷ ಸತೀಶ್ ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ಮೃತರಾದ ಮುಖ್ಯಾಧಿಕಾರಿ ವೀರಭದ್ರಯ್ಯ ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಸದಾ ಪಟ್ಟಣದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ತಮ್ಮ ಕ್ರಿಯಾ ಶೀಲತೆಯಿಂದ ಪುರಸಭೆಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಮುಖೇಶ್, ಪುರಸಭೆಯ ಎಲ್ಲಾ ವಾರ್ಡ್ನ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಮೃತ ರೈತನ ಕುಟುಂಬಕ್ಕೆ ಚೆಸ್ಕಾಂನಿಂದ ಪರಿಹಾರ
ಬೇಲೂರು: ಅರೇಹಳ್ಳಿ ಹೋಬಳಿಯಲ್ಲಿ ಚೆಸ್ಕಾಂ ನಿರ್ಲಕ್ಷ್ಯದಿಂದ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನ್ನಪ್ಪಿದ್ದ ಜುಲ್ಫಿಕರ್ ಕುಟುಂಬಕ್ಕೆ ಇಲಾಖೆ ಅಧಿಕಾರಿಗಳು ಬುಧವಾರ ರು. 2 ಲಕ್ಷ ಪರಿಹಾರವನ್ನು ಇತ್ತೀಚೆಗೆ ವಿತರಿಸಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಪರಿಹಾರದ ಚೆಕ್ಕನ್ನು ಅಧಿಕಾರಿಗಳು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು. ಉಳಿದ ರು. 50 ಸಾವಿರವನ್ನು ನಂತರ ಕೊಡುವುದಾಗಿ ತಿಳಿಸಿದರು. ಹೋಬಳಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ಬದಲಿಸಬೇಕು. ಅರೇ ಹಳ್ಳಿಯ ಹಳೇ ಮಸೀದಿ ಬೀದಿಯಲ್ಲಿ 15 ಕಬ್ಬಿಣದ ವಿದ್ಯುತ್ ಕಂಬಗಳಿದ್ದು, ಅದೆಲ್ಲವನ್ನು ಬದಲಿಸಬೇಕು. ಇನ್ನು ಮುಂದೆ ಇಂಥ ಅವಘಡಗಳು ನಡೆಯದಂತೆ ಎಚ್ಚರ ವಹಿಸಬೇಕು. ಈ ಘಟನೆಯಲ್ಲಿನ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಹ್ಯೂಮೆಟೇರಿಯನ್ ರಿಲೀಫ್ ಸೊಸೈಟಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಥರ್ ಗೌಡ
ಹಾಸನ: ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಶಾಸಕ ಎ. ಮಂಜು ಅವರ ಪುತ್ರ ಎ.ಮಂಥರ್ ಗೌಡ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ದಿವಂಗತ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಹೊಳೆನರಸೀಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ರುದ್ರೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಫಾಜಿಲ್ ಖಾನ್, ವಿನೋದ್ ಕುಮಾರ್ ಮತ್ತು ಪ್ರಕಾಶ್ ಆಯ್ಕೆಯಾಗಿದ್ದರೇ, ಚನ್ನರಾಯಪಟ್ಟಣ ತಾಲೂಕು ಘಟಕದ ಅಧ್ಯಕ್ಷರಾಗಿ ಬಾಬು, ಅರಸೀಕೆರೆ ಅಧ್ಯಕ್ಷರಾಗಿ ರಘು, ಸಕಲೇಶಪುರ ತಾಲೂಕು ಅಧ್ಯಕ್ಷರಾಗಿ ಪ್ರದೀಪ್ ಸಕ್ಫಾಲ್, ಬೇಲೂರು ತಾಲೂಕು ಅಧ್ಯಕ್ಷರಾಗಿ ಪುನೀತ್ ಗೌಡ, ಅರಕಲಗೂಡು ತಾಲೂಕು ಅಧ್ಯಕ್ಷರಾಗಿ ಗಣೇಶ್ ಆಯ್ಕೆಯಾಗಿದ್ದಾರೆ.
ಸೈಕಲ್ ಸ್ಟ್ಯಾಂಡ್ ಇಲ್ಲ: ಶಾಸಕ ಬಾಲಕೃಷ್ಣ ವಿಷಾದ
ಚನ್ನರಾಯಪಟ್ಟಣ: ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಮಕ್ಕಳಿಗೆ ಸೈಕಲ್ಗಳನ್ನು ನೀಡಿದೆ. ಆದರೆ ಅವುಗಳನ್ನು ಸುರಕ್ಷಿತವಾಗಿ ಪಾರ್ಕಿಂಗ್ ಮಾಡಲು ಸೈಕಲ್ ಸ್ಟ್ಯಾಂಡ್ಗಳನ್ನು ನಿರ್ಮಿಸಲು ಮುಂದಾಗದಿರುವುದು ವಿಷಾದನೀಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಪಟ್ಟಣದ ಪೇಟೆ ಶಾಲೆಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡಿ, ಸೈಕಲ್ ನಿಲ್ಲಿಸಲು ಸೈಕಲ್ ಸ್ಟ್ಯಾಂಡ್ ನಿರ್ಮಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದರು.
ದಂಡ: ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಮಾತನಾಡಿ, ತಾಲೂಕಿನಲ್ಲಿ 2553 ಸೈಕಲ್ಗಳನ್ನು ವಿತರಣೆ ಮಾಡುತ್ತಿದ್ದು, ಅವುಗಳನ್ನು ಮಾರಾಟ ಮಾಡಿರುವುದು ಕಂಡು ಬಂದರೆ ಅವರ ಪೋಷಕರಿಗೆ 5 ಸಾವಿರ ರು. ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಸೈಕಲ್ಗಳ ಸಣ್ಣ ಪುಟ್ಟ ರಿಪೇರಿಗಾಗಿ ಒಂದು ಕಿಟ್ ನೀಡಲಾಗುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ, ಪುರಸಭಾಧ್ಯಕ್ಷ ಮಂಜಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ಕುಮಾರ್, ಮುಖ್ಯ ಶಿಕ್ಷಕ ಚಂದ್ರಶೇಖರ್ ಇದ್ದರು.
ವಿಜೃಂಭಣೆಯ 'ವೈಕುಂಠ'
ವೈಕುಂಠ ಏಕಾದಶಿಯ ಅಂಗವಾಗಿ ಹಾಸನ ನಗರದ ಹೊರವಲಯದ ವಿಜಯ ನಗರ ಬಡಾವಣೆಯ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಾತಃಕಾಲ 5 ಗಂಟೆಯಿಂದಲೇ ಭಕ್ತರು ಸಾಲಾಗಿ ಬಂದು ದೇವರ ದರ್ಶನ ಪಡೆದರು.
ಫೆ. 5ರಿಂದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ
ಚನ್ನರಾಯಪಟ್ಟಣ: ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಫೆ.5ರಂದು ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 5ರಂದು ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಸಲು ಉದ್ದೇಶಿಸಿರುವ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು. 5 ಸಾವಿರಕ್ಕೂ ಹೆಚ್ಚು ಮಕ್ಕಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಮೂರು ವಿಚಾರಗೋಷ್ಠಿಗಳನ್ನು ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ. ಅವುಗಳನ್ನು ಪ್ರತಿಭಾನ್ವಿತ ಮಕ್ಕಳು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನದ ಯಶಸ್ವಿಗೆ ಜ. 13ರಂದು ಪೂರ್ವಬಾವಿ ಸಭೆ ಕರೆದಿದ್ದು, ಸಮ್ಮೇಳನದ ಯಶಸ್ವಿಗೆ ಸಿದ್ದತೆಗಳು ಹಾಗೂ ಹಲವು ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು. ಪರಿಸರ ಪ್ರೇಮಿ ಚ.ನಂ ಅಶೋಕ್, ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್, ಪಟೇಲ್ ಮಂಜುನಾಥ್, ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಯೋಗೇಶ್ ಇದ್ದರು.
ಉದ್ಯೋಗ ಖಾತ್ರಿ ಜನಜಾಗೃತಿ ಮಾಸಾಚರಣೆ
ಆಲೂರು: ತಾಲೂಕಿನ ಕಣತೂರು ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತ್ರಿ ಕುರಿತು ಜನಜಾಗೃತಿ ಮಾಸಾಚರಣೆ ಜಾಥಾ ನಡೆಸಲಾಯಿತು. ಜಾಥಾವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಟರಾಜು ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ಉದ್ಘಾಟಿಸಿದರು. ಹಕ್ಕು ಆಧಾರಿತ, ಕಾಯ್ದೆ ಬದ್ಧವಾಗಿ ಉದ್ಯೋಗ ಬಯಸುವ ಗ್ರಾಮಸ್ಥರಿಗೆ ಈ ಯೋಜನೆ ವರದಾನವಾಗಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ನೀಡುತ್ತದೆ ಎಂದು ಹೇಳಿದರು. ಉದ್ಯೋಗ ಚೀಟಿಯನ್ನು ಗ್ರಾಮ ಪಂಚಾಯ್ತಿಯಲ್ಲೇ ನೀಡಲಾಗುವುದು, ಕಾಮಗಾರಿಯೊಂದಿಗೆ ಗ್ರಾಮೀಣ ಬಡವರಿಗೆ ಆಧಾರವಾಗಿ ನೈಸರ್ಗಿಕ ಸಂಪನ್ಮೂಲ ಬಲ ಪಡಿಸುವುದು, ವಲಸೆ ಹೋಗುವುದನ್ನು ತಡೆಯುವುದು, ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದರು. ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಎಚ್.ಎಸ್.ಶರ್ಮಾ, ಮಂಜು, ದ್ಯಾವಮ್ಮ, ನಿರ್ವಾಣಯ್ಯ, ತಾಪಂ ಸಂಯೋಜಕ ಬೆಟ್ಟೇಗೌಡ ಇತರರು ಇದ್ದರು.
ಕಡ್ಡಾಯ ಶಿಕ್ಷಣ ಕುರಿತು ಜಾಗೃತಿ ಜಾಥಾ
ಬೇಲೂರು: 2014-15ನೇ ಸಾಲಿಗೆ ದುರ್ಬಲ ಹಾಗೂ ಅವಕಾಶ ವಂಚಿತ ಶೋಷಿತರ ಮಕ್ಕಳಿಗೆ ಆರ್ಟಿಇ ಉಚಿತ ಮತ್ತು ಕಡ್ಡಾಯ ಶಿಕ್ಷಣ ಯೋಜನೆಯಿಂದ ಶಾಲೆಗಳಿಗೆ ದಾಖಲಾತಿ ಮಾಡಲಾಗುತ್ತಿದೆ. ಇದರ ಉಪಯೋಗ ಪಡೆಯುವಂತೆ ತಹಸೀಲ್ದಾರ್ ಜಗದೀಶ್ ತಾಲೂಕು ಆರ್ಟಿಇ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ತಮ್ಮ ಸಮೀಪದ ಶಾಲೆಗಳಲ್ಲಿ ದಾಖಲಾತಿಗಾಗಿ ಪೋಷಕರು ಜ.7ರಿಂದ ಫೆ. 8ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರು ಮೂರುವರೆ ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಸಮಾಜದಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸಲು ಹಾಗೂ ಗುಣಾತ್ಮ ಶಿಕ್ಷಣ ನೀಡಲು ಶಾಲೆ ಹಾಗೂ ಇಲಾಖೆಯೊಂದಿಗೆ ಪೋಷಕರು ಸಹಕರಿಸಬೇಕು ಎಂದರು. ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ರಾಕೇಶ್ ದಲಿತ್, ಉಪಾಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಶ್ರೀನಿವಾಸ್, ಜಗದೀಶ್ ಚೌಡಹಳ್ಳಿ,ಸುದರ್ಶನ್, ಫಾಜಿಲ್ಖಾನ್ ಇತರರು ಇದ್ದರು.
'ಶಿಕ್ಷಣ ಇಲಾಖೆಯಿಂದ ಹಲವಾರು ಕಾರ್ಯಕ್ರಮ'
ಚನ್ನರಾಯಪಟ್ಟಣ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸಿ ಖಾಸಗಿ ಶಾಲೆಗಳಿಗಿಂತ ಹೆಚ್ಚು ಬುದ್ದಿವಂತರಾಗಿಸುವ ಸಲುವಾಗಿ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ ಪಾಂಡು ತಿಳಿಸಿದರು. ಪಟ್ಟಣದ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿನ ಶಿಕ್ಷಣ ಹಾಗೂ ಕೌಶಲ್ಯತೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿಭಾ ಕಾರಂಜಿ, ಕಲಿಕೋತ್ಸವ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮಕ್ಕಳಲ್ಲಿನ ಪ್ರತಿಭೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾ ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ಕುಮಾರ್, ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ದೀಪಿಕಾ ಇದ್ದರು.
ತಾಲೂಕಿನಲ್ಲಿ 348 ವಿದ್ಯಾರ್ಥಿಗಳಿಗೆ ಅವಕಾಶ
ಚನ್ನರಾಯಪಟ್ಟಣ: ಬಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಿನಲ್ಲಿ 348 ವಿದ್ಯಾರ್ಥಿಗಳಿಗೆ ಆರ್ಟಿಇನಲ್ಲಿ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ ಪಾಂಡು ತಿಳಿಸಿದರು. ಮಕ್ಕಳ ಶಿಕ್ಷಣ ಕಾಯ್ದೆಯಡಿಯಲ್ಲಿ ತಾಲೂಕಿನ ಅನುದಾನ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲಿನಲ್ಲಿ ಅವಕಾಶ ಕಲ್ಪಿಸಬೇಕೆಂದು ಸರ್ಕಾರದ ಆದೇಶದನ್ವಯ ತಾಲೂಕಿನ 43 ಖಾಸಗಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ತಾಲೂಕಿನ ವೆಸ್ಟ್ಹಿಲ್, ಪೂರ್ಣಚಂದ್ರ, ಗಿರೀಶ್, ಜ್ಞಾನಸಾಗರ ವಿದ್ಯಾ ಸಂಸ್ಥೆಗಳು ಮಾತ್ರ ಎಲ್ಕೆಜಿ ಯಿಂದ ಉಳಿದ ಶಾಲೆಗಳು 1ನೇ ತರಗತಿಯಿಂದ ಆರ್ಟಿಇ ನಲ್ಲಿ ಅವಕಾಶ ಕಲ್ಪಿಸಲು ಅನುಮತಿ ಪಡೆದಿದ್ದು, ಪ.ಜಾತಿ 81, ಪ ವರ್ಗಕ್ಕೆ 37 ಹಾಗೂ ಹಿಂದುಳಿದ ವರ್ಗಕ್ಕೆ 220 ಸೀಟುಗಳನ್ನು ಕಾಯ್ದಿರಿಸಿರಿವೆ. ಪೋಷಕರು ಹತ್ತಿರದ ವಿದ್ಯಾ ಸಂಸ್ಥೆಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಫೆ.7ರೊಳಗೆ ಸಲ್ಲಿಸಬಹುದಾಗಿದೆ. ಆಯ್ಕೆ ಪಟ್ಟಿಯನ್ನು ಫೆ. 28ರಂದು ಪ್ರಕಟಿಸಲಿದ್ದು, ಮಾ. 3ರಿಂದ ಶಾಲಾ ದಾಖಲಾತಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಮನವಿ
ಚನ್ನರಾಯಪಟ್ಟಣ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ತಾಲೂಕಿನ ಮಟ್ಟನವಿಲೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಸಕ ಬಾಲಕೃಷ್ಣ ಅವರಲ್ಲಿ ಮನವಿ ಮಾಡಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮಟ್ಟನವಿಲೆಗೆ ಆಗಮಿಸಿದ ಸಂದರ್ಭದಲ್ಲಿ ಪ್ರೌಢಶಾಲೆ ವಿದ್ಯಾರ್ಥಿ ಮುಖಂಡರುತಮಗೆ ಶಾಶ್ವತ ಕುಡಿಯುವ ನೀರು ನೀಡುವ ಯೋಜನೆಯನ್ನು ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದರು. ಶಾಲಾ ಆವರಣದಲ್ಲಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅರ್ಧ ಕಿ.ಮೀ ನಿಂದ ನೀರು ತರಬೇಕಿದೆ ಎಂದು ಅವರು ವಿವರಿಸಿದರು. ವಿದ್ಯಾರ್ಥಿಗಳ ಮನವಿಗೆ ಶಾಸಕರು ಸದ್ಯದಲ್ಲಿಯೇ ಶಾಲಾ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಶಾಶ್ವತ ಯೋಜನೆಯನ್ನು ಕಲ್ಪಿಸಲಾಗುವುದು. ಅಲ್ಲಿಯವರಗೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ದಿನ ಒಂದು ಟ್ಯಾಂಕರ್ ನೀರನ್ನು ಶಾಲೆಗೆ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.