ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೈಮಗ್ಗ ಪದಾರ್ಥ ಮೀಸಲಾತಿ ಕಾನೂನು ಜಾರಿಗೆ ಆಗ್ರಹ

Vishwanath S
Updated On : 13 Jan 2014, 1:06 am

ಕನ್ನಡಪ್ರಭ ವಾರ್ತೆ, ಹಾಸನ, ಜ.12
ಕೈಮಗ್ಗ ಪದಾರ್ಥಗಳ ಮೀಸಲಾತಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ದೇಸಿ ಹಾಗೂ ಚರಕ ಸಂಸ್ಥೆಗಳ ಕಾರ್ಯಕರ್ತ, ಕನ್ನಡದ ಲೇಖಕ ಮತ್ತು ರಂಗನಿರ್ದೇಶಕ  ಪ್ರಸನ್ನ ಆಗ್ರಹಿಸಿದರು.
ನಗರದ ಸಂಸ್ಕೃತಂ ಭವನದಲ್ಲಿ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕೈಮಗ್ಗ ನೇಕಾರಿಕೆಯನ್ನು ಉಳಿಸಿ ರಾಷ್ಟ್ರೀಯ ಆಂದೋಲನ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಪ್ರಸ್ತುತ  ಕೈಮಗ್ಗವು ಸಾಯುತ್ತಿರುವ ಉದ್ದಿಮೆ ಎಂಬ ತಪ್ಪು ಕಲ್ಪನೆಯು ನಮ್ಮ ದೇಶದಲ್ಲಿ ಮನೆ ಮಾಡಿದೆ ಎಂದರು.
ಇದೇ ರೀತಿ ಪಾರಂಪರಿಕ ಬೇಸಾಯ ಪದ್ಧತಿ, ಹೈನುಗಾರಿಕೆ ಹಾಗೂ ಕುಶಲಕರ್ಮದ ಬಗ್ಗೆಯೂ ಮಾತು ಕೇಳಿ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಿವಿಮಾತು: ಕೈಮಗ್ಗವು ಒಂದು ಯಂತ್ರ, ನೂಲು ತೆಗೆಯುವ ತಕಲಿಯೂ ಸಹ ಒಂದು ಯಂತ್ರ ಎಂದು ಗಾಂಧೀಜಿಯವರು ಹೇಳುತ್ತಿದ್ದರು. ಮಾನವ ಸಭ್ಯತೆಯ ಸೃಜಿಸಿದ ಅತ್ಯಂತ ಅಸಾಧಾರಣ ಯಂತ್ರ. ಸ್ವಯಂಚಾಲಿತ ಯಂತ್ರಗಳ ವಿರುದ್ಧ ಈ ಭವ್ಯ ಕೈಯಂತ್ರವನ್ನು ನಿಲ್ಲಿಸಲಾಗಿತ್ತು. ಕೈಮಗ್ಗ ಗಂಡಸರಿಗೆ ಸೀಮಿತವಾದ ಉದ್ದಿಮೆಯೆಂದು ತಪ್ಪುಕಲ್ಪನೆ. ನೇಕಾರಿಕೆ ಮಾಡದ ಜನಾಂಗವೇ ದೇಶದಲ್ಲಿ ಇಲ್ಲ. ಬ್ರಾಹ್ಮಣರಿಂದ ಹಿಡಿದು ದಲಿತರು, ಮುಸಲ್ಮಾನರು, ಕ್ರೈಸ್ತರವರೆಗೂ ಎಲ್ಲಾ ಜನಾಂದವರಲ್ಲೂ ಇದ್ದಾರೆ ಎಂದು ಅವರು ಹೇಳಿದರು.
ಉದ್ದಿಮೆಯಲ್ಲಿ ನಿರತ: 2009-10ರ ಕೈಮಗ್ಗ ಸರ್ವೇಕ್ಷಣೆ ಪ್ರಕಾರ ನೇಕಾರಿಕೆಯಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆ ಶೇ. 78, ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನರ ಸಂಖ್ಯೆ 28, ಹಿಂದುಳಿದ ವರ್ಗಕ್ಕೆ ಸೇರಿದ ಬಡವರ ಸಂಖ್ಯೆ 45. 43 ಲಕ್ಷ. ಈಗಲೂ ಕೈಮಗ್ಗ ನೇಕಾರಿಕೆಯ ಉದ್ದಿಮೆಯಲ್ಲಿ ನಿರತರಾಗಿದ್ದಾರೆ ಎಂದರು.
ಸಲಹೆ: ನಮ್ಮ ದೇಶದ ಕೈಮಗ್ಗ ಸಂಖ್ಯೆ 24 ಲಕ್ಷ ಇದೆ. ಕೈಮಗ್ಗ ದೇಶದ ಮಹತ್ವದ ರಾಷ್ಟ್ರೀಯ ಸಂಪತ್ತಾಗಿದೆ. ಸಮರ್ಥವಾಗಿ ದುಡಿಸಿಕೊಂಡರೆ ಭಾರತವು ಆರ್ಥಿಕ ಪ್ರಗತಿ ಹೊಂದಲು ಸಾಧ್ಯವಿದೆ. ಪರಿಸರವನ್ನು ಹಾಳುಗೆಡವದೇ, ಹಳ್ಳಿಗಾಡನ್ನು ಬರಡಾಗಿಸದೆ, ಶ್ರೀಮಂತ-ಬಡವ ಎಂಬ ಭೇದವನ್ನು ಹೆಚ್ಚು ಮಾಡದೆ ಆರ್ಥಿಕ ಪ್ರಗತಿಯನ್ನು ಸಾಧಿಸುವುದು ಕೈಮಗ್ಗ ಉದ್ದಿಮೆಯಿಂದ ಸಾಧ್ಯವಿದೆ ಎಂದು ಸಲಹೆ ನೀಡಿದರು.
ಆತಂಕ: ಅಧಿಕಾರಿಗಳು ಗ್ರಾಮೀಣ ನೇಕಾರಿಕೆ ಕ್ಷೇತ್ರಗಳಲ್ಲಿ ಮನೆ ಮನೆಗೆ ಹೋಗಿ ಕೈಮಗ್ಗ ನೇಕಾರಿಕೆಯನ್ನು ತೊರೆದು ವಿದ್ಯುತ್ ಮಗ್ಗ ಹಾಕಿ ಎಂದು ದುಡ್ಡಿನ ಆಮಿಷ ಒಡ್ಡುತ್ತಿದ್ದಾರೆ. ನಮ್ಮ ಕರ್ನಾಟಕದ ಸಾಂಸ್ಕತಿಕ ಹೆಮ್ಮೆಯ ಸಂಕೇತವಾದ ಇಳಕಲ್ಲಿನ ಸೀರೆ, ಮೇಲುಕೋಟೆಯ ಪಂಚೆ, ಉಡುಪಿಯ ಅಂಗವಸ್ತ್ರ, ಚಳಕೆರೆ ಕಂಬಳಿ ಹೆಚ್ಚು ಕಡಿಮೆ ನಾಶವಾಗಿದೆ. ಆ ಸ್ಥಳದಲ್ಲಿ ವಿದ್ಯುತ್ ಮಗ್ಗಗಳ ಕಲಬೆರಕೆ ಸೀರೆ, ಪಂಚೆ, ಸಿಂಥೆಟಿಕ್ ಹಾಗೂ ರಗ್ಗುಗಳು ಆಕ್ರಮಿಸಿಕೊಂಡಿದೆ. ಸರ್ಕಾರಗಳು, ಸರ್ಕಾರಿ ಅಧಿಕಾರಿಗಳು ಮಾಡುತ್ತಿರುವ ಕೆಲಸ ತದ್ವಿರುದ್ಧವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಕ್ರೋಶ: ಈಗ ಕಲಬೆರಕೆದಾರರು ಈ ದೇಶದ ಕಾನೂನನ್ನೇ ತಿದ್ದಲು ಹಾಗೂ ಕೈಮಗ್ಗ ಮೀಸಲಾತಿ ಅಧಿನಿಯಮವನ್ನೇ ಬದಲಾಯಿಸಲು ಹೊರಟಿದ್ದಾರೆ ಎಂದು ವಿಷಾದಿಸಿದ ಅವರು, ಕಲಬೆರಕೆ ಕೈಮಗ್ಗದ ಬಟ್ಟೆಯೆಂದು ಘೋಷಿಸುವ ಕಾನೂನೊಂದನ್ನು ಜಾರಿಗೊಳಿಸುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತ್ಯಾಗ್ರಹ: ಈ ದೇಶದ ಮಹಾನ್ ಗ್ರಾಮೀಣ ಉದ್ದಿಮೆಯಾದ ನೇಕಾರಿಕೆಯನ್ನು ವಿನಾಶದ ಅಂಚಿಗೆ ತಳ್ಳಿರುವ ಯಾಂತ್ರೀಕರಣ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಎಂಬ ಬೇಡಿಕೆಯನ್ನಿಟ್ಟು ಸತ್ಯಾಗ್ರಹ ನಡೆಸಲಾಗುವುದು. ಜ. 1ರಿಂದ 15ರವರೆಗೂ ಜನಸಂಪರ್ಕ ಸಭೆ, ಜ. 15ರಿಂದ 30ರ ವರೆಗೂ ಬನಶಂಕರಿ ಪಾದಯಾತ್ರೆ ನಡೆಸಲಾಗುವುದು. ಜ. 30ರ ಗುರುವಾರದಿಂದ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು, ಹೆಗ್ಗೋಡು ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಹೇಳಿದರು.
ಒತ್ತಾಯ: ಕೈಮಗ್ಗ ಉದ್ದಿಮೆಯ ಯಂತ್ರೀಕರಣ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ.
ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ವಿದ್ಯುತ್ ಮಗ್ಗಗಳನ್ನು ಅಳವಡಿಸುವ ಕಾರ್ಯಕ್ರಮ ಸ್ಥಗಿತಗೊಳಿಸಬೇಕು. ಕೈಮಗ್ಗ ಪದಾರ್ಥಗಳ ಮೀಸಲಾತಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ತಪ್ಪಾಗಿ ಅಳವಡಿಸಲಾಗಿರುವ ವಿದ್ಯುತ್ ಮಗ್ಗಗಳಿಂದ ಕಾರ್ಮಿಕರು ಬೀದಿ ಪಾಲಾಗುವುದನ್ನು ತಪ್ಪಿಸಿ ಮೀಸಲಾಗಿರುವ ಇತರೆ ಬಟ್ಟೆಗಳ ನೇಯ್ಗೆ ಮಾಡಿ.
ನೆನೆಗುದಿಗೆ ಬಿದ್ದಿರುವ ನಾನಾ ಕೈಮಗ್ಗ ಯೋಜನೆಗಳು ಗ್ರಾಮೀಣ ಫಲಾನುಭವಿಗಳಿಗೆ ತಲುಪುವಂತೆ ಸರ್ಕಾರಿ ವ್ಯವಸ್ಥೆಯನ್ನು ಚುರುಕುಗೊಳಿಸುವಂತೆ ಒತ್ತಾಯಿಸಲಾಗುವುದು.
ಸಭೆಯಲ್ಲಿ ಸಾಹಿತಿ ಜ.ಹೊ. ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಗೊರೂರು ಶಿವೇಶ್, ಖಾದ್ರಿ ಶೆಟ್ರು ಇತರರು ಇದ್ದರು. ಕಾರ್ಯಕ್ರಮದ ಸ್ವಾಗತವನ್ನು ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಜಿ.ಆರ್. ಮಂಜೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement