ಕೊಳಚೆ ಮುಕ್ತ ರಸ್ತೆ ಬೇಕು
ಚನ್ನರಾಯಪಟ್ಟಣ: ಪಟ್ಟಣದ ಹೃದಯ ಸ್ಥಳವಾದ ರಾಷ್ಟ್ರೀಯ ಹೆದ್ದಾರಿಯ ಧನಲಕ್ಷ್ಮಿ ಚಿತ್ರಮಂದಿರದ ಗಂಗಾಧೇಶ್ವರ ಪೆಟ್ರೋಲ್ ಬಂಕ್ ಎದುರು ಸುಮಾರು 300 ಮೀಟರ್ ರಸ್ತೆ ಗಲೀಜು ನೀರಿನಿಂದ ಸುತ್ತುವರಿದು ಕ್ರಿಮಿಕೀಟಗಳ ವಾಸ ಸ್ಥಳವಾಗಿದೆ. ಇಲ್ಲಿರುವ ಯುಜಿಡಿ ಹಾಳಾಗಿ ರಸ್ತೆಗೆ ಹರಿಯುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ 3 ತಿಂಗಳಿಂದಾಗಿದೆ. ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ನೀರು ಪಾದಾಚಾರಿಗಳಿಗೆ ತಗುಲಿ ಗಲೀಜು ಆಗುತ್ತಿದೆ. ಓಡಾಡಲು ಅಸಾಧ್ಯವಾಗುತ್ತದೆ ಚನ್ನರಾಯಪಟ್ಟಣ ತಾಲೂಕು ವಿಶ್ವ ವಿಖ್ಯಾತ ಗೊಮಟೇಶ್ವರ ಮೂರ್ತಿ ಇರುವ ಶ್ರವಣಬೆಳಗೊಳ ಕ್ಷೇತ್ರವನ್ನು ಹೊಂದಿದೆ. ಇಲ್ಲಿಗೆ, ಹೋಗುವ ಪ್ರವಾಸಿಗರು ಚನ್ನರಾಯಪಟ್ಟಣದ ಮೂಲಕವೇ ಹಾದು ಹೋಗಬೇಕಿದ್ದು, ಇವರಿಗೆ ನಿತ್ಯವೂ ಈ ಕೊಳಕಿನ ದರ್ಶನವಾಗುತ್ತಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಉಪವಿಭಾಗಕ್ಕೆ ಹೇಮಾವತಿ ನೀರಾವರಿ ಇಲಾಖೆ ಈ ಬಗ್ಗೆ ಪತ್ರ ಬರೆದಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
-ರಾಜೇಶ್, ತಿರುಮಲ್ಲೇಶ್, ವೆಂಕಟೇಗೌಡ
ಮೂಲಭೂತ ಸೌಕರ್ಯ ನೀಡಿ
ಹಾಸನ: ತಾಲೂಕು ಶಾಂತಿಗ್ರಾಮದ ಹೋಬಳಿ ಸಾತೇನಹಳ್ಳಿ, ಶೆಟ್ಟಿಹಳ್ಳಿ ಗ್ರಾಮಕ್ಕೆ ಸರ್ಕಾರದ ಯಾವುದೇ ಸೌಕರ್ಯ ಇಲ್ಲ. ಈ ಗ್ರಾಮಕ್ಕೆ ಹತ್ತಿರ ಇರುವ ಕಾರ್ಖಾನೆಗಳು, ಗಾರ್ಮೆಂಟ್ಸ್ ಹತ್ತಿರವಿದ್ದು, ತಿರುಗಾಡಲು ತೀವ್ರ ತೊಂದರೆಯಾಗಿದೆ. ನಾವು ಸರ್ಕಾರಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಿ, ಸಮಸ್ಯೆಗಳನ್ನು ಹೇಳಿಕೊಂಡರೂ ಯಾವ ಅಧಿಕಾರಿಯೂ ಬಂದು ನೋಡಿಲ್ಲ. ನಮ್ಮ ಹಳ್ಳಿಗೆ ಶಾಸಕರು ಎಲೆಕ್ಷನ್ ಬಂದಾಗ ಮಾತ್ರ ಬಂದು ಆಶ್ವಾಸನೆ ಕೊಡುತ್ತಾರೆ. ಮುಗಿದ ಮೇಲೆ ನೀವು ಯಾರು ಎಂದು ಮಾತನಾಡುವುದಿಲ್ಲ. ಆದರೆ, ನಾವು ಗ್ರಾಮ ಪಂಚಾಯ್ತಿ ಸದಸ್ಯರು ಗ್ರಾಮ ಪಂಚಾಯ್ತಿಗೆ ನಮ್ಮ ಗ್ರಾಮಕ್ಕೆ ತೊಂದರೆಯಾಗಿರುವ ರಸ್ತೆ, ಶೌಚಾಲಯ, ಜನತಾ ಮನೆ, ವಿದ್ಯುತ್ ಇಲ್ಲದೆ ತೀವ್ರ ತೊಂದರೆಯಾಗಿದೆ. ರೈತರ ಹೊಲಗದ್ದೆಗಳಿಗೆ ಹೋಗಲು ರಸ್ತೆ ಇಲ್ಲದೇ ತೀವ್ರ ತೊಂದರೆಯಾಗಿದೆ. ಪ್ರತಿ ತಿಂಗಳು ಗ್ರಾಪಂ ಬರೆದುಕೊಟ್ಟರೂ ಯಾವ ಕೆಲಸವೂ ಆಗುತ್ತಿಲ್ಲ. ಯಾವುದಾದರೂ ಕೆರೆ ಹೂಳೆತ್ತುವುದಾದರೆ ಗ್ರಾಪಂ ಸದಸ್ಯರಿಗೆ ತಿಳಿಸದೆ ಬೇರೆ ಅಂದರೆ ನೆರೆಹೊರೆಯವರಿಗೆ ಕೆಲಸ ಕೊಡುತ್ತಾರೆ. ಗ್ರಾಪಂ ಸದಸ್ಯರಿಗೆ ಯಾವ ಬೆಲೆಯೂ ಇಲ್ಲ. ಆದ್ದರಿಂದ, ನಮ್ಮ ಗ್ರಾಮಕ್ಕೆ ಯಾವ ಕೆಲಸ ಬಂದರೂ ಸದಸ್ಯರಿಗೆ ಕೊಡಬೇಕೆಂದು ಮನವಿ ಮಾಡಿಕೊಂಡರೂ ಕೊಡುವುದಿಲ್ಲ. ಎಲ್ಲಾ ಕೆಲಸ ಕಾರ್ಯಗಳನ್ನು ಕೂಡಲೇ ನೆರವೇರಿಸಿಕೊಡದೇ ಹೋದವರು ನಮ್ಮ ಗ್ರಾಮದವರೆಲ್ಲರೂ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಿದ್ದೇವೆ.
- ಕಮಲಮ್ಮ, ಗ್ರಾಪಂ ಸದಸ್ಯರು, ಗೋಪಾಲಸ್ವಾಮಿ, ಸಾತೇನಹಳ್ಳಿ, ಹಾಸನ ತಾಲೂಕು
ಶಾಖಾಧಿಕಾರಿ ವರ್ಗಾವಣೆ ಮಾಡಿ
ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಮಲಸಾವರ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದರೂ ಸಂಬಂಧಪಟ್ಟ ಯಾವ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಉಡಾಫೆಯಿಂದ ಮಾತನಾಡುತ್ತಾರೆ. ವಿದ್ಯುತ್ ತಂತಿ ತುಂಡಾಗಿರುವುದರಿಂದ ಹೋಬಳಿಗೆ ವಿದ್ಯುತ್ ಸ್ಥಗಿತವಾಗಿದೆ. ಯಾರನ್ನೇ ಪ್ರಶ್ನಿಸಿದರೂ ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ. ಸೆಸ್ಕ್ನ ಅರೇಹಳ್ಳಿ ಶಾಖಾಧಿಕಾರಿಗೆ ವರ್ಗಾವಣೆಯಾಗಿತ್ತು. ಆದರೆ ಆತ ರಾಜಕಾರಣಿಗಳಿಗೆ ಲಂಚ ನೀಡಿ, ಇಲ್ಲಿಯೇ ಇದ್ದಾನೆ. ಬೇಲೂರು ತಾಲೂಕು ವಿದ್ಯುತ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರೇಹಳ್ಳಿಯಲ್ಲಿ ಶಾಖಾಧಿಕಾರಿಗಳು ಆಗಿದ್ದರೂ, ಅವರು ಬಿಕ್ಕೋಡು ಹೋಬಳಿಯಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಹೋದರೆ ರು. 5 ಸಾವಿರದಿಂದ ರು. 10 ಸಾವಿರ ಪಡೆಯುತ್ತಾರೆ. ಇಂತಹವರನ್ನು ಮೊದಲು ವರ್ಗಾವಣೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಕಾರ್ಯಪಾಲಕ ಎಂಜಿನಿಯರ್, ಜಿಲ್ಲಾ ಉಸ್ತುವಾರಿ ಸಚಿವರು, ಇಂಧನ ಸಚಿವರು, ಇತ್ತ ಗಮನಹರಿಸಿ ಶಾಖಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
- ಕೆ.ಎಸ್. ತೀರ್ಥಪ್ಪ, ಸಮಾಜ ಸೇವಕ, ಬಿಕ್ಕೋಡು ಹೋಬಳಿ, ಬೇಲೂರು
ಉತ್ತಮ ರಸ್ತೆ ಮಾಡಿಸಿ
ಸಕಲೇಶಪುರ: ತಾಲೂಕು ಹೆತ್ತೂರು ಗ್ರಾಮದ ರಸ್ತೆಗಳು ಹೊಂಡದಿಂದ ತುಂಬಿಹೋಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೋಬಳಿ ಕೇಂದ್ರವಾದ ಹೆತ್ತೂರು ಗ್ರಾಮದಲ್ಲಿ ಸುಮಾರು 600 ಕ್ಕೂ ಅಧಿಕ ಮನೆಗಳಿದ್ದು 2,500 ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ಈ ಗ್ರಾಮ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಗ್ರಾಮದ ಬಹುತೇಕ ರಸ್ತೆಗಳು ಗುಂಡಿಬಿದ್ದಿದ್ದು ಜಲ್ಲಿ ಎದ್ದಿರುವ ರಸ್ತೆಗಳಲ್ಲಿ ಜನರು ಪ್ರಾಯಸದಿಂದ ಸಂಚರಿಸಬೇಕಿದೆ. ಹೆತ್ತೂರು ಗ್ರಾಮದಿಂದ ಕಿರ್ಕಳ್ಳಿ, ಹಾಡ್ಲಹಳ್ಳಿ, ವಳ್ಳಲಹಳ್ಳಿ ಸಂಪರ್ಕ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿದ್ದು ರಸ್ತೆಯ ದುಸ್ಥಿತಿಯಿಂದ ಕೂಡಿವೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬಹತೇಕವು ಇಂದಿಗೂ ಮಣ್ಣಿನ ರಸ್ತೆಗಳಾಗಿದ್ದರೆ ಕೆಲವು ರಸ್ತೆಗಳಿಗೆ ದಶಕಗಳ ಹಿಂದೆ ಜಲ್ಲಿ ಹಾಕಲಾಗಿದೆ. ಹೀಗೆ, ಹಾಕಿರುವ ಜಲ್ಲಿ ರಸ್ತೆಯ ಮೇಲೆದ್ದಿವೆ. ಈ ಗ್ರಾಮದಲ್ಲಿ ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು ಹಾಗೂ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಸೇರಿದಂತೆ ಪ್ರಮುಖ ಪಕ್ಷಗಳ ಘಾಟಾನುಘಟಿ ನಾಯಕರಿದ್ದರೂ ಗ್ರಾಮದ ರಸ್ತೆಗಳ ದುರಸ್ತಿ ಅಸಾಧ್ಯವಾಗಿದೆ. ಕಳೆದ 5 ವರ್ಷಗಳ ಹಿಂದೆ ಸುವರ್ಣ ಗ್ರಾಮ ಯೋಜನೆಗೆ ಈ ಗ್ರಾಮವನ್ನು ಆಯ್ಕೆ ಮಾಡಲಾಯಿತಾದರೂ ಗ್ರಾಮದಲ್ಲಿ ಆಯ್ದ ಕೆಲವು ರಸ್ತೆಗಳು ಮಾತ್ರ ಸಿಮೆಂಟ್ ರಸ್ತೆಗಳಾಗಿ ಪರಿವರ್ತನೆಯಾಗಿದ್ದನ್ನು ಹೊರತು ಪಡಿಸಿದರೆ, ಇದುವರೆಗೆ ಯಾವುದೇ ರಸ್ತೆಗಳು ಡಾಂಬರ್ ಸಹ ಕಂಡಿಲ್ಲ. ಈ ಬಗ್ಗೆ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ ಫಲವಾಗಿ ಇತ್ತೀಚೆಗೆ ಶಾಸಕ ಎಚ್.ಕೆ ಕುಮಾರ ಸ್ವಾಮಿ ಅವರು ತಮ ಅನುದಾನದಲ್ಲಿ ಗ್ರಾಮದ 600 ಮೀ. ರಸ್ತೆ ದುರಸ್ತಿಗಾಗಿ ನಾಲ್ಕು ಲಕ್ಷ ಬಿಡುಗಡೆ ಮಾಡಿ ವರ್ಷ ಕಳೆಯುತ್ತಿದ್ದರೂ ಈ ರಸ್ತೆ ದುರಸ್ತಿಗೆ ಯಾವುದೇ ಗುತ್ತಿಗೆದಾರರೂ ಮುಂದೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಹೊಂಡಗಳ ಮಧ್ಯೆ ಜನ ಸಂಚರಿಸವಂತಾಗಿದೆ. ಇದರಿಂದಾಗಿ ಜನತೆ ನಿತ್ಯ ಹಿಡಿಶಾಪ ಹಾಕುತ್ತ ಸಂಚರಿಸುತ್ತಿದ್ದರೆ, ಕೆಲವು ಜನರು ಬೈಕ್ನಲ್ಲಿ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ. ಇನ್ನಾದರು ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು.
- ರಾಕೇಶ್, ಹಾಡ್ಲಹಳ್ಳಿ ಗ್ರಾಮ, ಟಿ ಚಂದ್ರಶೇಖರ್, ಹೆತ್ತೂರು ಗ್ರಾಮಸ್ಥ.