ಕೋಡಿಮಠ ಶ್ರೀ ಆಶೀರ್ವಾದ ಪಡೆದ ಬಿದರಿ
ಕ.ಪ್ರ.ವಾರ್ತೆ , ಅರಸೀಕೆರೆ , ಜ. 12
ರಾಷ್ಟ್ರೀಯ ಬಿಜೆಪಿ ಸೇರಿದಂತೆ ಉತ್ತರ ಭಾರತದ ಅನೇಕ ಪ್ರಾದೇಶಿಕ ಪಕ್ಷಗಳಿಂದ ತಮಗೆ ಆಹ್ವಾನ ಬರುತ್ತಿದ್ದು, ಒಂದು ವಾರದೊಳಗೆ ತಮ್ಮ ರಾಜಕೀಯ ಹಿತೈಷಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಹೇಳಿದ್ದಾರೆ.
ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠಕ್ಕೆ ಶನಿವಾರ ಕುಟುಂಬ ಸಮೇತರಾಗಿ ಆಗಮಿಸಿದ್ದ ಬಿದರಿ ಮಾತನಾಡಿ, ತಾವು ಪೊಲೀಸ್ ವರಿಷ್ಠಾಧಿಕಾರಿ ಸ್ಥಾನದಿಂದ ನಿವೃತ್ತಿ ಹೊಂದಿದ ಮೇಲೆ ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಜನಸೇವೆ ಮಾಡುವ ದೃಷ್ಟಿಯಿಂದ ರಾಜಕೀಯ ಕ್ಷೇತ್ರವನ್ನು ತಾವು ಪ್ರವೇಶಿಸಿದ್ದು, ಈಗಾಗಲೇ ಕಾಲ ವಿಳಂಬವಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಆದ್ದರಿಂದ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳ ಸಭೆಯನ್ನು ಶೀಘ್ರವೇ ಕರೆದು ಅವರೊಂದಿಗೆ ಮುಕ್ತ ಸಮಾಲೋಚನೆ ನಡೆಸುವ ಮೂಲಕ ಒಳ್ಳೆಯ ನಿರ್ಧಾರವನ್ನು ತಾವು ಕೈಗೊಳ್ಳುವುದಾಗಿ ಹೇಳಿದರು.
ಜನಸ್ಪಂದನೆ ಮೇಲೆ ನಿರ್ಧಾರ: ರಾಜ್ಯ ಬಿಜೆಪಿ ಸೇರಿದಂತೆ ಉತ್ತರ ಭಾರತದ ಅನೇಕ ಪ್ರಾದೇಶಿಕ ಪಕ್ಷಗಳಿಂದ ತಮಗೆ ಆಮಂತ್ರಣವಿದೆ ಎಂದ ಅವರು, ರಾಜ್ಯದಲ್ಲಿ ಸ್ವತಂತ್ರ ಪಕ್ಷವನ್ನು ಕಟ್ಟುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿ, ಅಂತಹ ನಿರ್ಧಾರಕ್ಕೆ ಸಾಕಷ್ಟು ಕಾಲ ವಿಳಂಬವಾಗಿದೆ. ಆದರೂ ಜನರು ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ತಮ್ಮ ಮುಂದಿನ ರಾಜಕೀಯ ನಡೆಯನ್ನು ಒಂದು ವಾರದೊಳಗೆ ತೀರ್ಮಾನಿಸುವುದಾಗಿ ತಿಳಿಸಿದರು. ನಂತರ ಅವರು ಕುಟುಂಬ ಸಮೇತರಾಗಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದರು.