'ಬದಲಾವಣೆಗೆ ಹೊಂದಿಕೊಳ್ಳುವ ತಳಿ ಉತ್ತಮ'
ಕ.ಪ್ರ.ವಾರ್ತೆ , ಸಕಲೇಶಪುರ , ಜ.12
ಕೃಷಿಯಲ್ಲಿ ಬದಲಾವಣೆಗಳಿಗೆ ಹೊಂದಿಕೊಳ್ಳುವ ತಳಿ ಮತ್ತು ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಮಳಲಿ ಗ್ರಾಮದಲ್ಲಿ ಆದಿಶಕ್ತಿ ರೈತಶಕ್ತಿ ಗುಂಪು ಮತ್ತು ಕೃಷಿ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ಬತ್ತದ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಹೆಚ್ಚಿನ ಇಳುವರಿ: ಸಾವಯವ ಕೃಷಿ ಬಗ್ಗೆ ರೈತರು ಹೆಚ್ಚಿನ ಆಸಕ್ತಿ ತೋರಿಸಬೇಕು ಮತ್ತು ಯಾಂತ್ರೀಕರಣದಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯ ಎಂದರು. ಬತ್ತದ ರಾಶಿ ಪೂಜೆ ಮೂಲಕ ಮಾಡಿದ ಉದ್ಘಾಟನೆ ಎಲ್ಲರ ಗಮನ ಸೆಳೆಯಿತು.
ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜು ಮಾತನಾಡಿ, ಕೃಷಿ ಇಲಾಖೆ ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಬತ್ತದ ಇಳುವರಿ ಪಡೆದ ಮೂರು ರೈತರನ್ನು ಗುರುತಿಸಿ ರು. 30000 ಬಹುಮಾನ ನೀಡುತ್ತಿದೆ ಎಂದರು. ಅಧಿಕ ಇಳುವರಿ ತಳಿ, ಲಘು ಪೋಷಕಾಂಶಗಳ ಬಳಕೆ ಮತ್ತು ಯಂತ್ರನಾಟಿ ಮಾಡುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ಬತ್ತದ ಇಳುವರಿಯೇ ಹೆಚ್ಚು: ಯಂತ್ರನಾಟಿ ಮತ್ತು ಲಘು ಪೋಷಕಾಂಶಗಳ ಬಳಕೆಯಿಂದ ಎಕರೆಗೆ ಸರಾಸರಿ 22 ಕ್ವಿಂಟಾಲ್ ಇಳುವರಿ ತೆಗೆದಿದ್ದೇವೆ ಎಂದು ಗ್ರಾಮದ ನಂಜಪ್ಪ ಹೇಳಿದರು. ಆದರೆ ಹಿಂದಿನ ಪದ್ಧತಿಯಲ್ಲಿ 15-16 ಕ್ವಿಂಟಾಲ್ ಬತ್ತದ ಇಳುವರಿಯೇ ಹೆಚ್ಚಿನದಾಗಿತ್ತು ಎಂದರು.
ಎಪಿಎಂಸಿ ನಿರ್ದೇಶಕ ಕೊಲ್ಲಹಳ್ಳಿ ಸಲೀಂ ಮಾತನಾಡಿ, ಪ್ರತಿ ಗ್ರಾಮಮಟ್ಟದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ಚಿಂತಿಸಬೇಕು ಎಂದರು.
ಪ್ರಗತಿ ಸಾಧ್ಯ: ಕೃಷಿಕ ಸಮಾಜದ ಅಧ್ಯಕ್ಷ ಹೆತ್ತೂರು ದೇವರಾಜು ಮಾತನಾಡಿ ರೈತರು, ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡಂತೆ ಗ್ರಾಮ ಮಟ್ಟದಲ್ಲಿ ತಂಡಗಳು ರಚನೆಯಾದರೆ ಕೃಷಿಯನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು.
ಫಲವತ್ತತೆ ಹೆಚ್ಚು: ಕಾರ್ಯಕ್ರಮದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಸಹಾಯಕ ಕೃಷಿ ನಿರ್ದೇಶಕ ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಅವರು ಮಾತನಾಡಿ ಡೋಲಮೈಟ್ ಬಳಕೆ ಜೊತೆಗೆ ಬೇಸಿಗೆಯಲ್ಲಿ ಹಸಿರೆಲೆ ಗೊಬ್ಬರವಾಗಿ ಸೆಣಬು, ಡಯಾಂಚಾ ಬೆಳೆದು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಸುಲೋಚನಾ, ತಾ.ಪಂ. ಉಪಾದ್ಯಕ್ಷೆ ವೇದಾವತಿ, ಮಳಲಿ ಗ್ರಾಪಂ ಅಧ್ಯಕ್ಷ ರಘು, ಸದಸ್ಯ ಚಂದ್ರಶೇಖರ್, ರೂಪ, ಮಂಜುಳ, ಅನುವುಗಾರ ಶಾಚಿತ, ಮಳಲಿ ಮತ್ತು ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು. ಕಣಷಿ ಅಧಿಕಾರಿ ಶ್ರೀನಿವಾಸ ಸ್ವಾಗತಿಸಿ ವಂದಿಸಿದರು.