ಸಮಸ್ಯೆಗೆ ಶಾಶ್ವತ ನೀರಾವರಿಯೇ ಪರಿಹಾರ
ಕನ್ನಡಪ್ರಭ ವಾರ್ತೆ, ಅರಸೀಕೆರೆ, ಜ. 12
ತಾಲೂಕಿನ ಅನೇಕ ಸಮಸ್ಯೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನವೇ ಮುಖ್ಯ ಪರಿಹಾರ ಮಾರ್ಗವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಸೇರಿ ಸಂಘಟಿತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಪ್ರಾಯಪಟ್ಟರು.
ವಿಷಾದ: ಪಟ್ಟಣದ ಸಮೀಪದ ಅಮರಗಿರಿ ಮಾಲೇಕಲ್ ತಿರುಪತಿಯಲ್ಲಿನ ವೈಕುಂಠ ಏಕಾದಶಿ ಧಾರ್ಮಿಕ ಸಮಾರಂಭಕ್ಕೆ ಶನಿವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಆಶ್ರಿತ ಪ್ರದೇಶವಾದ ಅರಸೀಕೆರೆ ತಾಲೂಕು ಸ್ವಾತಂತ್ರ ಬಂದು ಸುಮಾರು ಆರು ದಶಕಗಳು ಕಳೆದರೂ ಇಲ್ಲಿಗೆ ಯಾವುದೇ ನೀರಾವರಿ ಯೋಜನೆಯನ್ನು ತರುವಲ್ಲಿ ಈ ಕ್ಷೇತ್ರದ ಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸದ ಕಾರಣ ಇಂದು ಅನೇಕ ರೀತಿಯ ಸಮಸ್ಯೆಗಳನ್ನು ಇಲ್ಲಿನ ನಾಗರೀಕರು ಅನುಭವಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಪ್ರಾಮಾಣಿಕ ಹೋರಾಟ: ನೀರಾವರಿ ತಜ್ಞ ಪರಮಶಿವಯ್ಯ ಅವರ ನೇತ್ರಾವತಿ ನದಿನೀರು ತಿರುವು ಯೋಜನೆ ಮತ್ತು ಎತ್ತಿನ ಹೊಳೆ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಮಾತ್ರ ಈ ತಾಲೂಕಿನ ಕೆಲವು ಭಾಗಗಳಿಗೆ ನೀರಾವರಿ ಯೋಜನೆ ಕಲ್ಪಿಸಬಹುದಾಗಿದೆ. ಆದ್ದರಿಂದ ಈ ಬಗ್ಗೆ ಸಂಘಟಿತ ಹೋರಾಟ ನಡೆಸುವ ಮೂಲಕ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಹೋರಾಟ ನಡೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಗಣನೆಗೆ ತೆಗೆದುಕೊಳ್ಳಬೇಕು: ಕ್ಷೇತ್ರದ ಜನತೆ ಪಕ್ಷಾತೀತವಾಗಿ ಎಲ್ಲರೂ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಬೇಕಾದರೆ, ಅಲ್ಪಸಲ್ಪ ನಷ್ಟ ಸಂಭವಿಸುವುದು ಸಹಜ, ಆದರೆ ಆಗುವ ಪೂರ್ಣ ಪ್ರಮಾಣದ ಸಾರ್ವತ್ರಿಕ ಲಾಭಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಹೇಳಿದರು.
ಹೋರಾಟದ ನೆನಪು: ತಾವು 2003 ರಲ್ಲಿ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಚಿತ್ರಾನದಿಗೆ ಬಾಗೇಪಲ್ಲಿ ಸಮೀಪ ಪರಗೋಡು ಅಣೆಕಟ್ಟು ನಿರ್ಮಾಣಕ್ಕೆ ಅನೇಕ ಅಡ್ಡಿ ಆತಂಕಗಳು ಎದುರಾದವು.
ಆದರೂ, ತಾವು ಅಂಜದೇ ಸುಮಾರು 125 ಕಿ.ಮೀ ದೂರದವರೆಗೂ 3 ದಿನಗಳ ಪಾದಯಾತ್ರೆ ಕೈಗೊಂಡು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ಈ ಮೂರು ತಾಲೂಕಿನ ಸುಮಾರು 127 ಗ್ರಾಮಗಳಿಗೆ ಇಂದು ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ತಮ್ಮ ಹೋರಾಟದ ಅಂದಿನಗಳನ್ನು ಅವರು ಸ್ಮರಿಸಿದರು.
ಅರಸೀಕೆರೆ ತಾಲೂಕಿನ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪಕ್ಷಾತೀತವಾಗಿ ಸಂಘಟಿಸುವ ಹೋರಾಟಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದು ಶತಃಸಿದ್ಧ ಎಂದರು.