ಸಾಹಿತ್ಯ ಸಮ್ಮೇಳನದಲ್ಲಿ ಬಾ.ರಾ. ಸುಬ್ಬರಾಯರಿಗೆ ಆತ್ಮೀಯ ಸನ್ಮಾನ
ಹೊಳೆನರಸೀಪುರ: ಮಡಿಕೇರಿಯಲ್ಲಿ ಇತ್ತೀಚೆಗಷ್ಟೇ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಳೆನರಸೀಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಾ.ರಾ.ಸುಬ್ಬರಾಯ ಅವರನ್ನು ಸನ್ಮಾನಿಸಲಾಯಿತು.
ಸಾಹಿತ್ಯ ಸಮ್ಮೇಳನದಲ್ಲಿನ ಭಾರತೀಸುತ ವೇದಿಕೆಯಲ್ಲಿ ವಿವಿಧ ಸಂಘ- ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಕ್ರಿಯವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವಿರತವಾಗಿ ದುಡಿಯುತ್ತಿರುವ ಬಾ.ರಾ. ಸುಬ್ಬರಾಯ ಅವರನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರ ಅಧ್ಯಕ್ಷತೆಯಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ದೇ. ಜವರೇಗೌಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಶಿವಶಂಕರ ಮೂರ್ತಿ, ಬೆಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಎಂ. ನಾಗರಾಜ್ ಮೊದಲಾದವರು ಬಾ.ರಾ. ಸುಬ್ಬರಾಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
16ರಂದು ಹುಣ್ಣಿಮೆ ಕಾರ್ಯಕ್ರಮ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಜ.16 ರಂದು ಸಂಜೆ 6.30 ಕ್ಕೆ ಶ್ರೀ ಮಠದ ಆವರಣದಲ್ಲಿರುವ ನವನಾಥಯಾಗ ಮಂಟಪದಲ್ಲಿ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ. ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸುವರು. ಬೆಂಗಳೂರಿನ ಖ್ಯಾತ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭನ್ ಉಪನ್ಯಾಸ ನೀಡುವರು. ಹಾಸನದ ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶೈಲವಲ್ಲಭ ಭಜನಾ ಮಂಡಳಿ ಮತ್ತು ಶ್ರೀ ಶುಕ್ತಿ ಯೋಗ ಕೇಂದ್ರದ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ಇಂದು ಯುವ ಸಪ್ತಾಹ
ಹಾಸನ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಂಟಿಎಸ್ಎಸ್ ಯೂತ್ ಗ್ರೂಪ್, ಯುವಜನೇತರ, ಯುವಕ ಸಂಘ, ಮಹಿಳಾ ಸಮಾಜದ ಆಶ್ರಯದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 151ನೇ ಜನ್ಮ ದಿನಾಚರಣೆ ಪ್ರಯುಕ್ತ ಜ.13ರಂದು ಬೆಳಗ್ಗೆ 9ಕ್ಕೆ ನಗರದ ಯೂತ್ ಹಾಸ್ಟೆಲ್ನಲ್ಲಿ ಯುವ ಸಪ್ತಾಹ- ಯುವ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಪಂ ಅಧ್ಯಕ್ಷೆ ಅಂಬಿಕಾ ರಾಣ್ಣ ಉದ್ಘಾಟಿಸುವರು. ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಭಾರತ್ ಸ್ಕೌಟ್ಸ್ ಮತ್ತು ಗೌಡ್ಸ್ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ಭಾಗವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅವರೊಂದಿಗೆ ಯುವಜನರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವಮಾನವ ಒಕ್ಕೂಟದ ಅಧ್ಯಕ್ಷ ರವಿಕುಮಾರ್ ಅವರಿಂದ ವಿವೇಕಾನಂದರ ವಿಚಾರಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಕ್ತದಾನದ ಮಹತ್ವ ಬಗ್ಗೆ ಡಾ.ಪುರುಷೋತ್ತಮ್ ತಿಳಿಸಲಿದ್ದಾರೆ.
ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭದಲ್ಲಿ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎಚ್. ಶ್ರೀನಿವಾಸ್, ಕಾಂಗ್ರೆಸ್ಯುವ ಮುಖಂಡ ಎಚ್.ಕೆ.ಮಹೇಶ್, ಎನ್ವೈಕೆ ಸಲಹಾ ಸಮಿತಿ ಸದಸ್ಯ ಮಹೇಶ್, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಶೇಖರಪ್ಪ ಇತರರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಪರೀಕ್ಷಿತ್ ಕೆ. ನಾಯಕ್, ಡಿ.ಎ. ದೀಪ್ತಿಯಾಮಿನಿ, ಮಧು, ಮಂಜುನಾಥ್, ಪ್ರಕಾಶ್ ಅವರು ಸನ್ಮಾನಿತರಾಗಲಿದ್ದಾರೆ.
ಶಿಕ್ಷಕರ ಮೇಲೆ ಹಲ್ಲೆ: ಖಂಡನೆ
ಅರಸೀಕೆರೆ: ಚನ್ನರಾಯಪಟ್ಟಣದಲ್ಲಿ ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿ ವಿನಾಕಾರಣ ಶಿಕ್ಷಕರ ಮೇಲೆ ಮಾಡಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಅರಸೀಕೆರೆ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚನ್ನರಾಯಪಟ್ಟಣದ ಸರ್ಕಾರಿ ಫ್ರೌಢಶಾಲೆಯಲ್ಲಿ ಶನಿವಾರ 10ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಶಿಕ್ಷಕರಾದ ರವಿಕುಮಾರ್ ಎಂಬುವರ ಮೇಲೆ ಸಕಾರಣ ಇಲ್ಲದೆ ಹಲ್ಲೆ ಮಾಡಿರುತ್ತಾರೆ. ಅಲ್ಲದೇ, ವಿದ್ಯಾರ್ಥಿಗಳ ಪೋಷಕರು ಕೂಡ ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಈ ಘಟನೆಯಿಂದ ಶಿಕ್ಷಕರ ವೃಂದಕ್ಕೆ ಒಂದು ರೀತಿಯ ಮಾನಸಿಕ ಆಘಾತ ಉಂಟಾಗಿದೆ ಎಂದು ಹೇಳದ್ದಾರೆ.
ಶಿಕ್ಷಕರ ವರ್ಗಕ್ಕೆ ನೈತಿಕ ಬೆಂಬಲ ನೀಡುವ ನಿಟ್ಟನಲ್ಲಿ ತಕ್ಷಣ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ನ್ಯಾಯ ದೊರಕಿಸಬೇಕೆಂದು ಸಂಘದ ಪದಾಧಿಕಾರಿಗಳಾದ ಮೋತಿಲಾಲ್ ನಾಯ್ಕ್, ಷಡಾಕ್ಷರಯ್ಯ, ರಾಮಕೃಷ್ಣೇಗೌಡ, ಮಂಜೇಗೌಡ, ಮಲ್ಲೇಗೌಡ, ಜಗದೀಶ್, ನಿಜಗುಣ, ಧನಂಜಯಮೂರ್ತಿ, ಹಾಗೂ ಸಹ ಶಿಕ್ಷಕರ ಸಂಘದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾರಿನಲ್ಲಿ ಬಂದ ಅಪರಿಚಿತರ ಬಂಧನ
ರಾಮನಾಥಪುರ: ರಾಮನಾಥಪುರದ ಇಲ್ಲಿನ ಕಾವೇರಿ ನದಿ ಸೇತುವೆಯ ಸಮೀಪ ಇರುವ ಪೆಟ್ರೋಲ್ ಬಂಕ್ ಬಳಿ ಮಾರ್ಟಿಸ್ ಕಾರಿನಲ್ಲಿ (ಸಂಖ್ಯೆ: ಕೆಎ 12- ಎಂ8067) ಬಂದಿದ್ದ ಮೂವರು ಅಪರಿಚಿತ ವ್ಯಕ್ತಿಗಳು ಶನಿವಾರ ಬೆಳಿಗ್ಗೆ ಇಲ್ಲಿಗೆ ಆಗಮಿಸಿದ್ದಾಗ, ಕಾರು ನಿಲ್ಲಿಸಿ ತಮ್ಮ ಗೆಳೆಯನಿಗಾಗಿ ಕಾಯುತ್ತಿದ್ದರು.
ಅವರ ಚಲನವಲನಗಳು ಅನುಮಾಸ್ಪದ ಆಗಿತ್ತು.
ಇದನ್ನು ಗಮನಿಸಿದ ಕೊಣನೂರು ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಇವರು ಕೊಡಗಿನ ಕೂಡಿಗೆ ಹಾಗೂ ಕುಶಾಲನಗರದ ಗಣೇಶ್, ನವೀನ್ ಎಂದು ತಿಳಿದುಬಂದಿದೆ.
ಆದರೆ, ಇವರೊಂದಿಗೆ ಬಂದಿದ್ದ ಸಂಜು ಎಂಬಾತ ತಪ್ಪಿಸಿಕೊಂಡಿದ್ದಾನೆ.