ಇಂದು, ನಾಳೆ ಗುರುಸಿದ್ದರಾಮೇಶ್ವರ ಜಯಂತಿ
ಅರಸೀಕೆರೆ: 841ನೇ ಗುರುಸಿದ್ದರಾಮೇಶ್ವರ ಜಯಂತಿ ಜ.14 ಹಾಗೂ 15 ರಂದು ಕಡೂರಿನ ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿದ್ದು, ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮುರುಂಡಿ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹಾಗೂ ನೊಳಂಬ ವೀರಶೈವ ಸಮಾಜದ ಮುಖಂಡ ಸಂಕೋಡದಳ್ಳಿ ಎಸ್.ಟಿ. ವಿರುಪಾಕ್ಷಪ್ಪ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಆಗಮನ: ಜ.14ರ ಮಂಗಳವಾರ ಬೆಳಗ್ಗೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತ ಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹರಗುರು ಚರಮೂರ್ತಿಗಳು ಧಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜ.15ರ ಬುಧವಾರ ಸಮಾರೋಪ ಸಮಾರಂಭ ಜರುಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಹಲವು ಸಹೋದ್ಯೋಗಿಗಳು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನ್ಮಾನ: ಕನ್ನಡ ಸಾಹಿತ್ಯದ ಕವಿ ಎಂ.ಎಂ. ಕಲುಬುರ್ಗಿ ಹಾಗೂ ಹಿರಿಯ ನಾಡೋಜ ಪುರಸ್ಕತ ಶಿವಯೋಗಿ ಸಿದ್ದರಾಮ ಚರಿತೆ ಕೃತಿ ರಚಿಸಿರುವ ಮುಂಡರಗಿ ಮಠದ ಡಾ. ಅನ್ನದಾನೇಶ್ವರ ಮಹಾಶಿವಯೋಗಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿದ್ದರಾಮೇಶ್ವರ ಜಯಂತೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳಿಗೆ 2 ದಿನಗಳ ಅನ್ನ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ಸಿದ್ದರಾಮೇಶ್ವರರ ಕುರಿತು ನಾಟಕ ಪ್ರದರ್ಶನಗೊಳ್ಳಲಿದೆ ಎಂದ ಅವರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.