ಕವಳಿಕೆರೆ ಗ್ರಾಮದಲ್ಲಿ ಮಣ್ಣುಪರೀಕ್ಷೆ ಅರಿವು ಕಾರ್ಯಕ್ರಮ
ಹಾಸನ: ಕಂದಲಿಯ ಕೃಷಿ ವಿಜ್ಞಾನ ಕೆಂದ್ರ ವತಿಯಿಂದ ಇತ್ತೀಚೆಗೆ ಆಲೂರು ತಾಲೂಕಿನ ಕವಳಿಕೆರೆ ಗ್ರಾಮದಲ್ಲಿ ಮಣ್ಣು ಪರೀಕ್ಷೆ ಮತ್ತು ಅದರ ಮಹತ್ವ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನ ಕೆಂದ್ರದ ಮಣ್ಣು ವಿಜ್ಞಾನಿ ಡಾ. ಚನ್ನಕೇಶವ ಮಾತನಾಡಿ, ಆಧುನಿಕ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಕ್ಷೀಣಿಸುತ್ತಿದ್ದು, ಬೆಳೆಗಳಲ್ಲಿ ಇಳುವರಿ ಮತ್ತು ಗುಣಮಟ್ಟದ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ರೈತರಿಗೆ ಕರೆ: ರೈತರು ಸಮಗ್ರ ಕೃಷಿ ಪದ್ಧತಿಯಲ್ಲಿ ಸಾವಯವ ಗೊಬ್ಬರಗಳು, ಹಸಿರೆಲೆ ಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳನ್ನು ಬಳಸಿಕೊಂಡು ಮಣ್ಣು ಪರೀಕ್ಷೆ ಆಧಾರಿತ ಬೆಳೆಗಳಿಗೆ ಅನುಗುಣವಾಗಿ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಿ ಮಣ್ಣಿನ ಆರೋಗ್ಯವನ್ನು ಮತ್ತು ಅದರ ಉತ್ಪಾದಕತೆಯನ್ನು ಹೆಚ್ಚಿಸುವಂತೆ ರೈತರಿಗೆ ಕರೆ ನೀಡಿದರು.
ಪ್ರಾತ್ಯಕ್ಷಿಕೆ: ಇದೇ ಸಂದರ್ಭದಲ್ಲಿ ರೈತರಿಗೆ ಮಣ್ಣಿನ ಮಾದರಿ ತೆಗೆಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ಗ್ರಾಮದ ರುದ್ರೇಗೌಡರ ಜಮೀನಿನಲ್ಲಿ ತೋರಿಸಲಾಯಿತು.
ವಿಷಯ ತಜ್ಞ (ತೋಟಗಾರಿಕೆ) ಡಾ. ಟಿ.ಎಸ್. ಮಂಜುನಾಥಸ್ವಾಮಿ, ವಿಷಯ ತಜ್ಞ (ಕೃಷಿ ವಿಸ್ತರಣೆ), ಡಾ. ಹೆಚ್. ಕೆ. ಪಂಕಜ, ವಿಷಯ ತಜ್ಞ (ಕೃಷಿ ತಾಂತ್ರಿಕತೆ) ಡಾ. ಜಿ.ಎಸ್. ಕೃಷ್ಣಾರೆಡ್ಡಿ ಇದ್ದರು. ಡಾ.ಎ.ಸಿ. ಗಿರೀಶ್ ನಿರೂಪಿಸಿದರು. ಗ್ರಾಮದ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.