ಕಸದ ರಾಶಿ ತೆರವುಗೊಳಿಸಲು ಆಗ್ರಹ
ಕ.ಪ್ರ.ವಾರ್ತೆ , ಹಾಸನ , ಜ 13
ನಗರಸಭೆಯ ಹಿಂದೆ ಗಬ್ಬುನಾರುವ ಕೊಳಕು ಘನ ತ್ಯಾಜ್ಯ ವಸ್ತುವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ರಸ್ತೆ ತಡೆ ಮಾಡುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರ ಸಭೆಯ ಹಿಂಭಾಗ ಗೊರೂರು ರಸ್ತೆಯನ್ನು ತಡೆದು ಕೆಲ ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಆಕ್ರೋಶ ವ್ಯಕ್ತಪಡಿಸಿದರು.
ನಾಗರಿಕರಿಗೆ ತೊಂದರೆ: ನಗರದಲ್ಲಿ ಉತ್ಪತ್ತಿಯಾಗುವಂತಹ ಕರಗುವಂತಹ ಹಾಗೂ ಕರಗದಂತಹ ಕಸಗಳನ್ನು ಸಂಪೂರ್ಣವಾಗಿ ಸಂತೆಪೇಟೆಯ ನಗರಸಭೆಯ ಹಿಂಭಾಗದಲ್ಲಿ ರಾಶಿ ಹಾಕಲಾಗುತ್ತಿದೆ. ಈ ಜಾಗದಲ್ಲಿ ಕಸದ ರಾಶಿ ಶಿಖರದಂತೆ ಎದ್ದಿರುವುದರಿಂದ ಈ ಭಾಗದಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ.
ನಗರಸಭೆಯ ವತಿಯಿಂದ ನಗರದಲ್ಲಿ ಉತ್ಪತ್ತಿಯಾಗುವಂತ ಕಸವನ್ನು ಒಂದೆಡೆಯಾಕಲು ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದೆ. ಆದರೆ, ಆ ತೊಟ್ಟಿಯಲ್ಲಿ ಕಸ ಶೇಖರಣೆಯಾಗಿದೆ ತೊಟ್ಟಿ ಮುಂದೆಯೇ ಹರಡಿಕೊಂಡಿದೆ.
ಇದಕ್ಕೆ ಕಾರಣ ಕಸವನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡದ ಕಾರಣ ಕಸದ ಹರಡಿಕೊಂಡು ರಸ್ತೆಯಲ್ಲಿ ಬಿದ್ದು ಚೆಲ್ಲಾಡುತ್ತಿವೆ. ಇದರಿಂದ ಸಾರ್ವಜನಿಕರು ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಕ್ರೋಶ: ನಗರಸಭೆ ಹಿಂಭಾಗ ಗೊರೂರು ರಸ್ತೆ ಬಳಿ ಇರುವ ಪರ್ವತಕ್ಕಿಂತ ಮಿಗಿಲಾಗಿರುವ ಕಸದ ರಾಶಿಗೆ 35 ವಾರ್ಡ್‌ಗಳಿಂದ ಪ್ರತಿದಿನ ಸಂಗ್ರಹವಾಗುವ ಕಸವನ್ನು ಇಲ್ಲಿ ತಂದು ಸುರಿಯಲಾಗುತ್ತಿದೆ. ಕೊಳೆತು ನಾರುವ ತ್ಯಾಜ್ಯದಿಂದ ಇಲ್ಲಿನ ಸುತ್ತಮುತ್ತಲ ಜನರಿಗೆ ನಾನಾ ತರಹದ ಸಾಂಕ್ರಮಿಕ ರೋಗಗಳು ಉದ್ಭವಿಸುತ್ತಿದೆ. ಎಚ್1ಎನ್1, ದಡಾರ ಕಾಲರಗಳಂತಹ ರೋಗಗಳು ಜನರ ಪ್ರಾಣದ ಮೇಲೆ ದಿನನಿತ್ಯ ದಾಳಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೈರ್ಮಲ್ಯ: ಈ ಮಾರ್ಗದ ಎರಡು ಬದಿಗಳಲ್ಲಿ ಕಸವನ್ನು ಸುರಿಯಲಾಗಿತ್ತು. ಇದರಿಂದ ಎರಡು ಕಡೆಗಳಲ್ಲಿ ಕಸದ ರಾಶಿ ಗಿರಿ ಶಿಖರದಂತೆ ಗೋಚರಿಸುತ್ತದೆ. ಅಷ್ಟೇ ಅಲ್ಲದೆ ಹೆಚ್ಚಾಗಿ ದುರ್ವಾಸನೆ ಬೀರುವುದರಿಂದ ಈ ರಸ್ತೆಯಲ್ಲಿ ಓಡಾಡುವಂತಹರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಶಾಪ ಹಾಕುವಂತಾಗಿದೆ. ಅಗಿಲೆ ಗ್ರಾಮದ ಸಮೀಪ ಘನ ತ್ಯಾಜ್ಯ ಘಟಕವು ಸ್ಥಾಪನೆಗೊಂಡು ಅನೇಕ ವರ್ಷಗಳು ಕಳೆದರೂ ನಗರದ ಕಸವನ್ನು ಸ್ಥಳಾಂತರ ಮಾಡಿರುವುದಿಲ್ಲ. ನಗರಸಭೆ ಇಲ್ಲಿಯವರೆಗೂ ಯಾವ ಕಾರ್ಯನಿರ್ವಹಿಸದೆ ಮೌನ ತಾಳಿದೆ ಎಂದು ದೂರಿದರು.
ಎಚ್ಚರಿಕೆ: ಆದ್ದರಿಂದ ಕೂಡಲೇ ಕಸದ ರಾಶಿಯನ್ನು ಸ್ಥಳಾಂತರಗೊಳಿಸಬೇಕು. ಇಲ್ಲವಾದಲ್ಲಿ ಈ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಬಿ.ಎಸ್. ನವೀನ್ ಕುಮಾರ್, ತಾಲ್ಲೂಕು ಅಧ್ಯಕ್ಷ ಭಾನುಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸೈಯದ್ ಏಜಾಜ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಸಾದ್, ಕೆ.ಟಿ. ಪ್ರಕಾಶ್ ಹಾಗೂ ಇತರರು ಇದ್ದರು.
ಆಯುಕ್ತರ ಭರವಸೆ
ಸ್ಥಳಕ್ಕಾಗಮಿಸಿದ ನಗರಸಭೆ ಆಯಕ್ತ ಕೃಷ್ಣಮೂರ್ತಿ, ಈಗಾಗಲೇ ಕಸವನ್ನು ಬೇರೆಡೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಇನ್ನು ಎರಡು ತಿಂಗಳೊಳಗೆ ಇಲ್ಲಿರುವ ಎಲ್ಲಾ ಕಸವನ್ನು ತೆಗೆಸಲಾಗುತ್ತದೆ ಎಂದು ಭರವಸೆ ನೀಡಿದರು.