ಕಾಡಾನೆ ಸೆರೆ ಸಿದ್ಧತೆ ಪರಿಶೀಲಿಸಿದ ತಹಸೀಲ್ದಾರ್
ಆಲೂರು: ಒಂಟಿ ಸಲಗ ಹಿಡಿಯಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ತಹಸೀಲ್ದಾರ್ ಶಾರದಾಂಬ ಅವರು ಸೋಮವಾರ ಪರಿಶೀಲಿಸಿದರು. ಸಿದ್ಧತೆ ಕ್ಯಾಂಪ್ಗೆ ಭೇಟಿ ನೀಡಿದ ಅವರು, ಸಾಕಾನೆಗಳನ್ನು ಕಟ್ಟಿರುವ ಸ್ಥಳ, ಅಡುಗೆ ಹಾಗೂ ವಸತಿ ವ್ಯವಸ್ಥೆ ವೀಕ್ಷಿಸಿದರು. ನಂತರ ಮಾತನಾಡಿದ ತಹಸೀಲ್ದಾರ್ ಅವರು, ಸೋಮವಾರ ಜಿಲ್ಲಾಧಿಕಾರಿ ಅನ್ಬುಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಆವರು ಕಾರ್ಯನಿಮಿತ್ತ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿಯವರು ಮಂಗಳವಾರ ಕ್ಯಾಂಪ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಕ್ಯಾಂಪ್ನಲ್ಲಿ ಅರಣ್ಯ ಇಲಾಖೆಯವರು ಕಾಡಾನೆ ಸೆರೆಹಿಡಿಯಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಕೇವಲ ವೈದ್ಯರು ಹಾಗೂ ಶಾರ್ಟ್ ಶೂಟರ್ ಬಂದ ನಂತರ ಕಾರ್ಯಾಚರಣೆ ಪ್ರಾರಂಭವಾಗಲಿದೆ.
ತಾಲೂಕಿನ ಕೆಂಚಮ್ಮನ ಹೊಸಕೋಟೆ, ಕುಂದೂರು, ಪಾಳ್ಯ ಹೋಬಳಿ ಹಾಗೂ ಸಕಲೇಶಪುರದ ತಾಲೂಕಿನ ನಾನಾಕಡೆಗಳಲ್ಲಿ ಪ್ರತಿದಿನ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಹಾಗೂ ಪ್ರಾಣ ಹಾನ ಮಾಡುತ್ತಿರುವ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಗೆ ಸಹ ಸಿದ್ಧತಾ ಕಾರ್ಯಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೊಂಡರು.
ಸಕಲ ವ್ಯವಸ್ಥೆ: ಆರ್ಎಫ್ಓ ದೇವರಾಜ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಸಾಕಾನೆಗಳು, ಮಾವುತರು ಹಾಗೂ ಸಿಬ್ಬಂದಿ ವರ್ಗ, ಕಾವಾಡಿಗಳಿಗೆ ಊಟ ವಸತಿ ಕಲ್ಪಿಸುವಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ ಮಾಗಡಿಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಕ್ಯಾಂಪ್ನಲ್ಲಿ 6 ಡೇರೆಗಳನ್ನು ನಿರ್ಮಿಸಿದ್ದು, ಇವುಗಳಲ್ಲಿ ಮಾವುತರು ಹಾಗೂ ಕಾವಾಡಿಗರು ತಂಗಲಿದ್ದಾರೆ. ವೈದ್ಯರಾದ ಚಿಟ್ಟಿಯಪ್ಪ, ಉಮಾಶಂಕರ್, ನಾಗರಾಜು, ಶಾರ್ಪ್ ಶೂಟರ್ಗಳಾದ ಅಕ್ರಂ ಹಾಗೂ ಕರಂಬಯ್ಯ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗ ಬರಲಿದ್ದಾರೆ. ಅವರು ಉಳಿದುಕೊಳ್ಳಲು ಕ್ಯಾಂಪ್ನ ಪಕ್ಕದಲ್ಲಿ ಇರುವ ಕಾಫಿ ತೋಟದಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದು, ಅಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿದೆ.
ಸಾಕಾನೆಗಳಿಗೂ ಪೌಷ್ಠಿಕ ಆಹಾರ: ಇದೇ ಕಾಫಿ ತೋಟದೊಳಗೆ ಒಂದು ಅಡುಗೆ ಕೋಣೆಯನ್ನು ನಿರ್ಮಿಸಿದ್ದು, ಇವರೆಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲು ಇಬ್ಬರು ಅಡುಗೆಯವರನ್ನು ನೇಮಿಸಲಾಗಿದೆ. ಈಗಾಗಲೇ ನಾಗರಹೊಳೆ ಕ್ಯಾಂಪ್ನಿಂದ ಅರ್ಜುನ, ಅಭಿಮನ್ಯು, ಬಲರಾಮ ಆನೆಗಳು ಹಾಗೂ ಕೊಡಗಿನ ಕೆ. ಕುಡಿ ಕ್ಯಾಂಪ್ನಿಂದ ವಿಕ್ರಂ ಹಾಗೂ ಪ್ರಶಾಂತ್ ಆನೆಗಳು ಮಾಗಡಿಹಳ್ಳಿ ಕ್ಯಾಂಪ್ಗೆ ಕಳೆದ ಶನಿವಾರ ಸಂಜೆ ಬಂದು ತಲುಪಿವೆ. ಅವುಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಕಟ್ಟಿ ಹಾಕಲಾಗಿದ್ದು, ಬೆಲ್ಲ, ಭತ್ತ, ಹುಲ್ಲು ಸೇರಿದಂತೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು, ಲಾರಿಯಲ್ಲಿ ನೂರಾರು ಕಿಮೀ ಪ್ರಯಾಣ ಬೆಳೆಸಿ ಧಣಿದಿರುವ ಈ ಆನೆಗಳು ವಿಶ್ರಾಂತಿ ಪಡೆಯಲು ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕೇಂದ್ರದ ಆದೇಶ ಬರಬೇಕು: ಅರವಳಿಕೆ ಚುಚ್ಚುಮದ್ದು ಚೆನೈನಿಂದ ಬರಬೇಕಿದ್ದು, ವೈದ್ಯರು ಅವುಗಳೊಂದಿಗೆ ಬಂದ ನಂತರ ತಕ್ಷಣವೇ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಆರ್ಎಫ್ಓ ದೇವರಾಜ ತಿಳಿಸಿದ್ದು, ಇವರೊಂದಿಗೆ ಸ್ಥಳೀಯರೇ ಆದ ತಜ್ಞ ಶೂಟರ್ ಹೊನ್ನವಳ್ಳಿ ವೆಂಕಟೇಶ್ ಅವರು ಕಾರ್ಯಾಚರಣೆ ನಡೆಸಲಿದ್ದಾರೆ. ಈಗಾಗಲೇ ಸರ್ಕಾರ ಪ್ರಥಮ ಹಂತವಾಗಿ ಈ ಭಾಗದಲ್ಲಿ ಕಳೆದ ಗುರುವಾರ ಪುರಬೈರವನಹಳ್ಳಿಯಲ್ಲಿ ಮಹಿಳೆಯನ್ನು ಬಲಿ ಪಡೆದು ಭಾನುವಾರ ರಾತ್ರಿ ಕೂಡ ಜೀಪ್ನ ಮೇಲೆ ದಾಳಿ ನಡೆಸಿ ಸುತ್ತಮುತ್ತಲ ಪ್ರದೇಶದಲ್ಲಿ ಭಯ ಉಂಟು ಮಾಡಿರುವ ಒಂಟೀ ಸಲಗವನ್ನು ಹಿಡಿಯಲು ಆದೇಶ ದೊರೆತಿದ್ದು, ಉಳಿದ ಆನೆಗಳನ್ನು ಹಿಡಿಯಲು ಸಹ ಕೇಂದ್ರದಿಂದ ಆದೇಶ ದೊರೆತ ತಕ್ಷಣ ಎಲ್ಲಾ ಆನೆಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು.
ಸರಂಜಾಮು ಸಿದ್ಧ: ಮೊದಲು ಒಂಟಿ ಸಲಗ ಹಿಡಿದ ನಂತರ ಯಾವುದೇ ಕಾರಣಕ್ಕೂ ಕ್ಯಾಂಪ್ ಅನ್ನು ಇಲ್ಲಿಂದ ತೆರವುಗೊಳಿಸುವುದಿಲ್ಲ. ಕಾಡಾನೆ ಹಿಡಿದಾಗ ಕಟ್ಟಲು ಸೆಣಬಿನ ಹಗ್ಗ ಹಾಗೂ ಸರಪಳಿಗಳನ್ನು ಸಿದ್ಧಗೊಳಿಸಲಾಗಿದ್ದು, ಸಾಕಾನೆಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸಲು ಲಾರಿಗಳು ಹಾಗೂ ಕಾಡಾನೆಗಳನ್ನು ಹಿಡಿದರೆ ಅದನ್ನು ಸಾಗಿಸಲು ಗಟ್ಟಿಮುಟ್ಟಾದ ಕಬ್ಬಿಣದ ಪಂಜರವುಳ್ಳ 10 ಚಕ್ರದ ಲಾರಿಯನ್ನು ತಯಾರಿಸಲಾಗಿದೆ.
ಸಾಕಾನೆಗಳಿಗೆ ಜನರ ಕಾಟ
ಸಾಕಾನೆಗಳನ್ನು ವಿಕ್ಷೀಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಯಾಂಪ್ಗೆ ಬರುತ್ತಿದ್ದು, ವಾಹನಗಳ ಶಬ್ದದಿಂದಾಗಿ ಸಾಕಾನೆಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕ್ಯಾಂಪ್ಗೆ ಬರುವ ಸಾರ್ವಜನಿಕರ ವಾಹನಗಳನ್ನು ಕ್ಯಾಂಪ್ನಿಂದ ದೂರದಲ್ಲೇ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಆರ್ಎಫ್ಓ ಅವರಿಗೆ ಸೂಚಿಸಿದ್ದೇನೆ. ಅಲ್ಲದೆ ಸಾಕಾನೆಗಳು ಮಾವುತರು, ಕಾವಾಡಿಗರು ಸೇರಿದಂತೆ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಊಟ, ವಸತಿ ಕಲ್ಪಿಸುವಂತೆ ಸೂಚಿಸಿರುವುದಾಗಿ ತಹಸೀಲ್ಲ್ದಾರ್ ತಿಳಿಸಿದರು.