ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗಜರಾಜನ ರಂಪಾಟಕ್ಕೆ ಹೌಹಾರಿದ ಜನತೆ

Vishwanath S
Updated On : 14 Jan 2014, 1:19 am

ಸಕಲೇಶಪುರ:  ಸಾಕಾನೆ ಕಂಡ ಪಟ್ಟಣದ ಜನತೆ ಕಾಡಾನೆ ಎಂದು ಭ್ರಮಿಸಿ ಹೌಹಾರಿದ ಘಟನೆ ಪಟ್ಟಣದ ಹೊಳೇ ಮಲ್ಲೇಶ್ವರ ದೇವಸ್ಥಾನದ ಸಮೀಪ ಸೋಮವಾರ ನಡೆಯಿತು.
ಟಿಂಬರ್ ಕಡಿಯಲು ಪರವನಾಗಿ ನೀಡುವ ವಿಚಾರದಲ್ಲಿ ಸರ್ಕಾರ ಒಪ್ಪಿಗೆ ನೀಡಿದೆ ಎಂಬ ವಿಚಾರ ತಿಳಿದ ಕೇರಳದ ರಶೀದ್ ಎಂಬ ವ್ಯಕ್ತಿ ತಾಲೂಕಿನ ಟಿಂಬರ್ ಕೆಲಸಕ್ಕಾಗಿ ತಮ್ಮ ಸಾಕಾನೆಯನ್ನು ಪಟ್ಟಣದ ಸುಬಾಷ್ ಮೈದಾನಕ್ಕೆ ಒಂದು ವಾರದ ಹಿಂದೆ ತಂದು ನಿಲ್ಲಿಸಿದ್ದರು.
ಮಾವುತನೊಂದಿಗೆ ಮುನಿಸು: ಆದರೆ, ಸೋಮವಾರ ಮಾವುತ ಆನೆಯನ್ನು ಮೈತೊಳೆಯಲು ಹೇಮಾವತಿ ನದಿಗೆ ಕರೆತರುವ ಸಂದರ್ಭದಲ್ಲಿ ಮಾವುತನೊಂದಿಗೆ ಮುನಿಸಿಕೊಂಡ ಆನೆ ಸಮೀಪದಲ್ಲಿದ್ದ ಮರಗಳನ್ನು ಕಿತ್ತೆಸೆದಿದ್ದಲ್ಲದೇ, ಹೇಮಾವತಿ ನದಿಪಾತ್ರದಲ್ಲಿ ಮಾವುತನನ್ನು ಅಟ್ಟಾಡಿಸಿದ್ದರಿಂದ ಆನೆಯನ್ನು ಬಿಟ್ಟು ದೂರ ಓಡಿ ಜೀವ ಉಳಿಸಿಕೊಂಡಿದ್ದ ಮಾವುತ ಮರೆಯಲ್ಲಿ ನಿಂತು ಆನೆ ಸಮಾಧಾನಗೊಳ್ಳುವುದಕ್ಕಾಗಿ ಕಾದು ನಿಂತಿದ್ದ.
ರಂಪಾಟ ಮಾಡಿದ ಗಜರಾಜ: ಆದರೆ, ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಆನೆ ನದಿ ಪಾತ್ರದಲ್ಲಿದ್ದ ಮರಳನ್ನು ತನ್ನ ಮೈಮೇಲೆ ಸುರಿದುಕೊಂಡು ಘೀಳಿಡಲು ಪ್ರಾರಂಭಿಸಿತ್ತು. ಇದನ್ನು ಕಂಡ ದಾರಿಹೋಕರು ಹೇಮಾವತಿ ನದಿಯಲ್ಲಿ ಕಾಡಾನೆ ಬಂದಿದೆ ಎಂಬ ಸುದ್ದಿ ಹಬ್ಬಿಸಿದ್ದರಿಂದ ಕೇವಲ 10 ನಿಮಿಷದಲ್ಲಿ ಆನೆ ನೋಡಲು ಪಟ್ಟಣದ ನೂರಾರು ಜನತೆ ಹೇಮಾವತಿ ಸೇತುವೆ ಮೇಲೆ ಮುಗಿಬಿದ್ದರು. ಇದರಿಂದಾಗಿ, ಕೆಲಕಾಲ ಬೆಂಗಳೂರು- ಮಂಗಳೂರು ಸಂಚಾರ ಸಹ ಸ್ಥಗಿತಗೊಂಡಿತು.  ಈ ವಿಚಾರ ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ತಲುಪಿ ಸಿಬ್ಬಂದಿಗಳು ಸ್ಥಳಕ್ಕಾಮಿಸಿದ್ದರು.
ಆ ವೇಳೆಗೆ ರೊಚ್ಚಿಗೆದ್ದ ಆನೆ ನದಿಯ ನೀರಿಗೆ ಇಳಿದ ನಂತರ ಸಮಾಧನಗೊಂಡಿದ್ದನ್ನು ಗಮನಿಸಿದ ಮಾವುತ ಆನೆಯನ್ನು ತನ್ನ ವಶಕ್ಕೆ ಪಡೆದಕೊಂಡಿದ್ದನ್ನು ಕಂಡ ಜನತೆ ಇದು ಸಾಕಾನೆ ಎಂದು ಸಮಾಧಾನದಿಂದ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement