ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾವಗಲ್‌ನಲ್ಲಿ ವಿಶೇಷ ಕೂಳೆನಾಗರು ಪೂಜೆ

Vishwanath S
Updated On : 14 Jan 2014, 1:20 am

ಕನ್ನಡಪ್ರಭ ವಾರ್ತೆ, ಜಾವಗಲ್, ಜ.13
ಜಾವಗಲ್‌ನಲ್ಲಿ ವೈಕುಂಠ ಏಕಾದಶಿ ಹಾಗೂ ಕೂಳೆನಾಗರು ಪೂಜೆಯನ್ನು ವಿಶೇಷವಾಗಿ ಸಂಭ್ರಮದಿಂದ ಆಚರಿಸಲಾಯಿತು.
ಜಾವಗಲ್‌ನ ಶ್ರೀಲಕ್ಷ್ಮೀ ನರಸಿಂಹ ದೇಗುಲದ ಮಹಾಲಕ್ಷ್ಮೀ ಅಮ್ಮನವರಿಗೆ ಮುಂಜಾನೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ ಮಾಡಿ ಮಹಾಮಂಗಳಾರತಿ ಮಾಡಿ ಭಕ್ತರಿಗೆ ಲಾಡು ಪ್ರಸಾದ ವಿನಿಯೋಗಿಸಲಾಯಿತು.
ಗ್ರಾಮೀಣ ಭಾಗಗಳಲ್ಲಿ ಶ್ರಾವಣಮಾಸ, ಭಾದ್ರಪದ ಶುಕ್ಲಚೌತಿ ಹಾಗೂ ಸುಗ್ಗಿಕಾಲವಾದ ಪುಷ್ಯಮಾಸದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮುನ್ನ ನಾಗಪೂಜೆ ಮಾಡುವುದು ವಾಡಿಕೆಯಾಗಿದೆ.
ಸುಗ್ಗಿಕಾಲದಲ್ಲಿ ಹೆಚ್ಚಾಗಿ ರೈತಾಪಿ ವರ್ಗದವರು ಸಂಭ್ರಮ ಮತ್ತು ಸಡಗರದಿಂದ ಕೂಳೆನಾಗರು ಪೂಜೆ ಮಾಡುತ್ತಾರೆ. ಇಲ್ಲಿನ ನಾಗರಕಲ್ಲು ದೇವಾಲಯದಲ್ಲಿ ಮುಂಜಾನೆಯಿಂದಲೆ ಭಕ್ತರು ಆಗಮಿಸಿ ಹುತ್ತವನ್ನು ಪುಷ್ಪಗಳಿಂದ ಅಲಂಕರಿಸಿ ತನಿಯೆರದು ಹಾಲು ತುಪ್ಪ ಅರ್ಪಿಸಿ, ಅವರೆಕಾಳಿನಿಂದ ಮಾಡಿದ ತಳಿಗೆ, ಚಿಗಲಿ, ತಂಬಿಟ್ಟು, ತೆಂಗಿನಕಾಯಿ, ಬಾಳೆಹಣ್ಣು ಸೇರಿದಂತೆ ನಾನಾ ತಿಂಡಿ ತಿನಿಸುಗಳನ್ನು ನಾಗಪ್ಪನಿಗೆ ಅರ್ಪಿಸಿ ಪೂಜೆಸಲ್ಲಿಸಿ ಪುನೀತರಾದರು.
ವಿಶೇಷವಾಗಿ ನಾಗರತಾಳಿಯನ್ನು ನಾಗಪ್ಪನಿಗೆ ಅರ್ಪಿಸಿ, ಪೂಜೆ ಸಲ್ಲಿಸಿ ನಂತರ ಮನೆಗಳಲ್ಲಿನ ಹೆಣ್ಣುಮಕ್ಕಳಿಗೆ ಕಟ್ಟುತ್ತಾರೆ. ಇಲ್ಲಿನ ನಾಗರುಕಲ್ಲುಗಳಿಗೆ ಪಂಚಾಮೃತ, ಅರಿಶಿಣದ ಅಭಿಷೇಕ ಪುಷ್ಪಾಲಂಕಾರಮಾಡಿ ಮಹಾಮಂಗಳಾರತಿ ನಡೆಸಲಾಯಿತು.
ಗ್ರಾಮದ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಬ್ಬದ ವಿಶೇಷವಾಗಿ ಅಣ್ಣತಮ್ಮಂದಿರು, ಅಕ್ಕ- ತಂಗಿಯರು ಒಂದು ಕಡೆ ಸೇರಿ ಪೂಜೆಯ ನಂತರ ವಿಶೇಷ ತಿಂಡಿ ತಿನಿಸುಗಳನ್ನು ಸಾಮೂಹಿಕವಾಗಿ ಕುಳಿತು ತಿಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement