ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೆಲೆ ಏರಿಕೆ ನಡುವೆಯೂ ಸಂಕ್ರಾಂತಿಗೆ ಭರದ ಸಿದ್ಧತೆ

Vishwanath S
Updated On : 14 Jan 2014, 1:19 am

ಹೊಳೆನರಸೀಪುರ: ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡು ಎಂಬ ನಾಣ್ಣುಡಿಯನ್ನು ನೆನಪಿಸುವ ವರ್ಷಾರಂಭದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ದಿನದಿಂದ ದಿನಕ್ಕೆ ಏರುತ್ತಲೇ ಇರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಪಟ್ಟಣದ ಜನರು ಸಂಭ್ರಮ-ಸಡಗರದಿಂದ ಆಚರಿಸಲು ಭರದ ಸಿದ್ಧತೆ ನಡೆಸಿದ್ದಾರೆ.
ಚುಮು ಚುಮು ಚಳಿಗೆ ನಡುಗುವ ಮುದುಡಿದ ದೇಹ ಮತ್ತು ಮನಸ್ಸನ್ನು ಎಳೆ ಬಿಸಿಲಿಗೆ ಬೆಚ್ಚಗಾಗಿಸುತ್ತಾ, ವಿಶೇಷ ಸಂಭ್ರಮ ಹಾಗೂ ಸಿದ್ಧತೆಯೊಂದಿಗೆ ಆಚರಿಸಲ್ಪಡುವ ಸಂಕ್ರಾತಿ ಹಬ್ಬವು ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ನೆಚ್ಚಿನ ಹಬ್ಬವಾಗಿದೆ. ಹಿಂದಿನ ದಿನಗಳಲ್ಲಿ ಹಳ್ಳಿ- ಪಟ್ಟಣಗಳನ್ನಲ್ಲದೇ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದ ಸಂಕ್ರಾಂತಿ ಹಬ್ಬ ಇತ್ತೀಚಿನ ದಿನಗಳಲ್ಲಿ ಪಟ್ಟಣ ಪ್ರದೇಶದಲ್ಲಿಯೇ ಹೆಚ್ಚು ಕೇಂದ್ರೀಕೃತವಾಗುತ್ತಾ, ಆಚರಣೆಯ ಜೊತೆಗೆ ಆಡಂಬರದ ಪ್ರದರ್ಶನವಾಗಿ ಮಾರ್ಪಾಟಾಗತೊಡಗಿರುವುದು ಸುಳ್ಳಲ್ಲ.
ಕಿಚ್ಚು ಹಾಯಿಸುವ ಪದ್ಧತಿ: ರೈತಾಪಿ ವರ್ಗ ತಾವು ಬೆಳೆದ ಬೆಳೆಯನ್ನು ಹಣದಲ್ಲಿ ಒಕ್ಕಲು ಮಾಡುವ ಸಂದರ್ಭದಲ್ಲಿ ಸುಗ್ಗಿಯನ್ನು ಆಚರಿಸುವ ಕಾಲಕ್ಕೆ ಸಂಕ್ರಾಂತಿಯ ಆಗಮನವಾಗುತ್ತದೆ. ಇದೇ ಸಂದರ್ಭದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಪೂಜಿಸಿ, ಕಿಚ್ಚು ಹಾಯಿಸುವ ಪ್ರತೀತಿಯೂ ಅಲ್ಲಲ್ಲಿ ಇಲ್ಲಿ ಆಚರಣೆಯಲ್ಲಿದೆ.
ಹಿಂದೂ ಸಂಪ್ರದಾಯದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳಿಗೂ ಅದರದೇ ಆದ ಹಿನ್ನೆಲೆ ಹಾಗೂ ಆಚರಿಸುವ ಕಾಲಕ್ಕೂ ವಿಶೇಷ ಸಂಬಂಧವನ್ನು ನಮ್ಮ ಹಿರಿಯ ತಲೆಮಾರಿನವರು ಕಂಡುಕೊಂಡೇ ಹಬ್ಬಗಳನ್ನು ಆಚರಿಸುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳೂ ಲಭ್ಯವಿದೆ.
ಎಳ್ಳು- ಬೆಲ್ಲದ ಮಹತ್ವ: ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಪಥವನ್ನು ಬದಲಾಯಿಸುವ ಕಾಲದಲ್ಲಿ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ವೈಜ್ಞಾನಿಕ ಕಾರಣಗಳನ್ನೂ ವಿಶ್ಲೇಷಿಸಲಾಗಿದ್ದು, ದೇಹದಲ್ಲಿರುವ ಎಣ್ಣೆ ಅಂಶವು ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಡಲು ಹೆಚ್ಚಾಗಿ ಖರ್ಚಾಗುವ ಕಾರಣದಿಂದಾಗಿ ಎಣ್ಣೆ ಅಂಶಗಳನ್ನೊಳಗೊಂಡಿರುವ ಎಳ್ಳು, ಒಣಕೊಬ್ಬರಿ, ನೆಲಗಡಲೆ ಜೊತೆಗೆ ಬೆಲ್ಲವನ್ನು ಸೇರಿಸಿ ಸೇವಿಸುವುದರಿಂದಾಗಿ ದೇಹವನ್ನು ಸಮಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ ಎನ್ನುವುದೂ ಕೂಡ ಸಂಕ್ರಾಂತಿಯ ಸಂದರ್ಭದಲ್ಲಿ ಹಂಚಲಾಗುವ ಎಳ್ಳು- ಬೆಲ್ಲದ ಮಹತ್ವವನ್ನು ಸಾರುತ್ತದೆ.
ವರ್ಷದಿಂದ ವರ್ಷಕ್ಕೆ ಅಗತ್ಯ ವಸ್ತುಗಳ ಬೆಲೆಯು ಏರುತ್ತಲೇ ಇದ್ದರೂ, ಹಿಂದೂಗಳಲ್ಲಿ ಹಬ್ಬಗಳ ಆಚರಣೆಗೇನು ಕೊರತೆಯಿಲ್ಲ ಎನ್ನುವಂತೆ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈಗಾಗಲೇ ಕಡಲೇಬೀಜ, ಕೊಬ್ಬರಿ ಎಳ್ಳನ್ನು ತಂದು ಬಿಸಿಲಿನಲ್ಲಿ ಒಣಗಿಸಿ ಅಣಿಗೊಳಿಸಿ ನಂತರ ಎಳ್ಳು- ಬೆಲ್ಲವನ್ನು ಸೇರಿಸಿ ಹಂಚಲು ಸಿದ್ಧಗೊಳಿಸುತ್ತಾರೆ.
ಹೆಣ್ಣುಮಕ್ಕಳಿಗೆ ಮುಖ್ಯ: ಬಗೆ-ಬಗೆಯ ಉಡುಗೆ ತೊಡುಗೆಗಳ ಸಾಂಪ್ರದಾಯಿಕ ಉಡುಪಿನಲ್ಲಿ ಸಂಭ್ರಮಿಸುವ ಹೆಣ್ಣು ಮಕ್ಕಳನ್ನು ತಂದೆ ತಾಯಂದಿರು ಕಣ್ತುಂಬ ನೋಡಿ ಆನಂದಿಸುತ್ತಲೇ, ಪೋಷಕರುಗಳು ತಮ್ಮ ಹೆಣ್ಣು ಮಕ್ಕಳ ಕೈಯಲ್ಲಿ ಅಕ್ಕ ಪಕ್ಕದವರಿಗೆ ಹಾಗೂ ಪರಿಚಿತರಿಗೆ ಎಳ್ಳು- ಬೆಲ್ಲ ಹಂಚಿಸಿ, ಸಂಕ್ರಾಂತಿಯನ್ನು ಸಡಗರದೊಂದಿಗೆ ಆಚರಿಸುತ್ತಾರೆ. ದೀಪಗಳ ಹಬ್ಬ ದೀಪಾವಳಿಯಿರಲಿ, ಸಿಹಿ- ಕಹಿಯ ಸಮಚಿತ್ತದ ಸಮರಸ ಸಾರುವ ಯುಗಾದಿಯಿರಲಿ, ಮೋದಕದ ವಿನಾಯಕನ ಆಚರಣೆಯಿರಲಿ, ಬಣ್ಣಗಳ ಹಬ್ಬ ಹೋಳಿಯಿರಲಿ ಯಾವುದೇ ಹಬ್ಬವಾದರೂ ತಮ್ಮ ಶಕ್ತ್ಯಾನುಸಾರವಾಗಿ ಆಚರಣೆಯಲ್ಲಿರುವ ಕಾರಣಕ್ಕಷ್ಟೇ ಅಲ್ಲದೇ, ತಮ್ಮ ಮಕ್ಕಳ ಮೊಗದಲ್ಲಿ ಸಂಭ್ರಮದ ನಗುವನ್ನು ಕಾಣುವ ಕಾರಣದಿಂದಾಗಿಯೂ ನಮ್ಮ ನಾಡಿನೆಲ್ಲೆಡೆ ಆಚರಿಸಲ್ಪಡುವ ಹಬ್ಬಗಳಿಗೆ ತನ್ನದೇ ಆದ ವಿಶೇಷತೆ ಒದಗಿ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement