ರುಕ್ಮಿಣಿ ಪಾಂಡುರಂಗ ದೇಗುಲದಲ್ಲಿ ಕ್ಷೀರಾಭಿಷೇಕ
ಅರಸೀಕೆರೆ: ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ಶ್ರೀರುಕ್ಮಿಣಿ ಪಾಂಡುರಂಗ ದೇವಾಲಯದಲ್ಲಿ ಭಾನುವಾರ ಸಾವಿರಾರು ಭಕ್ತರು ಯಾವುದೇ ಭೇದ ಭಾವನೆಗಳಿಲ್ಲದೆ ದೇವರ ವಿಗ್ರಹಕ್ಕೆ ಕ್ಷೀರಾಭಿಷೇಕ ನೆರವೇರಿಸಿದರು.
ಪಟ್ಟಣದ ಹೃದಯ ಭಾಗದಲ್ಲಿನ ಗ್ರಾಮದೇವತೆ ಶ್ರೀಮಲ್ಲಿಗಮ್ಮ ದೇವಾಲಯ ಸಮೀಪದ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ರುಕ್ಮಿಣಿ ಪಾಂಡುರಂಗ ದೇವಾಲಯದಲ್ಲಿ ವೈಕುಂಠ ಏಕಾದಶಿಯ ದಿನವಾದ ಇಂದು ಬೆಳಿಗ್ಗೆ ಎಲ್ಲಾ ಜಾತಿ ವರ್ಗದ ಜನರು ಯಾವುದೇ ಭೇದ ಭಾವನೆಗಳಿಲ್ಲದೆ ಸಂಕಲ್ಪ ಮಾಡಿಕೊಂಡು ದೇವಾಲಯದ ಒಳಪ್ರವೇಶಿಸಿ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ ತಮ್ಮ ಕೈಯ್ಯಾರ ಕ್ಷೀರಾಭಿಷೇಕ ನಡೆಸಲು ದೇವಾಲಯ ಸಮಿತಿ ಅನುವು ಮಾಡಿಕೊಟ್ಟಿತ್ತು.
ಮುಂಜಾನೆಯಿಂದ ದಂಪತಿಗಳ ಸಮೇತ ಸಾವಿರಾರು ಜನರು ಗುಂಪು, ಗುಂಪಾಗಿ ಬಂದು ತಮ್ಮ ಭಕ್ತಿಯ ಸೇವೆಯನ್ನು ಸಮರ್ಪಿಸಿದರು. ನಂತರ ಮಧ್ಯಾಹ್ನದ ಮೇಲೆ ದೇವಾಲಯದ ವೈಕುಂಠ ಮಹಾದ್ವಾರದಲ್ಲಿ ಉತ್ಸವಮೂರ್ತಿಯನ್ನು ಕುಳ್ಳರಿಸಿ, ವಿಶೇಷ ಅಲಂಕಾರ ಪೂಜಾ ಕಾರ್ಯಗಳನ್ನು ನೇರವೇರಿಸಲಾಯಿತು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಕಾರ್ಯದರ್ಶಿ ಹಾಗೂ ನಿರ್ದೇಶಕ ಮಂಡಲಿ ದೇವರ ದರ್ಶನಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳಿಗೂ ಯಾವುದೇ ತೊಂದರೆ ಉಂಟಾದ ರೀತಿಯಲ್ಲಿ ಸುವ್ಯವಸ್ಥೆಮಾಡಿದ್ದರು.