ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಚನಗಳಿಂದ ಪಾರಮಾರ್ಥಿಕ ಸಾಧನೆ

Vishwanath S
Updated On : 14 Jan 2014, 1:20 am

ಹೊಳೆನರಸೀಪುರ: ವಚನಗಳ ಮೂಲಕ ದೇವರ ಅಸ್ತಿತ್ವವನ್ನು ಜನರ ಮನದಲ್ಲಿ ಉಳಿಯುವಂತೆ ಮಾಡುವ ಜೊತೆಗೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಮನುಷ್ಯನ ಪಾರಮಾರ್ಥಿಕ ಜೀವನದ ಪರಿವರ್ತನೆಗೆ ದಾರಿಯಾಗುವಂತೆ ಮಾಡಿದ್ದು ವಚನ ಸಾಹಿತ್ಯ ಎಂದು ಶಿಕ್ಷಕಿ ಡಾ. ಮಂಗಳಗೌರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ವಚನ ಸಾಹಿತ್ಯ ಅಕಾಡೆಮಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಅನುಭವವನ್ನು ನೇರವಾಗಿ ಜನಮನ ಮುಟ್ಟುವಂತೆ ನೀತಿಯನ್ನು ಹೇಳಲು ಬೆಳೆಸಿಕೊಂಡ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ ಎಂದು ಹೇಳಿದರು.
ಸಾಹಿತ್ಯವು ಮನಸ್ಸಿಗೆ ಹಿತವುಂಟು ಮಾಡುವುದರ ಜೊತೆಗೆ ಇಂತಹ ವಚನಗಳನ್ನು ರಚಿಸಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವವರಲ್ಲಿ ದಿಗ್ಗಜರಾದ ಜೇಡರದಾಸಿಮಯ್ಯ ಪ್ರಮುಖರಾಗಿದ್ದಾರೆ ಎಂದರು.
ಸಾಹಿತ್ಯ ಶ್ರೀಮಂತ: ಹನ್ನೊಂದನೆ ಶತಮಾನದ ಉತ್ತರಾರ್ಧದಲ್ಲಿ ವಚನಕಾರರು ಆಗಮಿಸಿ ಸಮಾಜವನ್ನು ತಿದ್ದಿ ತೀಡಿದದ್ದರಿಂದ ವಚನಗಳು ಇಂದಿಗೂ ಹಾಸುಹೊಕ್ಕಾಗಿದೆ. ತನ್ನ ದೈನಂದಿನ ಬದುಕಿನಲ್ಲಿ ಬಟ್ಟೆ ನೇಯುವುದು ಈತನ ಕಾಯಕವಾದರೂ, ವಚನ ಸಾಹಿತ್ಯ ಈತನ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದನ್ನು ನಾವುಗಳು ಅರಿಯಬೇಕಿದೆ. ವಚನಗಳಲ್ಲಿ ಭಕ್ತಿ, ಡಾಂಭಿಕತೆಯ ವಿರೋಧ, ಜೀವನದ ನೋವು ನಲಿವುಗಳ ದರ್ಶನವಿದ್ದು, ಅಧುನಿಕ ಪ್ರಪಂಚಕ್ಕೆ ಜೇಡರದಾಸಿಮಯ್ಯ ರಚಿಸಿದ ವಚನಗಳು ಸರ್ವಕಾಲಕ್ಕೂ ಅತ್ಯವಶ್ಯವೆಂದು ಡಾ. ಮಂಗಳಗೌರಿ ಬಣ್ಣಿಸಿದರಲ್ಲದೇ, ಇವರು ರಚಿಸಿದ ಪ್ರತಿಯೊಂದು ವಚನಗಳು ಮುತ್ತುಗಳು ಇದ್ದಂತೆ ಬದುಕಿನ ಮೂಲಗಳಿಂದ ತುಂಬಿದ ವಚನಗಳಿಂದ ಇಂದು ಕನ್ನಡ ಸಾಹಿತ್ಯ ಪ್ರಪಂಚ ಶ್ರೀಮಂತಗೊಂಡಿದೆ ಎಂದು ಅಭಿಪ್ರಾಯಪಟ್ಟರು.
ದೀರ್ಘಕಾಲ ಉಳಿಯುವ ಸಾಹಿತ್ಯ: ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್. ಸರೋಜಿನಿದೇವಿ ಮಾತನಾಡಿ, ವಚನಗಳು ನೈಜವಾಗಿದ್ದು ಸರಳವಾದ ಸಾಹಿತ್ಯ ಪ್ರತಿಯೊಬ್ಬರ ಮನಸ್ಸಿನ ಭಾವನೆಗಳನ್ನು ತಿಳಿಸುವಂತಹ ಕೃತಿಯಾಗಿದ್ದು, ಇಂತಹ ವಚನ ಸಾಹಿತ್ಯ ಕೃಷಿ ಯಾವುದೇ ನಿಲುಗಡೆ ಇಲ್ಲದೆ ನಡೆಯುತ್ತಿರುವುದು ಸಂತಸದ ಸಂಗತಿ ಆಗಿದೆ. ಅದು ಮನುಷ್ಯನ ಜೀವನದಲ್ಲಿ ದೀರ್ಘಕಾಲದವರೆಗೆ ಉಳಿಯುವಂಥ ಸಾಹಿತ್ಯವಾಗಿರಬೇಕೆಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ನಾಗರಾಜು ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ತಿರುವು ಪಡೆಯುವಂತಾಗಲಿ ಎಂದು ಶುಭ ಕೋರಿದರು. ವಚನ ಗಾಯನವು ಪ್ರತಿಯೊಬ್ಬರ ಮನಸ್ಸನ್ನು ಮುದಗೊಳಿಸಲಿದೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ತಮ್ಮಲ್ಲಿರುವ ಅಂಜುಬುರುಕ ತನವು ತನ್ನಿಂತಾನೇ ದೂರಾಗುವ ಜೊತೆಗೆ ನಿಮ್ಮಲ್ಲಿರುವ ರಾಗ- ದ್ವೇಷಗಳು ತಂತಾನೆ ಸರಿಹೋಗಲಿದೆ ಎಂದರು.
ಸುಬ್ಬರಾಯರಿಗೆ ಗೌರವ: ತಾಲೂಕು ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂ.ಸಿ. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ ಸ್ವೀಕರಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಾ.ರಾ. ಸುಬ್ಬರಾಯ ಅವರನ್ನು ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವಿಸಲಾಯಿತು.
ಸಮಾರಂಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀನಾಗರಾಜು ಮತ್ತು ನಿವೃತ್ತ ಶಿಕ್ಷಕ ಹಾಗು ಕಲಾವಿದ  ಎಚ್.ಆರ್.ವೀರಬಸಪ್ಪ  ವಚನ ಗಾಯನ ಮಾಡಿದರು.  ವಚನ ಸಾಹಿತ್ಯ ಅಕಾಡೆಮಿ ಸದಸ್ಯ ಕೃಷ್ಣ, ಶಿಕ್ಷಕ ಶಿವಕುಮಾರಚಾರಿ ಇದ್ದರು.  ಶಿಕ್ಷಕ  ಧರ್ಮರಾಜು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement