ಶಿಕ್ಷಕರ ಮೇಲೆ ಹಲ್ಲೆಗೆ ಖಂಡನೆ
ಹಾಸನ: ಶಿಕ್ಷಕರ ಮೇಲೆ ಹಲ್ಲೆ ಮಾಡಿರುವುದನ್ನು ಜಿಲ್ಲಾ ನೌಕರರ ಸಂಘ ತೀವ್ರವಾಗಿ ಖಂಡಿಸಿದೆ.
ಚನ್ನರಾಯಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ಕಾರ್ಯನಿರತನಾಗಿದ್ದ ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘ ಹಲ್ಲೆ ನಡೆಸಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಮ್. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಎಚ್ಚರಿಕೆ: ಶಾಲಾ ಶಿಕ್ಷಕರಿಗೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದಲ್ಲದೆ ಹೀಗೆ ನೌಕರರ ಮೇಲೆ ಹಲ್ಲೆಗಳು ಮುಂದುವರಿದರೆ ಹೋರಾಟ ಮತ್ತು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಕರ್ತ ಶಂಕರ್ಗೆ ಪಿತೃ ವಿಯೋಗ
ಅರಕಲಗೂಡು: ಇಲ್ಲಿನ ಪತ್ರಕರ್ತ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಪಿ. ಶಂಕರ್ ಅವರಿಗೆ ಪಿತೃ ವಿಯೋಗವಾಗಿದೆ.ಅವರ ತಂದೆ ಪಾಪಣ್ಣ (70), ಭಾನುವಾರ ಸಂಜೆ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ನಂತರ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಭಾನುವಾರ ಮತ್ತೆ ದಿಢೀರನೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ನಿಧನರಾದರು. ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ನೆರವೇರಿತು. ಮೃತರು ಪೊಲೀಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸಿದ್ದರು.
ಈ ರಸ್ತೆಯಲ್ಲಿ ಸಂಚಾರ, ಪ್ರಾಣಕ್ಕೆ ಸಂಚಕಾರ
ಕನ್ನಡಪ್ರಭ ವಾರ್ತೆ, ಹಾಸನ, ಜ.13
ದ್ವಿಚಕ್ರ ವಾಹನದ ಸವಾರರೇನಾದರೂ ಸ್ವಲ್ಪ ಮೈ ಮರೆತರೆ ಸಾಕು ಅಪಘಾತ ಉಂಟಾಗಿ ಪ್ರಾಣಾಪಾಯ ತರುವ ಬೃಹತ್ ಗುಂಡಿಯೊಂದು ರಸ್ತೆಯಲ್ಲಿ ನಿರ್ಮಾಣವಾಗಿದೆ.
ನಗರದ ಹೊರ ವಲಯ ಬಿಟ್ಟಗೋಡನಹಳ್ಳಿ ಗೊರೂರು ರಸ್ತೆಯಲ್ಲಿ ಈ ಗುಂಡಿ ಉಂಟಾಗಿದೆ.
ವಾಹನ ಚಾಲಕರು ಎಚ್ಚರದಿಂದ ಪ್ರಯಾಣಿಸಬೇಕು. ದಾರಿ ಮಧ್ಯೆ ದಿಡೀರನೆ ದೊಡ್ಡ ಗಾತ್ರದ ಗುಂಡಿಗಳು ಆಗಾಗ್ಗೆ ನಿಮ್ಮ ಕಣ್ಣಿಗೆ ಬೀಳುತ್ತದೆ. ನಿಧಾನದಿಂದ ಚಲಿಸಿದರೆ ಸುರಕ್ಷತೆಯಿಂದ ಮನೆ ಸೇರಬಹುದು. ಇಲ್ಲವಾದರೆ ಆಸ್ಪತ್ರೆ ಸೇರುವುದಂತೂ ಖಂಡಿತ. ಹಲವು ವರ್ಷಗಳಿಂದ ರಸ್ತೆ ಹಾಳಾಗಿದ್ದರೂ ಇತ್ತ ಕಡೆ ಯಾರು ಗಮನ ನೀಡದೆ ಪ್ರಸ್ತುತದಲ್ಲಿ ನಗರದ ನಾನಾ ಕಡೆ ಪೂರ್ಣ ರಸ್ತೆ ಗುಂಡಿ ಬಿದ್ದು ಅನೇಕ ವಾಹನ ಈ ಭಾಗದಲ್ಲಿ ಚಲಿಸಿ ಅಪಘಾತಗಳು ಸಂಭವಿಸುತ್ತಿವೆ.
ಸಂಬಂಧಪಟ್ಟವರು ತಕ್ಷಣವೇ ಈ ಗುಂಡಿಯನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
19ರಂದು ದಾನಿಗಳ ಸಭೆ
ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿ ನವಿಲೆ ಶ್ರೀ ನಾಗೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಅನ್ನದಾಸೋಹ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಸುಮಾರು ರು. 49 ಲಕ್ಷ ಅಂದಾಜು ತಯಾರಿಸಲಾಗಿದೆ.
ದಾನಿಗಳಾದ ತಾವು ನಗದು ಇತರೇ ರೂಪದಲ್ಲಿ ಸಹಾಯ ಮಾಡಿ ದೇವರ ಕೃಪೆಗೆ ಪಾತ್ರರಾಗಲು ಕೋರಿದೆ. ದಾನಿಗಳ ಸಭೆಯನ್ನು ಜ.19ರಂದು ಮಧ್ಯಾಹ್ನ 12.30ಕ್ಕೆ ಆಯೋಜಿಸಲಾಗಿದೆ. ಎಸ್.ಬಿ. ಖಾತೆ ಸಂಖ್ಯೆ 0766101019765, ಕೆನರಾ ಬ್ಯಾಂಕ್ ಕಾರೇಹಳ್ಳಿ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು. ಹೆಚ್ಚಿನ ವಿವರಗಳಿಗೆ ಡಾ. ಹೆಚ್.ಎಲ್. ನಾಗರಾಜ್, ತಹಸೀಲ್ದಾರ್, ಚನ್ನರಾಯಪಟ್ಟಣ.
ಮೊ. 9480783686, 7760353668, 9481 668594 ಇಲ್ಲಿಗೆ ಸಂಪರ್ಕಿಸಲು ಕೋರಿದ್ದಾರೆ.