'ಶಿಕ್ಷಣ ಕೊಡಿಸದ ಪಾಲಕರು ಮಕ್ಕಳ ಭವಿಷ್ಯದ ಕಂಟಕರು'
ಆಲೂರು: ಯಾವ ಪಾಲಕರು ಮಕ್ಕಳನ್ನು ಪಡೆದು ಅವರಿಗೆ ಶಿಕ್ಷಣವನ್ನು ಕೊಡಿಸುವುದಿಲ್ಲವೋ ಅವರು ಮಕ್ಕಳ ಉತ್ತಮ ಭವಿಷ್ಯಕ್ಕೆ ಕಂಟಕರಾಗುತ್ತಾರೆ ಎಂದು ಮನ್ಸೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಜಾವೀದ್ ಹೇಳಿದರು.
ಅವರು ಪಟ್ಟಣದ ಅರೇಬಿಕ್ ಕಾಲೇಜ್ ಮನ್ಸೂರ ಶಿಕ್ಷಣ ಸಂಸ್ಥೆಯು ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತನ್ನನ್ನು ತಾನು ಅರಿಯುವಂತೆ ಮಾಡುವುದೇ ಶಿಕ್ಷಣ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು.
ಉತ್ತಮ ಕರ್ಮ: ಮಲ್ಲಾರ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥ ಎ.ಜಿ. ಖಾಜಿ ಮಾತನಾಡಿ, ದೇವರ ಆರಾಧನೆಗಳ ಜತೆಗೆ ಮನುಷ್ಯ ಉತ್ತಮ ಕರ್ಮಗಳನ್ನು ಮಾಡಬೇಕು ಎಂದರು.
ಗೌರವಿಸಬೇಕು: ಮಂಗಳೂರಿನ ಎನ್‌ಪೊಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಆಖಿಲ್ ಅಹಮದ್ ಮಾತನಾಡಿ, ನಾವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮೊದಲು ನಾವು ನಮ್ಮ ಮಕ್ಕಳ ಪಾಲಕರನ್ನು, ಶಿಕ್ಷಕರನ್ನು, ಈ ದೇಶವನ್ನು ಮತ್ತು ಸಂವಿಧಾನವನ್ನು ಗೌರವಿಸಬೇಕೆಂದರು.
ಏಕೈಕ ಶಿಕ್ಷಣ ಸಂಸ್ಥೆ: ಮನ್ಸೂರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಹಸೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಣ ಮತ್ತು ಗುರುವಿನ ಮಹತ್ವ ಕುರಿತು ವಿದ್ಯಾರ್ಥಿಗಳಾದ ಮೊಹಮ್ಮದ್ ಶೋಯೆಬ್ ಅರೇಬಿಕ್ ಭಾಷೆಯಲ್ಲಿ, ಸುಲೇಮಾನ್ ಶರೀಫ್ ಉರ್ದು ಭಾಷೆಯಲ್ಲಿ, ಅರಖಮ್ ಅಹಮ್ಮದ್ ಆಂಗ್ಲ ಭಾಷೆಯಲ್ಲಿ ಮತ್ತು ಕೆ. ಜಮೀರ್ ಕನ್ನಡ ಭಾಷೆಯಲ್ಲಿ ಮಾತನಾಡಿದರು.
ಪ್ರಾಂಶುಪಾಲ ಮುನವರ್ ಪಾಶ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಯಾಸೀನ್ ಶರೀಫ್ ಸ್ವಾಗತಿಸಿ, ವಂದಿಸಿದರು.