ಸೆರೆ ಕಾರ್ಯಾಚರಣೆ ನಡುವೆಯೇ ಕಾಡಾನೆಗಳ ಆರ್ಭಟ,ಜೀಪು ಜಖಂ, ಮಾಲೀಕ ಪಾರು, ತತ್ತರಿಸಿದ ಜನರು
ಕ.ಪ್ರ.ವಾರ್ತೆ , ಆಲೂರು , ಜ 13
ತಾಲೂಕಿನ ಕುಂದೂರು ಹೋಬಳಿ ತಿಮ್ಲಾಪುರ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಜೀಪ್‌ವೊಂದನ್ನು ಜಖಂಗೊಳಿಸಿದ್ದು, ಜೀಪ್‌ನ ಮಾಲೀಕ ಜೀಪ್‌ನೊಳಗೆ ಅಡಗಿ ಕುಳಿತು ಅದೃಷ್ಟವಶಾತ್ ಪ್ರಾಣಾಪಯದಿಂದ ಭಾನುವಾರ ರಾತ್ರಿ ಪಾರಾಗಿದ್ದಾರೆ.
ಬಿಳಗರವಳ್ಳಿ ಗ್ರಾಮದ ಹಿಲ್‌ಬರ್ಟ್ ಡಿಸೋಜಾ ಎಂಬವರು ತಿಮ್ಲಾಪುರ ಗ್ರಾಮದಲ್ಲಿ ಇರುವ ತಮ್ಮ ಜಮೀನಿನಲ್ಲಿ ಬತ್ತದ ಒಕ್ಕಣೆ ಕಾರ್ಯದಲ್ಲಿ ತೊಡಗಿದ್ದ ಕೆಲಸಗಾರರಿಗೆ ರಾತ್ರಿ ಊಟ ನೀಡಿ ಮನೆಗೆ ತಮ್ಮ ಟೆಂಪೋ ಟ್ರಾಕ್ ಜೀಪ್‌ನಲ್ಲಿ ವಾಪಸ್ ಆಗುತ್ತಿದ್ದಾಗ ತಿಮ್ಲಾಪುರ ಗ್ರಾಮದ ಬಳಿಯೇ ರಸ್ತೆಯಲ್ಲಿ ಏಕಾಏಕಿ ಎದುರಾದ ಒಂಟಿ ಸಲಗ ಜೀಪ್‌ನ ಮೇಲೆ ದಾಳಿ ನಡೆಸಿ ಜಖಂಗೊಳಿಸಿದೆ. ಜೀಪ್‌ನ ಮುಂಭಾಗವನ್ನು ತಮ್ಮ ತಲೆಯಿಂದ ಜಜ್ಜಿರುವ ಆನೆ ಜೀಪ್‌ನ ಸುತ್ತ ನಾಲ್ಕೈದು ಬಾರಿ ಸುತ್ತಿ ಗಾಜುಗಳನ್ನು ಹೊಡೆದು ಹಾಕಿದೆ.
ಅದೃಷ್ಟವಶಾತ್ ಪಾರು: ವಾಹನದ ಬಾಯ್ನೆಟ್‌ಗೆ ದಂತಗಳಿಂದ ಚುಚ್ಚಿ ತೂತು ಮಾಡಿದ್ದು, ನಂತರ ಆನೆ ಗಾಡಿಯನ್ನು ಎತ್ತಿ ಕೆವಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಆನೆಯ ದಂತ ಮುಂಭಾಗದ ಚಕ್ರಕ್ಕೆ ಚುಚ್ಚಿಕೊಂಡ ಪರಿಣಾಮ ಚಕ್ರ ಹೊಡೆದಿದೆ. ಇದರ ದೊಡ್ಡ ಸದ್ದಿಗೆ ಹೆದರಿದ ಕಾಡಾನೆ ಅಲ್ಲಿಂದ ಫಲಾಯನವಾಗಿದೆ. ಈ ಸಂದರ್ಭದಲ್ಲಿ ಧೃತಿಗೆಡದೆ ಉಪಾಯದಿಂದ ಗಾಡಿಯ ತಳಭಾಗದಲ್ಲಿ ಅವಿತು ಕುಳಿತುಕೊಳ್ಳದಿದ್ದರೆ ಆನೆ ದಾಳಿಗೆ ಮತ್ತೊಂದು ಪ್ರಾಣ ಹೋಗುವ ಸಾಧ್ಯತೆ ಇತ್ತು.
ಅದೃಷ್ಟವಶಾತ್ ಗಾಡಿಯ ಟೈರ್ ಹೊಡೆದಾಗ ಬಂದ ಶಬ್ದದ ಪರಿಣಾಮದಿಂದ ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಇಲ್ಲಿಂದ ಹೋದ ಕಾಡಾನೆ ಅಡಿಬಯಲು ಗ್ರಾಮದೊಳಗೆ ನುಗ್ಗಿ ಗ್ರಾಮದ ಪ್ರಕಾಶ್ ಎಂಬವರ ಮನೆಯ ಪಕ್ಕದಲ್ಲಿ ಒಟ್ಟಿದ ಭತ್ತದ ಕಣಕ್ಕೆ ನುಗ್ಗಿದ್ದ ಭತ್ತವನ್ನು ತಿಂದು ಹಾಳುಗೆಡವಿ ನಷ್ಟ ಉಂಟು ಮಾಡಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಇದ್ದವರೆಲ್ಲರು ವಿದ್ಯುತ್ ದೀಪಗಳನ್ನು ಹಾಕದೆ ಬುದ್ಧಿವಂತಿಕೆ ಮೆರದು ಸದ್ದು ಮಾಡದೆ ಭಯದಲ್ಲೇ ಈಡೀ ರಾತ್ರಿ ಎಚ್ಚರಿಕೆಯಿಂದ ರಾತ್ರಿ ಕಳೆದಿದ್ದಾರೆ.
ಭೇಟಿ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಸೀಲ್ದಾರ್ ಶಾರದಾಂಬ, ಕಾಡಾನೆ ಹಿಡಿಯುವ ಕಾರ್ಯಾಚರಣೆ ಒಂದೆರಡು ದಿನಗಳಲ್ಲಿ ಪ್ರಾರಂಭವಾಗಲಿದ್ದು, ಕಾಡಾನೆಗಳು ಗ್ರಾಮದೊಳಗೆ ನುಸುಳಿ ದಾಳಿ ಮಾಡುತ್ತಿರುವುದರಿಂದಾಗಿ ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು.
ರಾತ್ರಿ ವೇಳೆಯಲ್ಲಿ ತುರ್ತು ಕೆಲಸದ ವರತಾಗಿ ಹೊರ ಹೋಗಬಾರದು. ಆನೆಗಳನ್ನು ಹಿಡಿಯುವವರೆಗೂ ತಾವು ಎಚ್ಚರಿಕೆ ವಹಿಸುವುದರ ಜೊತೆಗೆ ಸಹಕರಿಸಬೇಕು ಎಂದು ತಿಳಿಸಿದರು.
'ಬಸ್ ವ್ಯವಸ್ಥೆ ಕಲ್ಪಿಸಿ'
ಅಡಿಬಯಲು ಗ್ರಾಮದ ವಿದ್ಯಾರ್ಥಿನಿ ನಿರ್ಮಲ ಮಾತನಾಡಿ, ಗ್ರಾಮದಿಂದ ಶಾಲಾ-ಕಾಲೇಜುಗಳಿಗೆ ಹೋಗಲು 2 ಕಿಮೀ ನಡೆದು ಪಕ್ಕದ ಗ್ರಾಮಕ್ಕೆ ಹೋಗಬೇಕಿದೆ. ನಮಗೆ ಕಾಲೇಜು ಬೆಳಗ್ಗೆ 8.30ಕ್ಕೆ ಪ್ರಾರಂಭವಾಗುವುದರಿಂದ ನಾವು ಹಾಸನಕ್ಕೆ ಹೋಗಲು ಬೆಳಗಿನ ಜಾವವೇ ಬಸ್‌ಗೆ ಪಕ್ಕದ ಗ್ರಾಮಕ್ಕೆ ನಡೆದುಕೊಂಡು ಹೋಗಬೇಕಿದೆ. ಹಲವಾರು ಬಾರಿ ರಸ್ತೆಗೆ ಅಡ್ಡಲಾಗಿ ಆನೆಗಳು ನಿಂತಿರುವುದನ್ನು ಕಂಡು ಓಡಿ ಹೋಗಿದ್ದೇವೆ. ಗ್ರಾಮದ ಅರ್ಧದಷ್ಟು ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಹೋಗುವುದನ್ನು ಬಿಟ್ಟಿದ್ದಾರೆ. ಇನ್ನು ಕೆಲವರು ಪಟ್ಟಣದಲ್ಲಿ ಇರುವ ಹಾಸ್ಟೆಲ್ ಅನ್ನು ಆಶ್ರಯಿಸಿಕೊಂಡಿದ್ದಾರೆ. ಈಗ ಬೆಳಗಿನ ಜಾವದಲ್ಲಿ ವಿಪರೀತ ಮಂಜು ಬೀಳುತ್ತಿದ್ದು, ಮಂಜಿನ ದಟ್ಟಣೆಯಿಂದಾಗಿ ರಸ್ತೆ ಕಾಣಿಸುವುದಿಲ್ಲ.
ಆ ಸಂದರ್ಭದಲ್ಲಿ ಆನೆಗಳೇನಾದರು ಎದುರಾದರೆ ನಮ್ಮ ಪ್ರಾಣ ಹೋಗುತ್ತದೆ. ಅಲ್ಲದೆ ಗ್ರಾಮದ ಸುತ್ತಮುತ್ತಲಲ್ಲಿ ಓಡಾಡುತ್ತಿರುವ ಆನೆ ಪುರಬೈರವನಹಳ್ಳಿಯಲ್ಲಿ ಮಹಿಳೆಯನ್ನು ಬಲಿ ಪಡೆದ ಆನೆಯಾಗಿದೆ. ಆದ್ದರಿಂದ ತಹಸೀಲ್ದಾರ್ ಅವರು ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಮಾನತಾಡಿ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದರು.