ಕವಿಯ ಭಾವನೆ ಅರ್ಥೈಸಿಕೊಂಡು ಹಾಡಿ
ಕ.ಪ್ರ.ವಾರ್ತೆ , ಹಾಸನ , ಜ 14
ಕವಿಯ ಭಾವನೆಗಳನ್ನು ಕಾವ್ಯವಾಗಿ ಹೊರಡಿಸುವ ಸಾಮರ್ಥ್ಯ ಹಾಡುಗಾರನಿಗೆ ಇದೆ. ಹಾಗಾಗಿ ಹಾಡುಗಾರ ಕವಿಯ ಭಾವನೆಗಳನ್ನು ಸಮಗ್ರವಾಗಿ ಅರ್ಥೈಸಿಕೊಂಡು ಹಾಡಬೇಕು. ಆಗ ಕಾವ್ಯ ರಸಧಾರೆಯಾಗಿ ಹರಿದು ಬರುತ್ತದೆ. ಕವಿಗೆ ಗೌರವವನ್ನೂ ತಂದು ಕೊಡುತ್ತದೆ ಎಂದು ಸಂಗೀತ ಶಿಕ್ಷಕಿ ಸುಧಾ ನಟರಾಜ್ ಹೇಳಿದರು.
ನಗರದ ಬಿಜಿವಿಎಸ್ ಕಚೇರಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ತಾಲೂಕು ಸಮಿತಿ ಹಮ್ಮಿಕೊಂಡಿದ್ದ ಡಾ. ಜಿಎಸ್ಎಸ್ ಕವನ ಗಾಯನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿ, ಹಾಡು ಗಾರರು ಉಚ್ಛಾರ, ಭಾಷೆಯ ಬಳಕೆ ಮತ್ತು ಅರ್ಥವನ್ನು ಸೂಕ್ಷ್ಮವಾಗಿ ಗಮನಿಸಿ ಕವಿಭಾವನೆಗೆ ಚ್ಯುತಿ ಬರದಂತೆ ಹಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜಿವಿಎಸ್, ಜಿಲ್ಲಾ ಕಾರ್ಯದರ್ಶಿ ಅಹಮದ್, ಹಾಡುಗಾರ ಮತ್ತು ಕೇಳುಗರ ನಡುವಿನ ಸಮಧುರ ಬಂಧನವನ್ನು ಹಾಡುಗಾರಿಕೆಗಿಂತ ಮಿಗಿಲಾಗಿ ಯಾವ ಸಾಂಸ್ಕೃತಿಕ ಪ್ರಾಕಾರವೂ ಗಟ್ಟಿಯಾಗಿ ಕಟ್ಟಿಕೊಡುವುದಿಲ್ಲ ಎಂದರು.
ತೀರ್ಪುಗಾರರಾಗಿ ಭಾಗವಹಿಸಿದ್ದ ಸಾಹಿತಿ ಎನ್.ಎಲ್.ಚನ್ನೇಗೌಡ ತೀರ್ಪು ನೀಡಿ ಮಾತನಾಡಿ, ಡಾ. ಜಿಎಸ್ಎಸ್ ನಮ್ಮ ಕಾಲದ ಮೇರು ಸಾಹಿತಿ. ಅವರ ಸಾಹಿತ್ಯ ಕೃಷಿ ಮಾನವ ಲೋಕದ ಎಲ್ಲ ಮಗ್ಗಲುಗಳನ್ನೂ ಆವರಿಸಿದೆ. ಹಾಗಾಗಿ ಅವರಿಗೆ ಸ್ತ್ರೀ ಸಂವೇದನೆ, ಪರಿಸರ ಸಂವೇದನೆ, ನವೋದಯದ ಹೊಸ ಬಂಡಾಯದ ಸಂವೇದನೆಯನ್ನೂ ಅವರ ಕಾವ್ಯ ಲೋಕ ಆವರಿಸಿ ಭಾವಗೀತೆ, ಕ್ರಾಂತಿಗೀತೆ, ಸಂವೇದನಾ ಗೀತೆಯಾಗಿ ಹೊರಬರಲು ಸಾಧ್ಯವಾಗಿದೆ ಎಂದರು.
ಮತ್ತೊಬ್ಬ ತೀರ್ಪುಗಾರರಾಗಿ ಭಾಗವಹಿಸಿದ್ದ ಸಂಗೀತ ಶಿಕ್ಷಕಿ ಸವಿತ ಜಿಎಸ್ಎಸ್ ಕವನವನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಹಾಸನ ತಾಲೂಕು ಅಧ್ಯಕ್ಷೆ ಮಮತ ಶಿವು ವಂದಿಸಿದರು. ಇದಕ್ಕೂ ಮೊದಲು ಬಿಜಿವಿಎಸ್ ತಾ ಸಹಕಾರ್ಯದರ್ಶಿ ವೇದಶ್ರೀರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು.
ಬಿಜಿವಿಎಸ್ ತಾಲೂಕು ಸಮಿತಿ ಸದಸ್ಯ ರವೀಶ್ ಕಾರ್ಯಕ್ರಮ ನಿರೂಪಿಸಿದರು. ತಾ. ಬಿಜಿವಿಎಸ್ ಖಜಾಂಚಿ ರೇಖಾ ಸ್ವಾಗತಿಸಿದರು. ಸುಮಾರು 20 ನೋಂದಾಯಿತ ಹಿರಿಯರು ಮತ್ತು ಕಿರಿಯರು ಪ್ರತ್ಯೇಕವಾಗಿ ಕವನಗಳನ್ನು ಹಾಡಿದರು.