ಕಾಡಾನೆ ದಾಳಿಗಿನ್ನು ಚಿಂತಿಸಬೇಕಿಲ್ಲ; ಡಿಸಿ ಅಭಯ
ಕ.ಪ್ರ.ವಾರ್ತೆ , ಆಲೂರು , ಜ 14
ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಮಾಗಡಿಹಳ್ಳಿಯಲ್ಲಿ ಆನೆ ಕಾರ್ಯಾಚರಣೆಗೆ ನಿರ್ಮಿಸಿರುವ ಆನೆ ಕ್ಯಾಂಪ್ಗೆ ಮಂಗಳವಾರ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆನೆ ಹಿಡಿಯುವ ಕಾರ್ಯಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದನ್ನು ಪರಿಶೀಲಿಸಿದ ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಾಚರಣೆ ಪ್ರಾರಂಭಿಸುವ ಸಮಯ ಹಾಗೂ ಕಾರ್ಯಾಚರಣೆಗೆ ಬೇಕಾದ ಸವಲತ್ತುಗಳ ಬಗ್ಗೆ 1 ತಾಸಿಗೂ ಹೆಚ್ಚು ಸಮಯ ಚರ್ಚಿಸಿದರು.
ನಂತರ ಸಾಕಾನೆಗಳಾದ ಅಭಿಮನ್ಯು, ಬಲರಾಮ, ಅರ್ಜುನ, ಪ್ರಶಾಂತ ಸೇರಿದಂತೆ 5 ಆನೆಗಳ ಆರೋಗ್ಯ ಸ್ಥಿತಿಗಳನ್ನು ವೀಕ್ಷಿಸಿ, ಅಧಿಕಾರಿಗಳ ಬಳಿ ವಿಚಾರಿಸಿದರು. ಅಭಿಮನ್ಯು ಆನೆಯ ಮೇಲೆ ಸವಾರಿ ನಡೆಸಿ ಮಾಗಡಿಹಳ್ಳಿ ಸುತ್ತಮುತ್ತಲ ಅರಣ್ಯ ಪ್ರದೇಶದ ವೀಕ್ಷಣೆ ನಡೆಸಿದರು.
ನಂತರ 30 ಮಂದಿಗೂ ಹೆಚ್ಚಿರುವ ಕಾವಾಡಿಗರು ಹಾಗೂ ಮಾವುತರನ್ನು ಮಾತಾಡಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆರ್ಎಫ್ಒ ಅವರಿಗೆ ತಿಳಿಸಿದರು. ವೈದ್ಯರು ಹಾಗೂ ಅರವಳಿಗೆ ಮದ್ದು ನೀಡುವ ಗುರಿಕಾರರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿರುವ ತೋಟದ ಮನೆಗೆ ಭೇಟಿ ನೀಡಿ ಅಲ್ಲಿ ಇರಿಸಲಾಗಿರುವ ಸೆಣಬಿನ ಹಗ್ಗ, ಸರಪಳಿ ಸೇರಿದಂತೆ ಮುಂತಾದ ಸಲಕರಣೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಜಮಾವಣೆಗೊಂಡಿದ್ದ ನೂರಾರು ಗ್ರಾಮಸ್ಥರೊಂದಿಗೆ ಚರ್ಚಿಸಿ ಕಾಡಾನೆ ಕಾರ್ಯಾಚರಣೆಗೆ ಎಲ್ಲರೂ ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾಗಡಿಹಳ್ಳಿಯಿಂದ ಕೊಡಗನ್ನು ಸಂಪರ್ಕಿಸುವ ಜನಾರ್ದನಹಳ್ಳಿ ಸೇತುವೆ ಕಳೆದ 14 ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದ್ದು, ಶೀಘ್ರ ಅದನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಅವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳನ್ನು ಎರಡು-ಮೂರು ದಿನಗಳಲ್ಲಿ ಸ್ಥಳಕ್ಕೆ ಕರೆ ತರುವುದಾಗಿ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ 5 ಸಾಕಾನೆಗಳು ಮಾಗಡಿಹಳ್ಳಿ ಕ್ಯಾಂಪ್ಗೆ ಬಂದಿದ್ದು, ಮಾವುತರು, ಕಾವಾಡಿಗರು ಆನೆಗಳೊಂದಿಗೆ ಬಂದಿದ್ದಾರೆ. ಅವರಿಗೆ ಊಟ ವಸತಿಗಾಗಿ ಸಕಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಮತ್ತೊಂದು ಆನೆ ಶೀಘ್ರವೇ ಸ್ಥಳಕ್ಕೆ ಬರಲಿದೆ. ಈಗಾಗಲೇ ಉಮಾಶಂಕರ್ ಎಂಬ ವೈದ್ಯರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಒಂದು ದಿನದಲ್ಲಿ ಚೆಟ್ಟಿಯಪ್ಪ ಹಾಗೂ ನಾಗರಾಜ್ ಎಂಬ ವೈದ್ಯರು ಬರಲಿದ್ದು, ಅರವಣಿಗೆ ಚುಚ್ಚುಮದ್ದು ತರಲಿದ್ದಾರೆ. ತಜ್ಞ ಗುರಿಗಾರರಾದ ಕರಂಬಯ್ಯ ಹಾಗೂ ಇತರರು ಬರಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಡಳಿತವು ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಅಧಿಕಾರಿ ವರ್ಗ ಕಾರ್ಯೋನ್ಮುಖರಾಗಿದ್ದಾರೆ. 2 ದಿನಗಳಿಂದ ಪುನಾ ಕಾಡಾನೆ ಹಾವಳಿ ಪ್ರಾರಂಭವಾಗಿದ್ದು, ಕಳೆದ ಭಾನುವಾರ ರಾತ್ರಿಯಷ್ಟೆ ಅಡಿಬಯಲು, ತಿಮ್ಲಾಪುರ ಗ್ರಾಮದಲ್ಲಿ ಜೀಪ್ ಮೇಲೆ ದಾಳಿ ನಡೆಸಿ ಕೂದಲೆಳೆಯಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅದೇ ರಾತ್ರಿ ಅಡಿಬಯಲು ಸುತ್ತಮುತ್ತಲ ಗ್ರಾಮದಲ್ಲಿ ಕಾಡಾನೆ ಮನೆಯ ಚಾವಣಿ ಕೆಡವಿ, ಅಪಾರ ಪ್ರಮಾಣದ ಬತ್ತ ತಿಂದು ನಷ್ಟ ಉಂಟುಮಾಡಿದೆ. ಇದರಿಂದ ಈ ಭಾಗದ ಜನರು ಭಯಭೀತರಾಗಿರುವುದು ತಿಳಿದಿದೆ. ಅರವಳಿಗೆ ಚುಚ್ಚುಮದ್ದು ಬಂದ ನಂತರ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದರು.
ನಾನು ಸಹ ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆಯನ್ನು ಪರಿಶೀಲಿಸುವೆ. ಅರವಳಿಗೆ ಮದ್ದು ದೊರೆಯುವುದು ವಿಳಂಬವಾಗಿರುವುದರಿಂದ ಕಾರ್ಯಾಚರಣೆ ಪ್ರಾರಂಭಿಸಲಾಗಿಲ್ಲ. ಕೇಂದ್ರ ಅರಣ್ಯ ಸಚಿವ ವೀರಪ್ಪ ಮೊಯ್ಲಿ ಅವರು ಈ ಭಾಗದಲ್ಲಿ ಇರುವ 25 ಆನೆಗಳನ್ನು ಹಿಡಿಯಲು ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಆದೇಶದ ಪ್ರತಿ ಅಧಿಕೃತವಾಗಿ ದೊರತ ತಕ್ಷಣ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದರು.
ಈ ಭಾಗದ ಜನರ ಸಂಕಷ್ಟ ತೀರುವ ದಿನ ಸನ್ನಿಹಿತವಾಗಿದೆ. ಅಲ್ಲೀವರೆಗೂ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡದೇ ಎಚ್ಚರಿಕೆ ವಹಿಸಿ ಸಹಕರಿಸಬೇಕು. ಜನರ ಕಷ್ಟಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ. ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಭಾಗದ ಜನರು ಭಯಭೀತರಾಗಿರುವುದು ತಿಳಿದಿದೆ. ಅರವಳಿಗೆ ಚುಚ್ಚುಮದ್ದು ಬಂದ ನಂತರ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಈ ಭಾಗದ ಜನರ ಸಂಕಷ್ಟ ತೀರುವ ದಿನ ಸನ್ನಿಹಿತವಾಗಿದೆ. ಯಾರೂ ಚಿಂತಿಸುವ ಅಗತ್ಯವಿಲ್ಲ.
- ವಿ. ಅನ್ಬುಕುಮಾರ್, ಜಿಲ್ಲಾಧಿಕಾರಿ