ಯೋಜನೆಗಳ ಸದುಪಯೋಗಕ್ಕೆ ಕರೆ
ಕ.ಪ್ರ.ವಾರ್ತೆ , ಹಾಸನ , ಜ 14
ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಪಾರ್ವತಮ್ಮ ನಂಜುಂಡಾಚಾರ್ ಹೇಳಿದರು.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಸಾಮಾಜಿಕ ಭದ್ರತಾ ಯೋಜನೆ, ವಾರ್ತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಅರಕಲಗೂಡು, ಕೊಣನೂರಿನ ಸಿ.ಎಂ.ಎಸ್.ಎಸ್. ಸೇವಾ ಸಂಸ್ಥೆ, ಬನ್ನೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಇತ್ತೀಚೆಗೆ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಯೋಜನ ಪಡೆದುಕೊಳ್ಳಬೇಕು: ಈ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿಯಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಮನಸ್ವಿನಿ, ವಿಧವೆಯರ ನಿವೃತ್ತಿ ವೇತನ, ರಾಷ್ಟ್ರೀಯ ಕುಟುಂಬ ಲಾಭ ಯೋಜನೆಗಳು 1995ರಲ್ಲಿ ಜಾರಿಗೆ ಬಂದಿದ್ದು, ಇದರನ್ವಯ ಫಲಾನುಭವಿಗಳು ಸಂಬಂಧಪಟ್ಟ ಇಲಾಖೆಗಳ ಮೂಲಕ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ತಾಲ್ಲೂಕಿನ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಮಂಜುಳ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳಿದ್ದು, ವಿಶೇಷವಾಗಿ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಇಲಾಖೆ ಶ್ರಮಿಸುತ್ತಿದ್ದು, ಇದರ ಲಾಭವನ್ನು ಫಲಾನುಭವಿಗಳು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಸೇವೆ ಒದಗಿಸಲು ಶ್ರಮ: ಕೊಣನೂರಿನ ಸಿ.ಎಂ.ಎಸ್.ಎಸ್ ಸೇವಾ ಸಂಸ್ಥೆಯ ಸಂಯೋಜಕಿ ಅಂತೋಣಿ ಮೇರಿ ಅವರು ಮಾತನಾಡಿ, ಸಂಸ್ಥೆಯು ಸಾಮಾಜಿಕ ಭದ್ರತೆಯ ಸೇವೆಗಳನ್ನು ಒದಗಿಸಲು ಗ್ರಾಮೀಣ ಪ್ರದೇಶಗಳಲ್ಲಿ ಶ್ರಮಿಸುತ್ತಿದೆ ಎಂದರು.
ಸೌಲಭ್ಯ ಪಡೆದುಕೊಳ್ಳಿ: ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಚ್.ಟಿ. ಧನಲಕ್ಷ್ಮಿ ಮಾತನಾಡಿ, ಸರ್ಕಾರವು ಜಾರಿಗೆ ತಂದಿರುವ ಸರ್ವಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸಿಗುವ ಶಿಕ್ಷಣದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ವಿವರಿಸಿದರು.
ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸುಮಾ ಮೋಹನ್, ಸದಸ್ಯರಾದ ಶೇಖರ್, ಸೋಮಶೇಖರ್, ರಾಮಚಂದ್ರ, ಮಂಜಣ್ಣ, ಎ.ಸಿ ರಾಜು, ಶಾಲಾ ಶಿಕ್ಷಕರಾದ ಎಂ.ರವೀಂದ್ರ ಮತ್ತಿತರರು ಹಾಜರಿದ್ದರು. ಶಾಲಾ ಶಿಕ್ಷಕಿ ಪ್ರತಿಭಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಕೆ.ಪಿ. ಭಾಗೀರತಿ ವಂದಿಸಿದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗೆ, ಪುರುಷರಿಗೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.