ವಾಲಿಬಾಲ್ ಪಂದ್ಯಾವಳಿ; ಬೆಂಗಳೂರು ಎಲ್ಐಸಿ ಪ್ರಥಮ
ಕ.ಪ್ರ.ವಾರ್ತೆ , ಅರಕಲಗೂಡು , ಜ 14
ಪಟ್ಟಣದ ಅರಕಲಗೂಡು ಯೂತ್ ವಾಲಿಬಾಲ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಎಲ್ಐಸಿ ತಂಡಕ್ಕೆ ಪ್ರಥಮ ಬಹುಮಾನ ದೊರೆತಿದೆ.
ಮಂಗಳೂರಿನ ಆಳ್ವಾಸ್ ತಂಡ ದ್ವಿತೀಯ ಸ್ಥಾನ ಪಡೆದರೆ ಕಬಿನಿ ತಂಡ ಮತ್ತು ಅನೂಪ್ ಮತ್ತು ಸುಜೀತ್ ತಂಡ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪಂದ್ಯಾವಳಿಗೆ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ಹೊಳೆನರಸೀಪುರ, ಕೇರಳ ಮುಂತಾದ ಕಡೆಗಳಿಂದ ವಿವಿಧ ತಂಡಗಳು ಭಾಗವಹಿಸಿದ್ದವು.
ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಅನೂಪ್- ಉತ್ತಮ ಹೊಡೆತಗಾರ(ಭಾರತೀಯ ತಂಡದ ಆಟಗಾರ), ರಿಯಾಜ್- ಉತ್ತಮ ಸೆಟ್ಟರ್(ಆಳ್ವಾಸ್ ತಂಡ), ಐಸಾಕ್ (ವಿಕ್ರಮ್)- ಉತ್ತಮ ತಡೆತಗಾರ(ಆಳ್ವಾಸ್ ತಂಡ), ಆಳ್ವಾಸ್ ತಂಡ-ಉತ್ತಮ ತಂಡ ಎಂಬ ಹಿರಿಮೆಗೆ ಪಾತ್ರರಾದರು.
ಕಿಕ್ಕಿರಿದ ಅಭಿಮಾನಿಗಳು: ಬಹು ವರ್ಷಗಳ ನಂತರ ಅರಕಲಗೂಡು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯನ್ನು ನಿರೀಕ್ಷೆಗೂ ಮೀರಿದ ಕ್ರೀಡಾ ಪ್ರೇಮಿಗಳು ವೀಕ್ಷಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು.
ಬೆಟ್ಟಿಂಗ್ ಮಹಾಪೂರ: ತಾಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ಮಹಾಪೂರವೇ ನಡೆಯಿತು. ಅಭಿಮಾನಿಗಳು ಒಂದೊಂದು ಪಂದ್ಯಕ್ಕೂ 500ರಿಂದ 1000, 2000ದ ಬೆಟ್ಟಿಂಗ್ಗಳು ನಡೆದವು.
ಫೈನಲ್ ತಲುಪಿದ ಬೆಂಗಳೂರು ಎಲ್ಐಸಿ ಮತ್ತು ಮಂಗಳೂರು ಆಳ್ವಾಸ್ ತಂಡಗಳ ನಡುವೆ ನಡೆದ ಹಣಾಹಣಿಯಲ್ಲಂತೂ 5 ಸಾವಿರದವರೆಗೂ ಸ್ಪಾಟ್ ಬೆಟ್ಟಿಂಗ್ ನಡೆಯುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು. ವೀಕ್ಷಕರ ಜೋಶ್ ಆಟಗಾರರ ಹುಮ್ಮಸ್ಸು ಹೆಚ್ಚಿಸಿತ್ತು.