ವಿಜೃಂಭಣೆಯ ಬ್ರಹ್ಮ ರಥೋತ್ಸವ
ಕ.ಪ್ರ.ವಾರ್ತೆ , ಹಾಸನ , ಜ 14
ಶ್ರೀ ಲಕ್ಷ್ಮೀಜನಾರ್ಧನ ಸ್ವಾಮಿಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಜನರ ನಡುವೆ ಶ್ರದ್ಧಾಭಕ್ತಿಯಿಂದ ಸೋಮವಾರ ನಡೆಯಿತು.
ತಾಲೂಕಿನ ಬೈಲಹಳ್ಳಿಯ ಶ್ರೀರಾಮ ಸೇವಾ ಸಮಿತಿ ಟ್ರಸ್ಟ್ವತಿಯಿಂದ ಹಮ್ಮಿಕೊಂಡಿದ್ದ ವಿಜೃಂಭಣೆಯ ಪೂಜಾ ಕಾರ್ಯಗಳು ಶ್ರೀವಿಜಯನಾಮ ಸಂವತ್ಸರದ ಪುಷ್ಯ ಶುಕ್ಲ ದಶಮಿ ಜ.10ರಿಂದ ಪ್ರಾರಂಭವಾದವು. ಮಾಘ ಶುಕ್ಲ ಚತುರ್ಥಿಯಾದ ಮಂಗಳವಾರ ಶ್ರೀಲಕ್ಷ್ಮೀಜನಾರ್ಧನಸ್ವಾಮಿ ಬ್ರಹ್ಮ ರಥೋತ್ಸವವು ವೈಭವಯುತವಾದ ಪೂಜಾ ಕಾರ್ಯಗಳ ನಡುವೆ ಸಂಭ್ರಮ ಸಡಗರದಿಂದ ನೆರವೇರಿತು. ಜಿಲ್ಲೆಯಿಂದಲ್ಲದೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಭಕ್ತರು ಆಗಮಿಸಿದ್ದರು. ಭಕ್ತಾಧಿಗಳು ದೇವಾಲಯದ ಸುತ್ತಲೂ ತೇರನ್ನು ಎಳೆದು ಮೆರವಣಿಗೆ ನಡೆಸಿದರು. ನಾಡಿನಲ್ಲಿ ಮಳೆ ಬೆಳೆ ಸುಭಿಕ್ಷವಾಗಿರಲಿ ಎಂದು ಭಕ್ತರು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಪ್ರತಿ ವರ್ಷವು ಸಂಕಾತ್ರಿ ಹಬ್ಬದ ಮುನ್ನಾ ದಿನ ಬ್ರಹ್ಮೋತ್ಸವ ನಡೆಯಲಿದ್ದು, ಬೆಳಗ್ಗೆ ಸೂರ್ಯಮಂಡಲೋತ್ಸವ, ವೇದ ಪಾರಾಯಣ, ದಿವ್ಯ ಪ್ರಬಂಧ ಸೇವೆ, ಶಾತ್ತುಮೊರೆ ಸೇವೆ ನಡೆಯುವುದು. ಬಳಿಕ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಪುಷ್ಪಾಲಂಕೃತ ದಿವ್ಯ ರಥಾರೋಹಣ, ಭಾಗವತರಿಗೆ ಉಪವಾರ ಮತ್ತು ರಥಾರೋಹಣದ ನಂತರ ಭಾಗವತ ತದಿಯಾರಾಧನೆ, ಕುಂಕುಮೋತ್ಸವ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.