'ವಿವೇಕರ ಆದರ್ಶ ಪಾಲಿಸಿ'
ಹಾಸನ: ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳನ್ನು ಶಾಲಾ ಹಂತದಿಂದಲೇ ಮಕ್ಕಳಿಗೆ ತಿಳಿಸಿಕೊಟ್ಟು ಮಕ್ಕಳನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಹರಿಹರಪೂರ ಶ್ರೀಧರ ಹೇಳಿದರು.
ನಗರದ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ಆಧ್ಯಾತ್ಮಿಕ ಕೇಸರಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿವೇಕಾನಂದ ಅವರು ತಮ್ಮ ಜೀವಿತದ ಅಲ್ಪಾವಧಿಯಲ್ಲಿ ಇಡಿ ವಿಶ್ವವೇ ಅವರನ್ನು ಗುರುತಿಸುವಂಥ ಸಾಧನೆ ಮಾಡಿದರು. ಯುವಕರು ಸ್ವಾಮಿ ವಿವೇಕಾನಂದ ಅವರ ಬಗ್ಗೆ ಅಧ್ಯಯನ ನಡೆಸಿ ಉತ್ತಮ ಸಾಧನೆ ಮಾಡಬೇಕು. ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಉಮಾ ಎಸ್.ಪಾಟೀಲ್ ಮಾತನಾಡಿ, ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾಜದ ಸಾಧಕರ ಜೀವನ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕಾದ ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಸ್ವಾಮಿ ವಿವೇಕಾನಂದ ವೇಷ ತೊಟ್ಟು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯ ನಿರ್ವಾಹಕ ವಿಜಯ್ಕುಮಾರ್ ನಾರ್ವೆ, ಟೈಮ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಂದ್ರ ಕುಮಾರ್, ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಇದ್ದರು.