ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಂಕ್ರಾಂತಿ ಜನರ ಮನವ ಬೆಸೆವ ಕೊಂಡಿ'

Vishwanath S
Updated On : 15 Jan 2014, 12:59 pm

ಹಾಸನ: ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶಿವಪಾರ್ವತಿ ದೇವಾಲಯ ಆವರಣದಲ್ಲಿ ಮಕರ ಸಂಕ್ರಾತಿ ವಿಶೇಷತೆ ಕುರಿತು ಸಂವಾದ ಮತ್ತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಮೈತ್ರೇಯಿ ವಿಪ್ರ ಮಹಿಳಾ ಸಂಘದ ಪ್ರಧಾನ ಸಂಚಾಲಕಿ ಲೀಲಾವತಿ ಮಾತನಾಡಿ, ಸಂಕ್ರಾಂತಿ ಹಬ್ಬಕ್ಕೆ ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಆಯಾಮಗಳಿದ್ದು, ಹಬ್ಬವು ಜನರ ನಡುವೆ ಪ್ರೀತಿ, ವಿಶ್ವಾಸ, ಅನುಬಂಧ ಸಂಭ್ರಮವನ್ನು ಮೂಡಿಸುತ್ತಿದೆ ಎಂದರು.
ಶಂಕರಮಠದ ಧರ್ಮಾಧಿಕಾರಿ ಎಂ.ಎ.ಶ್ರೀಕಂಠಯ್ಯ ಮಾತನಾಡಿ, ಸೂರ್ಯ ತನ್ನ ಪಥ ಬದಲಿಸುವ ಬಗ್ಗೆ ನಮ್ಮ ಪೂರ್ವಿಕರು ಕರಾರುವಕ್ಕಾಗಿ ಲೆಕ್ಕ ಹಾಕಿ ಕೊಟ್ಟಿದ್ದು, ಈ ಉತ್ತರಾಯಣ ಪುಣ್ಯಕಾಲದಲ್ಲಿ ಸಾವಪ್ಪಿದರೆ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಇದೆ ಎಂದು ವಿವರಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ಮೂರ್ತಿ ಮಾತನಾಡಿ, ಹಬ್ಬವು ಸಂಸ್ಕೃತಿ, ಸಂಘಟನೆ, ಸಾಮರಸ್ಯದ ಪ್ರತೀಕ ಎಂದರು. ನಗರ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆ.ಪಿ.ಸತ್ಯಪ್ರಮೋದ್ ಮಾತನಾಡಿ, ಇಂದು ನಮ್ಮ ಮಕ್ಕಳಿಗೆ ಹಬ್ಬಗಳ ಬಗ್ಗೆ ತಿಳಿವಳಿಕೆ ಇಲ್ಲವಾಗಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯ ವಿಶಿಷ್ಟತೆಯನ್ನು ವೈಜ್ಞಾನಿಕ ಆಯಾಮದಲ್ಲಿ ಪರಿಚಯಿಸುವ ಅಗತ್ಯವಿದೆ ಎಂದರು.
ನಗರಸಭಾ ಸದಸ್ಯ ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್, ವೇದಾ ಮೋಹನ್ ಮಾತನಾಡಿದರು.  ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ದೀಪ್ತಿ ವೆಂಕಟೇಶ್ ಸಂಗಡಿಗರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಸಂಕ್ರಾಂತಿ ಅಂಗವಾಗಿ ಸಕ್ಕರೆ ಅಚ್ಚು ಪ್ರದರ್ಶನ- ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಶಾರದಾ ಪ್ರಕಾಶ್ ಪ್ರಥಮ, ಶಾಂತ ರವಿಶಂಕರ್ ದ್ವಿತೀಯ, ವರಲಕ್ಷ್ಮಿ ತೃತೀಯ ಹಾಗೂ ವೀಣಾ ನಾಗರಾಜಯ್ಯ, ಮಂಜುಳ ವೆಂಕಟೇಶ್ ಸಮಾಧಾನಕರ ಬಹುಮಾನ ಪಡೆದರು. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ ಆಧ್ಯಕ್ಷತೆ ವಹಿಸಿದ್ದರು. ನಗರ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಂಜುಂಡಸ್ವಾಮಿ, ಎಕೆಬಿಎಂಎ ವಲಯ ಉಪಾಧ್ಯಕ್ಷ ಚಂದ್ರಶೇಖರ್, ಸುಕನ್ಯ ಮುಕುಂದ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಸಮಿತಿ ಆಧ್ಯಕ್ಷ ಬಸಪ್ಪ, ಸತ್ಯನಾರಾಯಣ, ಪರಶಿವಮೂರ್ತಿ ಇತರರು ಇದ್ದರು. ಮಂಗಳ ವೆಂಕಟೇಶ್ ನಿರೂಪಿಸಿದರು. ಮಮತ ಶ್ರೀನಿವಾಸ್ ಸ್ವಾಗತಿಸಿದರು. ಗೀತಾ ವಂದಿಸಿದರು.
ಸಡಗರಕ್ಕಿಲ್ಲ 'ಬರ'
ಅರಸೀಕೆರೆ: ನಿರಂತರ ಮಳೆಯ ಅಭಾವ, ತೀವ್ರ ಬರಗಾಲ, ತಾಲೂಕಿನ ಯಾವುದೇ ಕೆರೆಕಟ್ಟೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ. ಇಂಥ ಪರಿಸ್ಥಿತಿಯಲ್ಲೂ ಶಾಸ್ತ್ರೋಕ್ತವಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಲು ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮುಗಿ ಬೀಳುತ್ತಿದ್ದ ದೃಶ್ಯ ತಾಲೂಕಿನೆಲ್ಲೆಡೆ ಕಂಡುಬಂತು. ಪಟ್ಟಣದ ಗ್ರಂಥಾಲಯ ರಸ್ತೆ ಆವರಣದಲ್ಲಿ ಹಬ್ಬಕ್ಕೆ ಅವಶ್ಯಕತೆಯಿರುವ ಬೆಲ್ಲ, ಎಳ್ಳು, ಕಬ್ಬು, ಹೂವಿನ ವ್ಯಾಪಾರ ಬಲು ಜೋರಾಗಿತ್ತು. ಬೆಲೆ ಏರಿಕೆ ನಡುವೆಯೂ ಹಬ್ಬ ಆಚರಿಸಬೇಕಿರುವುದರಿಂದ ವರ್ತಕರು ನಿಗದಿಪಡಿಸಿರುವ ಬೆಲೆಗೆ ವಸ್ತುಗಳನ್ನು ಕೊಳ್ಳಬೇಕಿದೆ. 1 ಡಜನ್ ಬಾಳೆಹಣ್ಣು 50, 1 ಮಾರು ಕಾಕಡ, ಸೇವಂತಿಗೆ ಹೂ 10-30ಕ್ಕೆ ಏರಿಕೆಯಾಗಿದ್ದರೆ, ಕನಕಾಂಬರ 40ರಂತೆ ಮಾರಾಟವಾಗುತ್ತಿತ್ತು. ಕಬ್ಬು 1 ಜಲ್ಲೆಗೆ 40, ಕೊಬ್ಬರಿ 80, ಬೆಲ್ಲ 40, ಎಳ್ಳು 230ರಂತೆ ಅಗತ್ಯ ವಸ್ತುಗಳು ದುಬಾರಿ ಬೆಲೆಗೆ ಮಾರಾಟವಾದವು.
ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ಗ್ರಂಥಾಲಯ ರಸ್ತೆ ಆವರಣದಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂದಿತು.
ಏರಿದ ಬೆಲೆ, ಇಳಿಯದ ಉತ್ಸಾಹ
ಕ.ಪ್ರ.ವಾರ್ತೆ ,  ಹಾಸನ ,  ಜ. 14
ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಸಂಕ್ರಾಂತಿ ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕುಗ್ಗಿಲ್ಲ.
ನಗರ ಪ್ರದೇಶದ ಜನ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುವ ಭರಾಟೆಯಲ್ಲಿ ತೊಡಗಿದರೆ, ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ರೈತರು ದನ, ಕರುಗಳನ್ನು ತೊಳೆದು, ಸಿಂಗರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಾಸನ ನಗರ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ, ಹೊಳೆನರಸೀಪುರ, ಬೇಲೂರು, ಅರಸೀಕೆರೆ ಮತ್ತು ಅರಕಲಗೂಡು ತಾಲೂಕು ಕೇಂದ್ರಗಳಲ್ಲಿ ಕಬ್ಬು, ಹೂವು, ಸಿದ್ಧ ಮಾದರಿಯ ಎಳ್ಳು- ಬೆಲ್ಲ ಮತ್ತಿತರ  ವಸ್ತುಗಳ ಮಾರಾಟ ಶನಿವಾರ ಜೋರಾಗಿಯೇ ನಡೆಯಿತು. ಎರಡು ಜಲ್ಲೆ ಕಬ್ಬಿಗೆ 30ರಿಂದ 60 ಇದ್ದರೆ, ಮಾರು ಹೂವಿನ ಬೆಲೆ 65ರಿಂದ 70 ಇತ್ತು. ಸೇಬು ಕೆಜಿಗೆ 120ಕ್ಕೆ ಮಾರಾಟವಾಗುತ್ತಿತ್ತು. ಮಾವಿನ ಸೊಪ್ಪು ಒಂದು ಕಟ್ಟಿಗೆ 10 ಆಗಿದೆ. ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನರು ಹಬ್ಬದ ಅಗತ್ಯ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿ ಬೆಲೆಗಳನ್ನು ಲೆಕ್ಕಿಸದೆ ವಸ್ತುಗಳನ್ನು ಖರೀದಿಸಿದರು. ಮಹಿಳೆಯರು ಬಟ್ಟೆ ಅಂಗಡಿಗಳಿಗೆ ನುಗ್ಗಿ ಹೊಸ ಬಟ್ಟೆಗಳನ್ನು ಖರೀದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement