ಸಮಗ್ರ ನಿರ್ವಹಣೆಯಿಂದ ತೊಂಡೆ ಅಧಿಕ ಇಳುವರಿ
ಹಾಸನ: ಸಮಗ್ರ ಬೆಳೆ ನಿರ್ವಹಣಾ ಕ್ರಮ ಅನುಸರಿಸುವ ಮೂಲಕ ತೊಂಡೆ ಬೆಳೆಯಲ್ಲಿ ಅಧಿಕ ಇಳವರಿ ಪಡೆಯಲು ಸಾಧ್ಯ ಎಂದು ಬೇಲೂರು ತಾಲೂಕು ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ವಿಶ್ವನಾಥ್ ತಿಳಿಸಿದ್ದಾರೆ.
ಬೇಲೂರು ತಾಲೂಕಿನ ಕನ್ನಾಯಕನಹಳ್ಳಿ ಗ್ರಾಮದಲ್ಲಿ ಈಚೆಗೆ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ತೊಂಡೆಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನಿ ಡಾ. ಟಿ.ಎಸ್.ಮಂಜುನಾಥ ಸ್ವಾಮಿ ಮಾತನಾಡಿ, ತೊಂಡೆಬೆಳೆ ಬಹುವಾರ್ಷಿಕ ಬಳ್ಳಿ ತರಕಾರಿ ಬೆಳೆಯಾಗಿದ್ದು, ಇದರ ಕಾಯಿಗಳು ಸಾಧಾರಣ ಪ್ರಮಾಣದಲ್ಲಿ ಸಾರಜನಕ ಎ ಮತ್ತು ಬಿ ಅಂಶಗಳನ್ನು ಹೊಂದಿರುವುದರಿಂದ ಉತ್ತಮ ಪೌಷ್ಟಿಕಾಂಶ ಒಳಗೊಂಡಿರುತ್ತದೆ. ಕೆಂಪಾದ ಹಣ್ಣು ಮಧುಮೇಹ ನಿವಾರಕ ಗುಣಗಳನ್ನು ಹೊಂದಿದ್ದು, ಆಯುರ್ವೇದ ಮತ್ತು ಹೋಮಿಯೋಪಥಿ ಔಷಧಿಗಳಲ್ಲಿ ಬಳಸಲಾಗುತ್ತದೆ. ಸಮಗ್ರ ಬೆಳೆ ನಿರ್ವಹಣೆ ಕ್ರಮಗಳನ್ನು ಪಾಲಿಸಿದರೆ ಪ್ರತಿ ಹೆಕ್ಟೇರಿಗೆ 38,000 ಕೆಜಿಯಷ್ಟು ಇಳವರಿ ನಿರೀಕ್ಷಿಸಬಹುದು. 3ರಿಂದ 4 ವರ್ಷಗಳವರೆಗೆ ಬೆಳೆಯಬಹುದು ಎಂದು ತಿಳಿಸಿದರು. ಕನ್ನಾಯಕನಹಳ್ಳಿ ಗ್ರಾಮದ ಮಾಗಣ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನಿಗಳಾದ ಡಾ. ಎಸ್.ಚನ್ನಕೇಶವ, ಡಾ. ಎಚ್.ಕೆ.ಪಂಕಜ, ಡಾ. ಜಿ.ಎಸ್.ಕೃಷ್ಣಾರೆಡ್ಡಿ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಾಗೇಂದ್ರಪ್ರಸಾದ್, ಕೃಷಿ ಅಧಿಕಾರಿ ಜಯರಾಮು ಇದ್ದರು.