ಇನ್ನೂ ಪ್ರಾರಂಭವಾಗದ ಆಪರೇಷನ್; ಗ್ರಾಮಸ್ಥರ ಬೇಸರ
ಆಲೂರು: ತಾಲೂಕಿನ ಕೆಂಚಮ್ಮನಹೊಸಕೋಟೆ ಹೋಬಳಿಯ ಮಾಗಡಿಹಳ್ಳಿ ಬಳಿ ಅರಣ್ಯ ಪ್ರದೇಶದ ಹೇಮಾವತಿ ಹಿನ್ನೀರಿನ ತಪ್ಪಲಿನಲ್ಲಿ ಕಾಡಾನೆ ಹಿಡಿಯಲು ನಿರ್ಮಿಸಿರುವ ಕ್ಯಾಂಪ್‌ನಲ್ಲಿ ಬುಧವಾರವೂ ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತಾ ಕಾರ್ಯದಲ್ಲಿ ಮಗ್ನನಾಗಿದ್ದರು.
ಕೆ.ಕುಡಿ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಿಂದ 5 ಸಾಕಾನೆಗಳು ಬಂದು ನಾಲ್ಕೈದು ದಿನ ಕಳೆಯುತ್ತಾ ಬಂದಿದ್ದರೂ ನರಹಂತಕ ಒಂಟಿ ಸಲಗವನ್ನು ಹಿಡಿಯುವ ಕಾರ್ಯಾಚರಣೆ ಆಪರೇಷನ್ ಮಾಗಡಿಹಳ್ಳಿಯಲ್ಲಿ ಪ್ರಾರಂಭವಾಗದೇ ಇರುವುದು ಈ ಭಾಗದ ಜನತೆಗೆ ಬೇಸರ ತರಿಸಿದೆ.
ಕ್ಯಾಂಪ್ ನಿರ್ಮಾಣವಾಗಿ ಆನೆಗಳು ಬಂದ ನಂತರವೂ ಕುಂದೂರು, ಕೆಂಚಮ್ಮನಹೊಸಕೋಟೆ ಹೋಬಳಿಯ ಅಡಿಬಯಲು, ಕಾಣಗೆರೆ, ಕಲ್ಲಾರೆ, ಹೊನ್ನವಳ್ಳಿ, ಹೆಮ್ಮಿಗೆ, ಕುಡಿದೆಲೆ, ಮಾದಿಹಳ್ಳಿ, ನಾಗಾವರ, ಪುರಭೈರವನಹಳ್ಳಿ ಸೇರಿದಂತೆ ದೊಡ್ಡಬೆಟ್ಟ, ಕೊಡಗಿನ ಉಂಬಳಿಬೆಟ್ಟ ಹಾಗೂ ರಂಗನಬೆಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಪ್ರತ್ಯೇಕ ಹಿಂಡುಗಳಾಗಿ ಬೀಡು ಬಿಟ್ಟಿವೆ. ಕಳೆದ ಗುರುವಾರ ಪುರಭೈರವನಹಳ್ಳಿಯಲ್ಲಿ ಸರೋಜ ಎಂಬ ಮಹಿಳೆಯ ಬಲಿ ತೆಗೆದುಕೊಂಡ ಒಂಟಿ ಸಲಗ ವಿಪರೀತ ದಾಂಧಲೆ ನಡೆಸುತ್ತಿದೆ. ಈ ಆನೆ ಕಾಡನ್ನು ಬಿಟ್ಟು ಗ್ರಾಮಗಳೊಳಗೆ ನುಗ್ಗುತ್ತಿರುವುದು ಈ ಭಾಗದ ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.
ನಸುಕಿನ ವೇಳೆ ಹಾಗೂ ಸಂಜೆ ವೇಳೆಯಲ್ಲಿ ಸ್ವಲ್ಪ ಕತ್ತಲಾದರೆ ಮಾಗಿ ಕಾಲವಾದ್ದರಿಂದ ಇಬ್ಬನಿ ಕವಿದು ಮಂಜು ಮುಸುಕಿದ ವಾತಾವರಣದಿಂದಾಗಿ 5 ಅಡಿ ದೂರದಲ್ಲಿ ಯಾರೇ ಇದ್ದರೂ ಕಾಣಿಸುವುದಿಲ್ಲ. ನರಹಂತಕ ಒಂಟಿಸಲಗವು ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದು, ಮಂಜು ಮುಸುಕಿದ ವಾತಾವರಣದಲ್ಲಿ ಎದುರಿಗೆ ಬಂದರೂ ಕೇವಲ ಐದಾರು ಅಡಿ ಅಂತರದಲ್ಲೂ ಕಾಣುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಹೋಗಲು, ಡೈರಿಗೆ ಹಾಲು ಹಾಕಲು ಗ್ರಾಮಸ್ಥರು ಬೆಳಗಿನ ಜಾವದಲ್ಲಿ ಗ್ರಾಮಗಳ ರಸ್ತೆಯಲ್ಲಿ ನಡೆಯಲು ಭಯ ಪಡುತ್ತಿದ್ದಾರೆ.
ಆನೆ ಕಾರ್ಯಾಚರಣೆ ಶೀಘ್ರ ಪ್ರಾರಂಭಿಸದಿದ್ದರೆ ಮತ್ತಷ್ಟು ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಆನೆ ಹಿಡಿಯುವ ಕಾರ್ಯ ಪ್ರಾರಂಭವಾಗದಿರುವುದಕ್ಕೆ ಮುಖ್ಯಕಾರಣ ಅರವಳಿಕೆ ಚುಚ್ಚುಮದ್ದು ಸಿಗದಿರುವುದೇ ಆಗಿದೆ. ಚೆನ್ನೈನಿಂದ ಅರವಳಿಕೆ ಮದ್ದನ್ನು ತೆಗೆದುಕೊಂಡು ವೈದ್ಯರಾದ ಚಿಟ್ಟಿಯಪ್ಪ, ನಾಗರಾಜ್, ತಜ್ಞ ಗುರಿಕಾರ ಅಕ್ರಂ ಬರಬೇಕಿದೆ.
ರಜಾದಿನಗಳು ಅಡ್ಡಿ?: ಕಳೆದ ಶನಿವಾರದಿಂದ ಸೋಮವಾರ ಹೊರತುಪಡಿಸಿ ಹಬ್ಬವೆಂದು ಸತತ ನಾಲ್ಕು ದಿನ ರಜೆ ಇದ್ದ ಕಾರಣವೋ ಏನೋ, ವೈದ್ಯರು, ಗುರಿಕಾರರು ಹಾಗೂ ಸಿಬ್ಬಂದಿ ವರ್ಗ ಸಂಪೂರ್ಣವಾಗಿ ಕ್ಯಾಂಪ್‌ಗೆ ಬಾರದೆ ಆನೆ ಹಿಡಿಯುವ ಕಾರ್ಯಕ್ಕೆ ವಿಳಂಬವಾಗಿದೆ.
3 ದಿನದಿಂದ ಕ್ಯಾಂಪ್‌ನಲ್ಲಿರುವ ಕುಮ್ಕಿ ಆನೆಗಳು, ಕಾಡುಕುರುಬರು, ಕಾವಾಡಿಗಳು, ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿ ನಿರ್ವಹಣೆಗೆ ಪ್ರತಿದಿನವೂ ಅಪಾರ ವೆಚ್ಚವಾಗುತ್ತಿದೆ. ಒಂದು ಆನೆ ಹಿಡಿಯಲು ಇಂತಿಷ್ಟು ಹಣ ಎಂದು ಸರ್ಕಾರಿ ನಿಗದಿಗೊಳಿಸಿದ್ದು, ಅದಕ್ಕಿಂತಲೂ ಹೆಚ್ಚು ಹಣ ವೆಚ್ಚವಾದರೆ ಅದನ್ನು ಭರಿಸುವವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲಿದೆ. ಅಷ್ಟೇ ಅಲ್ಲದೆ ಸಾಕಾನೆಗಳಲ್ಲಿ ಮೂರ್ನಾಲ್ಕು ಆನೆಗಳಿಗೆ ಮದವೇರಿದ್ದು, ಅವುಗಳನ್ನು ನಿಯಂತ್ರಿಸುವುದೂ ಸುಲಭವಲ್ಲ. ಎಚ್.ಡಿ.ಕೋಟೆಯಲ್ಲಿ ಸಾಕಾನೆ ಮಾವುತನನ್ನು ಸಾಯಿಸಿದ್ದು, ಸೋಮವಾರವಷ್ಟೆ ಸಕಲೇಶಪುರದಲ್ಲಿ ಮದವೇರಿದ ಆನೆ ಮಾವುತನ ಮೇಲೆರಗಿ ರಂಪಾಟ ಎಬ್ಬಿಸಿರುವ ನಿದರ್ಶಗಳಿವೆ.
ಸಾಕಾನೆಗಳನ್ನು ರಾತ್ರಿ ವೇಳೆಯಲ್ಲಿ ಪ್ರತ್ಯೇಕವಾಗಿ ಕಟ್ಟಬೇಕಿದ್ದು, ಸೋಮವಾರ ರಾತ್ರಿಯಷ್ಟೇ ಒಂಟಿ ಸಲಗ ಕ್ಯಾಂಪ್‌ಗೆ ನುಗ್ಗಿ ಸಾಕಾನೆಗಳ ಮೇಲೆ ಎರಗಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಬಂದೂಕಿನಿಂದ ಗುಂಡು ಹಾರಿಸಿ, ಪಟಾಕಿಗಳಿಂದ ಸದ್ದು ಮಾಡಿ ಆನೆಯನ್ನು ಹಿಮ್ಮೆಟ್ಟಿಸುದರಲ್ಲಿ ಅರಣ್ಯ ಇಲಾಖೆಗೆ ಸಾಕಾಗಿದೆ. ಇದರ ಜೊತೆಗೆ ಮಾವುತರು ಕಾವಾಡಿಗರ ರಕ್ಷಣೆಯ ಜವಾಬ್ದಾರಿಯು ಅರಣ್ಯ ಇಲಾಖೆಯ ಮೇಲಿರುತ್ತದೆ.
ಆದ್ದರಿಂದ ತಡ ಮಾಡದೆ ಮುಖ್ಯ ವಲಯ ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶೀಘ್ರ ಗಮನ ಹರಿಸಿ ಕಾರ್ಯಾಚರಣೆ ಪ್ರಾರಂಭಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
- ಎಚ್.ವಿ.ರಾಘವೇಂದ್ರ