ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಬ್ಬಳಿ ಧನುರ್ಮಾಸ ಪೂಜೆಗೆ ಭಕ್ತಸಾಗರ

Vishwanath S
Updated On : 16 Jan 2014, 1:32 am

ಹಿರೀಸಾವೆ: ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ತಪೋವನಗಳಿಂದ ಕಂಗೊಳಿಸುತ್ತಿರುವ ಶ್ರೀ ಕಬ್ಬಳಿ ಬಸವೇಶ್ವರ ಸ್ವಾಮಿ ಸಾನ್ನಿಧ್ಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಡಿ.16ರಿಂದ ಜ.14ರವರೆಗೆ ಧನುರ್ಮಾಸ ಪೂಜಾ ಕಾರ್ಯಕ್ರಮ ನಡೆಯಿತು.
ಸಂಕ್ರಾತಿಯ ಮುನ್ನಾ ದಿನ ಆಯಾ ಗ್ರಾಮದೇವತೆಗಳನ್ನು ಭಕ್ತಿಯಿಂದ ಸಿಂಗರಿಸಿ ಮೆರವಣಿಗೆಯೊಂದಿಗೆ ಕಬ್ಬಳಿ ಗ್ರಾಮಕ್ಕೆ ಭಕ್ತರು ಆಗಮಿಸಿದ್ದರು. ಸಾವಿರಾರು ಭಕ್ತಾದಿಗಳು ಬಸವಮಾಲೆ ಧರಿಸಿ ಪಾಲ್ಗೊಂಡಿದ್ದರು.
ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೃಪಾಶೀರ್ವಾದಗಳೊಂದಿಗೆ ಹಾಗೂ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಶ್ರೀ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಮುಂಭಾಗದಲ್ಲಿರುವ ಪುಷ್ಕರಣಿಯಲ್ಲಿ ಮೂರು ಸುತ್ತು ತೆಪ್ಪೋತ್ಸವ ಮಾಡಲಾಯಿತು. ಪಟಾಕಿ ಬಾಣ ಬಿರುಸುಗಳೊಂದಿಗೆ ಜನಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ನಾನಾ ಗ್ರಾಮಗಳಿಂದ ಆಗಮಿಸುವ ನೂರಾರು ಗ್ರಾಮದೇವತೆಗಳ ಉತ್ಸವ ನಡೆಯಿತು. ನಂತರ ಭಕ್ತರು   ಧರಿಸಿದ್ದ ಬಸವಮಾಲೆಯನ್ನು ತೆಗೆಸಲಾಯಿತು.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸಂಕ್ರಾಂತಿಯ ಶುಭ ಸಂದೇಶಗಳನ್ನು ತಿಳಿಸಿದರು. ಮನುಷ್ಯನು ತನ್ನ ಜೀವನದಲ್ಲಿ ಒಳ್ಳೆಯ ಮಾರ್ಗ ಅನುಸರಿಸಲು ಸಂಕ್ರಾಂತಿಯು ಒಳ್ಳೆಯ ಕಾಲವಾಗಿದ್ದು, ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದ ಕಡೆಗೆ ಸಾಗಲಿ ಎಂದು ಸಂದೇಶ ನೀಡಿದರು.
ಜ.18ರಂದು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯುತ್ಸವ ನಡೆಯಲಿದ್ದು, ಅಂದು ಪ್ರತಿ ವರ್ಷ ಅವರ ನೆನಪಿನಲ್ಲಿ ಹೊಸದೊಂದು ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಈ ವರ್ಷ ಸಕಲೇಶಪುರ ಹಾಗೂ ಹೊಳೆನರಸೀಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಕಬ್ಬಳಿಯಲ್ಲಿ ನಡೆದ ಬಸವ ಮಾಲಾ ಸಮಗ್ರ ಕಾರ್ಯಕ್ರಮದ ಜವಾಬ್ದಾರಿಯನ್ನು ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ವಹಿಸಿಕೊಂಡು ಸುಸೂತ್ರವಾಗಿ ನೆರವೇರಿಸಿದರು.
ರಾತ್ರಿ 8ರಿಂದ ಬೆಳಗ್ಗೆ 8ರವರೆಗೂ ಸತತವಾಗಿ ದಾಸೋಹ ಕಾರ್ಯಕ್ರಮ ನಡೆಯಿತು. ಜನಸಂದಣಿಯನ್ನು ಹಾಗೂ ವಾಹನಗಳ ನಿಯಂತ್ರಣಗೊಳಿಸುವಲ್ಲಿ ಚನ್ನರಾಯಪಟ್ಟಣ ವೃತ್ತ ನಿರೀಕ್ಷರು ಹಾಗೂ ಹಿರೀಸಾವೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕುಮಾರಿ ರೇಖಾಬಾಯಿ ಹಾಗೂ ಸಿಬ್ಬಂದಿ ಕಾರ್ಯದಕ್ಷತೆ ತೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement