ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೊಲೀಸ್ ದೂರು ಪೆಟ್ಟಿಗೆಗೆ ಉತ್ತಮ ಪ್ರತಿಕ್ರಿಯೆ

Vishwanath S
Updated On : 16 Jan 2014, 1:32 am

ಹಾಸನ: ಅಕ್ರಮ ಚಟುವಟಿಕೆಗಳು, ದೌರ್ಜನ್ಯಗಳು ಕಣ್ಣಿಗೆ ಬಿದ್ದರೆ ಅದರ ವಿರುದ್ಧ ಕೆಂಪು ಬಣ್ಣದ ಪೆಟ್ಟಿಗೆಗೆ ಲಿಖಿತವಾಗಿ ಬರೆದು ಹಾಕುವಂತ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ವರ್ಷ ನ.21ರಿಂದ ಹಾಸನ ನಗರದ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ 8 ಕಡೆ ಪೆಟ್ಟಿಗೆಯನ್ನು ಇಡಲಾಗಿತ್ತು. ನಂತರ ಹೊಳೆನರಸೀಪುರದಲ್ಲೂ ಈ ವ್ಯವಸ್ಥೆ ಅಳವಡಿಸಲಾಗಿದೆ. ಸಾರ್ವಜನಿಕರು ಅಕ್ರಮ ಚಟುವಟಿಕೆಗಳ ಬಗ್ಗೆ ಹೆಸರನ್ನು ತಿಳಿಸದೇ ರಹಸ್ಯವಾಗಿ ತಿಳಿಸಿದರೂ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ. ದೂರನ್ನು ನೀಡಿದವರನ್ನು ಗುರುತಿಸಿಕೊಂಡು ಅಥವಾ ಯಾರ ಮೇಲೆ ದೂರು ಬಂದಿರುತ್ತದೆಯೋ ಅವರ ಬಳಿ ಪೊಲೀಸರು ಹೋಗಿ ವಸೂಲಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಕೆಲವರು ಠಾಣೆಗಳಿಗೆ ಬಂದು ದೂರು ನೀಡಲು ಹಿಂಜರಿಯುವುದರಿಂದ ದೂರು ಪೆಟ್ಟಿಗೆಗಳನ್ನು ಪ್ರಮುಖ ಸ್ಥಳಗಳಲ್ಲಿ ಇಡಲಾಗಿದೆ. ಒಂದು ಪೆಟ್ಟಿಗೆಯಲ್ಲಿ ಈಗಾಗಲೇ 23 ದೂರಿನ ಪತ್ರಗಳು ಬಂದಿದ್ದು, ಆ ದೂರನ್ನು ಹಾಕಿದರಿಗೆ ಹಿಂಬರಹ ತಲುಪಿಸುವಂತಹ ವ್ಯವಸ್ಥೆ ಕೂಡ ನಡೆಸಲಾಗುತ್ತಿದೆ ಎಂದರು.
ಪೆಟ್ಟಿಗೆಯಲ್ಲಿ ಮಟ್ಕಾ, ಇಸ್ಪೀಟ್ ಇತರೆ ಜೂಜಾಟಗಳು ನಡೆಯುತ್ತಿರುವುದು, ರಸ್ತೆ, ಪಾರ್ಕ್‌ಗಳಲ್ಲಿ ಯುವತಿಯರು, ಮಹಿಳೆಯರನ್ನು ಚುಡಾಯಿಸುವುದು ಮತ್ತು ಲೈಂಗಿಕ ಕಿರುಕುಳ ನೀಡುವುದು, ಕಳ್ಳತನ, ದರೋಡೆ, ಡಕಾಯಿತಿ, ಕೊಲೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮಾಹಿತಿ, ಬಡ್ಡಿ ವ್ಯವಹಾರ, ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಬಗ್ಗೆ, ಸಂಚಾರ ಸುವ್ಯವಸ್ಥೆಯ ಬಗ್ಗೆ ಸಲಹೆಗಳು, ಹೊರಗಿನಿಂದ ಬಂದು ಬಾಡಿಗೆ ಮನೆಯಲ್ಲಿ ವಾಸವಿರುವವರ ಬಗ್ಗೆ ಅನುಮಾನ ಬಂದ ಬಗ್ಗೆ, ಲಾಡ್ಜ್‌ಗಳು, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಸರಗಳ್ಳತನ, ಜೇಬುಗಳ್ಳತನ ಮತ್ತು ಅಕ್ರಮ ಚಟುವಟಿಕೆ ನಡೆಸುತ್ತಿರುವವರ ಬಗ್ಗೆ, ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕ ಕುಂದುಕೊರತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ನಡೆದುಕೊಳ್ಳುವ ಜನರ ಬಗ್ಗೆ ದೂರು ಪೆಟ್ಟಿಗೆಯಲ್ಲಿ ಸಾರ್ವಜನಿಕರು ಲಿಖಿತವಾಗಿ ದೂರುಗಳನ್ನು ಹಾಕಿದ್ದಾರೆ ಎಂದರು.
ಈ ಬಗ್ಗೆ ದೂರುಗಳನ್ನು ದಾಖಲಿಸಿಕೊಂಡು ತೊಂದರೆ ನೀಡುತ್ತಿರುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement