ಮನಸ್ಸಿನ ಸುಧಾರಣೆಯಿಂದ ವ್ಯಕ್ತಿತ್ವದ ಏಳಿಗೆ: ಸಿರಿಗೆರೆಶ್ರೀ
ಅರಸೀಕೆರೆ: ಮನುಷ್ಯ ತನ್ನ ಮನೆಯನ್ನು ಸುಧಾರಣೆಗೊಳಿಸಿದರೆ ಸಾಲದು, ಮನಸ್ಸನ್ನೂ ಸುಧಾರಣೆಗೊಳಿಸಿಕೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾಡಾಳು ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಚಂದ್ರಶೇಖರ ಸ್ವಾಮೀಜಿ ಅವರ 7ನೇ ವರ್ಷದ ಪುಣ್ಯಸ್ಮರಣೆ ಹಾಗೂ ಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ದೈನಂದಿನ ವ್ಯವಹಾರ ನಡೆಯುವುದು ನಂಬಿಕೆಯಿಂದ. ಅಂತಹ ನಂಬಿಕೆ ಕಳೆದುಕೊಳ್ಳಬೇಡಿ. ಧರ್ಮ ಹುಟ್ಟಿದ್ದು ಮನಸ್ಸನ್ನೇ ಮೂಲವಾಗಿಸಿಕೊಂಡು. ಅಂತಹ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದರು.
ಪುರೋಹಿತಶಾಹಿಯ ವಿರುದ್ಧ ಶರಣ ಪರಂಪರೆಯ ಮೂಲಕ ಕರ್ನಾಟಕದಲ್ಲಿ ಉತ್ತರ ಕೊಟ್ಟ ಮೊದಲಿಗರೆಂದರೆ ನಮ್ಮ ಹಿರಿಯ ಪೂಜ್ಯ ಗುರುಗಳು. ವಚನಗಳನ್ನು ಓದುವುದರ ಮೂಲಕ ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಎಲ್ಲರೂ ಶ್ರಮ ವಹಿಸಬೇಕು ಎಂದರು.
ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ನಡೆನುಡಿ, ಆಚಾರ ವಿಚಾರದಲ್ಲಿ ಒಂದಾಗಿ ಬಾಳಿದ ಪೂಜ್ಯಗುರು ಲಿಂಗೈಕ್ಯ ಚಂದ್ರಶೇಖರ ಸ್ವಾಮೀಜಿ ಅವರ ಬದುಕೇ ಆದರ್ಶಪ್ರಾಯವಾದದ್ದು. ಮನುಷ್ಯ ಇಂದು ಭೌತಿಕವಾಗಿ ಬೆಳವಣಿಗೆ ಕಂಡಿದ್ದರೂ ಮನಸ್ಸು ಸ್ವಾರ್ಥಕ್ಕೆ ಬಲಿಯಾಗಿ ಸಂಕುಚಿತಗೊಂಡಿದೆ ಎಂದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಮಳೆಯ ಅಭಾವದಿಂದ ಅರಸೀಕೆರೆ ತಾಲೂಕು ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜನತೆ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ತಾಲೂಕಿನ 177 ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ. 40 ಗ್ರಾಮಗಳಲ್ಲಿ ಟ್ಯಾಂಕ್ನಿಂದ ನೀರು ಪೂರೈಸಲಾಗುತ್ತಿದೆ. ಆದ್ದರಿಂದ ಜನತೆ ಪಕ್ಷ ಭೇದ ಮರೆತು ಶಾಶ್ವತ ನೀರಾವರಿಗಾಗಿ ಹೋರಾಟ ಮಾಡಬೇಕಿದೆ ಎಂದರು.
ಕೋಳಗುಂದ ಕೇದಿಗೆ ಮಠದ ಜಯ ಚಂದ್ರಶೇಖರ ಸ್ವಾಮೀಜಿ ಮಾಡಾಳು ಶಿವಬಸವ ಕುಮಾರಾಶ್ರಮದ ತೋಂಟದಾರ್ಯ ಸ್ವಾಮೀಜಿ, ಡಿ.ಎಂ.ಕುರ್ಕೆ ಬೂದಿಹಾಳ್ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ ಇದ್ದರು.