ಸಂಸ್ಕಾರವಿಲ್ಲದ ಶಿಕ್ಷಣದಿಂದ ನೈತಿಕ ಅಧಃಪತನ: ಚಂದ್ರೇಗೌಡ
ಬೇಲೂರು: ಪ್ರಸಕ್ತ ವಿದ್ಯಮಾನದಲ್ಲಿ ಶಿಕ್ಷಣವು ವ್ಯಕ್ತಿಯ ಬದುಕಿಗೆ ಮಾತ್ರ ಸೀಮಿತವಾಗಿದ್ದು, ಸಮಾಜದಲ್ಲಿ ನೈತಿಕ ಅಧಃಪತನಕ್ಕೆ ಕಾರಣವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಡಿ.ಚಂದ್ರೇಗೌಡ ವಿಷಾದಿಸಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀಚನ್ನಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳು ಸರ್ವಶಿಕ್ಷಣ ಅಭಿಯಾನ ಯೋಜನೆಯಲ್ಲಿ ಕೋಟಿ ಕೋಟಿ ವೆಚ್ಚ ಮಾಡಿದರೂ ಸಂಸ್ಕಾರ ಮತ್ತು ಜನಪದ ಸಂಸ್ಕೃತಿ ನೀಡುವ ಮೂಲ ಶಿಕ್ಷಣವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಕಷ್ಟ ಸಾಧ್ಯವಾಗಿದೆ. ಸರ್ಕಾರ ಇಂಥ ಸಂಸ್ಥೆಗಳಿಗೆ ಕನಿಷ್ಠ ಪ್ರೋತ್ಸಾಹ ನೀಡಬೇಕು ಎಂದರು.
ಪತ್ರಕರ್ತ ಹಾಲಪ್ಪ ಹೆಬ್ಬಾಳು ಸಮಾರೋಪ ಭಾಷಣದಲ್ಲಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಇಂದಿನ ಪಠ್ಯ ಕ್ರಮಗಳು ಬದಲಾಗಬೇಕು. ನಮ್ಮ ದೇಶದ ಜನರ ಜನಪದ ಹಾಗೂ ಸಾಹಿತ್ಯವನ್ನು ಬಳಕೆ ಮಾಡಿಕೊಂಡು ಪಠ್ಯಕ್ರಮ ರಚನೆಯಾಗಬೇಕು. ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿಸುವ ಸುತ್ತೋಲೆಯನ್ನು ಸರ್ಕಾರ ಸಿದ್ಧಪಡಿಸಬೇಕು ಎಂದರು.
ಜೆಡಿಎಸ್ ಮುಖಂಡ ಎಚ್.ಜಿ.ಭುವನೇಶ್ ಮಾತನಾಡಿ, ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಸಾಹಿತ್ಯದ ಗಂಧ, ನಾಡು-ನುಡಿಯ ಬಗ್ಗೆ ಗೌರವ, ಕುಟುಂಬದ ವಾತ್ಸಲ್ಯ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ತಿಳಿಸಿ ಭೌತಿಕ ಮಟ್ಟ ಹೆಚ್ಚಿಸಬೇಕು ಎಂದರು.
ಬಿಜೆಪಿ ಮುಖಂಡ ಗಂಗೂರು ಶಿವಕುಮಾರ್ ಮಾತನಾಡಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಹೆಬ್ಬಾಳು ಗ್ರಾಮ ಮಟ್ಟದಲ್ಲಿ ಖಾಸಗಿ ವಿದ್ಯಾಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಶ್ಲಾಘಿಸಿದರು. ಜಿಪಂ ಸದಸ್ಯೆ ಜಯಶೀಲಾ ಜಯಶಂಕರ್, ಗ್ರಾಪಂ ಉಪಾದ್ಯಕ್ಷೆ ತುಂಗಮ್ಮ ಹೊನ್ನಲಾಗಚಾರ್, ಸದಸ್ಯ ಗೋಪಾಲ್, ಎಪಿಎಂಸಿ ಸದಸ್ಯ ಅನಂದಕುಮಾರ್, ಸಂಸ್ಥೆಯ ಕಾರ್ಯದರ್ಶಿ ಚನ್ನಕೇಶವೇಗೌಡ, ಮುಖ್ಯ ಶಿಕ್ಷಕ ಶಿವಶಂಕರ್, ಗ್ರಾಮ ಮುಖಂಡ ಬಸವರಾಜು ವಿನೋದ ಚನ್ನಕೇಶವೇಗೌಡ ಇತರರು ಇದ್ದರು. ನಿವೃತ್ತ ಪಿಡಿಒ ರುದ್ರೇಶ್ ಅವರನ್ನು ಅಭಿನಂದಿಸಲಾಯಿತು.