ಹೇಮೆಯೊಡಲು ದಾಹ ತೀರಿಸಲು ಮಾತ್ರ, ಬೆಳೆಗಳಿಗಿಲ್ಲ
ಹಾಸನ: ಇತಿಹಾಸದಲ್ಲೇ ಮೊದಲ ಬಾರಿಗೆ ಹೇಮಾವತಿ ಜಲಾಶಯ ಜುಲೈನಲ್ಲಿ ಭರ್ತಿಯಾಗಿದ್ದರೂ ಈ ಬಾರಿ ಹಿಂಗಾರು ಬೆಳೆಗೆ ನೀರು ಸಿಗುವುದು ಕಷ್ಟ ಸಾಧ್ಯವಾಗಿದೆ.
ಹೇಮಾವತಿ ಅಣೆಕಟ್ಟು ನಿರ್ಮಾಣ ನಂತರ ಇದೇ ಮೊದಲ ಬಾರಿಗೆ ಜುಲೈನಲ್ಲೇ ಜಿಲ್ಲೆಯ ಜೀವನದಿ ಹೇಮಾವತಿ ಭರ್ತಿಯಾಗಿತ್ತು. ಇದರಿಂದ ಐದಾರು ವರ್ಷಗಳಿಂದ ಕುಡಿಯಲು ಮತ್ತು ಬೇಸಾಯಕ್ಕೆ ನೀರಿನ ಬರ ಅನುಭವಿಸಿದ್ದ ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ಲಕ್ಷಾಂತರ ಮಂದಿ ಹಿರಿ ಹಿರಿ ಹಿಗ್ಗಿದ್ದರು.
ಕಳೆದ ಆರೇಳು ವರ್ಷಗಳಿಂದ ಈಚೆಗೆ ಒಂದು ಬಾರಿಯಷ್ಟೇ ಅದೂ ಕಾಡಿ ಬೇಡಿ ನೀರು ಪಡೆದು ಮುಂಗಾರು ಬೆಳೆಯಾಗಿ ನೀರಾವರಿ ಬೆಳೆ ಬೆಳೆಯುತ್ತಿದ್ದ ಅನ್ನದಾತ, ಈ ಬಾರಿ ಅವಧಿಗೂ ಮುನ್ನವೇ ಹೇಮಾವತಿ ಒಡಲು ಭರ್ತಿಯಾಗಿರುವುದರಿಂದ ಮುಂಗಾರು ಜತೆಗೆ ಹಿಂಗಾರು ಬೆಳೆಗೂ ಭರಪೂರ ನೀರು ಸಿಗಲಿದೆ. ಹೀಗಾದರೆ ಕಾರುಫಸಲು ಬೆಳೆದು ತುತ್ತಿನ ಕಣಜವನ್ನು ದೊಡ್ಡದು ಮಾಡಿಕೊಳ್ಳೋಣ ಎಂದು ಕನಸು ಕಂಡಿದ್ದ.
ಆದರೆ ರೈತರ ಆಸೆ ಈ ಬಾರಿಯೂ ಹುಸಿಯಾಗಿದೆ. ನಾಲೆಗಳಿಗೆ, ಕುಡಿಯಲು ಹಾಗೂ ನದಿಗೆ ಈಗಾಗಲೇ ಅಪಾರ ಪ್ರಮಾಣದ ನೀರು ಹರಿಸಿರುವುದರಿಂದ ಈ ಬಾರಿಯೂ ಕುಡಿಯಲು ಮಾತ್ರ ನೀರು ನೀಡಬಹುದೇ ಹೊರತು ಹಿಂಗಾರು ಬೆಳೆಗೆ ಯಾವುದೇ ಕಾರಣಕ್ಕೂ ನೀರು ಕೊಡಲು ಆಗುವುದಿಲ್ಲ ಎಂದು ಹೇಮಾವತಿ ಜಲಾಶಯ ಯೋಜನೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಈ ಬಾರಿಯೂ ಹೇಮೆ ನಂಬಿದ ರೈತರಿಗೆ ನಿರಾಶೆಯಾಗಿದೆ.
ಹೇಮೆಯ ಸ್ಥಿತಿಗತಿ: 1922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಸದ್ಯ 2878.63 ಅಡಿ ನೀರಿದೆ. ಕಳೆದ ವರ್ಷ 2873.76 ಅಡಿ ನೀರಿತ್ತು. ಅಂದರೆ ಕಳೆದ ವರ್ಷಕ್ಕಿಂತ ಕೇವಲ 5 ಅಡಿ ನೀರು ಹೆಚ್ಚಿದೆ.
ಒಟ್ಟು 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಹಾಲಿ 09.108 ಟಿಎಂಸಿ ನೀರಿದೆ. ಇದರಲ್ಲಿ ಬಳಸಬಹುದಾದ ನೀರು 4.736 ಮಾತ್ರ. ಕಳೆದ ವರ್ಷ 7.381 ಟಿಎಂಸಿ ನೀರಿತ್ತು. ಈಗಲೂ ನದಿ ಮತ್ತು ನಾಲೆಗೆ 2330 ಕ್ಯುಸೆಕ್ ನೀರನ್ನು ಡ್ಯಾಂನಿಂದ ಬಿಡಲಾಗುತ್ತಿದೆ. ಇನ್ನೂ ಐದಾರು ತಿಂಗಳು ರಾಜ್ಯದ ಮೂರ್ನಾಲ್ಕು ಜಿಲ್ಲೆಗಳ ಕೆಲ ತಾಲೂಕುಗಳಿಗೆ ಕುಡಿಯಲು ನೀರು ಪೂರೈಸಬೇಕಿದೆ. ಅಲ್ಲದೆ ಬಿಸಿಲ ಧಗೆಗೆ ದಿನದಿಂದ ದಿನಕ್ಕೆ ನೀರು ಆವಿಯಾಗಿ ನೀರು ಸಂಗ್ರಹ ಪ್ರಮಾಣ ಕ್ರಮೇಣ ಕರಗಲಿದೆ. ಈ ಎಲ್ಲ ಕಾರಣಗಳಿಂದಾಗಿ ಈ ಬಾರಿಯೂ ಜನ-ಜಾನುವಾರಿಗೆ ಕುಡಿಯಲು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಗಳಿಗೆ ನೀರು ಕೊಡಲಾಗುವುದಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.
ಹೇಮೆಯ ಏಳು-ಬೀಳು: ಹೇಮಾವತಿ ಜಲಾಶಯ ನಿರ್ಮಾಣವಾದ 30 ವರ್ಷಗಳ ಇತಿಹಾಸದಲ್ಲಿ 1985, 1986, 1987, 2001, 2002, 2003, 2004 ಹಾಗೂ 2012ರಲ್ಲಿ ಅಂದರೆ ಒಟ್ಟು 8 ವರ್ಷ ಹೇಮಾವತಿ ಒಡಲು ಭರ್ತಿಯಾಗಿಲ್ಲ.
ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿ
ಹೇಮಾವತಿ ಜಲಾಶಯದಿಂದ ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರಿಗೆ ವ್ಯವಸಾಯ ಮತ್ತು ಕುಡಿಯಲು ನೀರು ಹರಿಸಲಾಗುತ್ತದೆ.
4 ಜಿಲ್ಲೆಗಳಿಂದ 6 ಲಕ್ಷದ 55 ಸಾವಿರ ಹೆಕ್ಟೇರ್ ಭೂಮಿಗೆ ಹೇಮಾವತಿ ನೀರಾವರಿ ಭಾಗ್ಯ ಕರುಣಿಸಲಿದ್ದಾಳೆ.
ಈ ಪೈಕಿ ಹಾಸನ ಜಿಲ್ಲೆಯಲ್ಲಿ 1,07,480 ಎಕರೆ ಪ್ರದೇಶಕ್ಕೆ ನೀರು ಪೂರೈಕೆಯಾದರೆ, ಮಂಡ್ಯ ಜಿಲ್ಲೆಯ 2,27,920 ಎಕರೆ ಪ್ರದೇಶಕ್ಕೆ ನೀರು ಲಭಿಸಲಿದೆ.
ಇದೇ ರೀತಿ ಮೈಸೂರು ಜಿಲ್ಲೆಯ 3,600 ಎಕರೆ ಭೂಮಿ ಹೇಮೆಯಿಂದ ನೀರಾವರಿ ಸೌಲಭ್ಯ ಪಡೆದರೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 3,14,000 ಎಕರೆಗೆ ನೀರು ಸಿಗಲಿದೆ.