'ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬೇಡ'
ಕ.ಪ್ರ.ವಾರ್ತೆ , ಬಾಗೂರು (ಚನ್ನರಾಯಪಟ್ಟಣ ತಾ.), ಜ. 16 : ಸಂಕುಚಿತ ಮನೋಭಾವನೆಯನ್ನು ತ್ಯಜಿಸಿ ವಿಶಾಲ ದೃಷ್ಟಿಯಲ್ಲಿ ಮನುಷ್ಯ ಯೋಚಿಸಬೇಕು, ಇದರಿಂದ ಆತನ ನಡವಳಿಕೆ ಉತ್ತಮಗೊಳ್ಳುತ್ತದೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು ಉಳಿದಂತೆ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಶಿಸ್ತು, ಸಮಯಪಾಲನೆ ಮುಖ್ಯ: ತಾಲೂಕಿನ ಬಾಗೂರು ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳ ಕೈಬರಹ ಸಂಚಿಕೆಯನ್ನು ಬಿಡುಗಡೆ ಮಾಡಿದ ಅವರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಕುರಿತು ಮಾತನಾಡಿದರು.
ಶಿಸ್ತು, ಸಂಯಮ ಸಮಯಪಾಲನೆ ಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಲದು ಹೆಚ್ಚು ಅಂಕಗಳನ್ನು ಗಳಿಸಬೇಕು. ಜೀವನದಲ್ಲಿ ನೈತಿಕತೆಯನ್ನು ವಿದ್ಯಾರ್ಥಿ ದಿಸೆಯಿಂದಲೇ ರೂಢಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತೀರಿ ಎಂದರು.
ಸಲಹೆ: ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ವಾರ್ಷಿಕೋತ್ಸವ ವೇದಿಕೆಯಾಗುತ್ತದೆ. 10ನೇ ತರಗತಿಯ ಮಕ್ಕಳು ಪರೀಕ್ಷೆ ಹತ್ತಿರವಿರುವುದರಿಂದ ಹೆಚ್ಚು ವೇಳೆ ಅಭ್ಯಾಸದಲ್ಲಿ ತೊಡಗಿ ಉತ್ತಮ ಅಂಕ ಗಳಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಶಾಲಾ ಕಾಂಪೌಂಡ್ ಉದ್ಘಾಟಿಸಿ ಕಾಂಪೌಂಡ್ ನಿರ್ಮಾಣದಿಂದ ಶಾಲೆಗೆ ಉತ್ತಮ ಪರಿಸರ ದೊರಕಿದಂತಾಗಿದೆ. ಸರ್ವ ಶಿಕ್ಷಣ ಅಭಿಯಾನದಡಿ ಎರಡು ಅಡುಗೆ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯದಲ್ಲಿಯೇ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸಲಾಗುತ್ತದೆ ಎಂದರು. ರಾಷ್ಟ್ರೀಯ ಮಾಧ್ಯಮಿಕ ಅಭಿಯಾನದ ಯೋಜನೆಯಡಿ ನಿರ್ಮಾಣವಾಗುತ್ತಿರುವ 6 ಕೊಠಡಿಗಳ ಕಾಮಗಾರಿ ವೀಕ್ಷಿಸಿದರು.
ಬಹುಮಾನ ವಿತರಣೆ: ಶಾಲಾ ಮುಖ್ಯ ಶಿಕ್ಷಕ ಚಲುವ ನಾರಾಯಣ ಸ್ವಾಮಿ ಸ್ವಾಗತಿಸಿದರು. ವಿನೋದ್ ನಾಡಿಗ್ ತಂಡ ಸ್ವಾಗತ ನೃತ್ಯ ಪ್ರದರ್ಶಿಸಿದರು. ವಿವಿಧ ಕ್ರೀಡೆ ಹಾಗೂ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ತಂಡವನ್ನು ರಚಿಸಿ ಹೆಚ್ಚು ಬಹುಮಾನ ಪಡೆದ ತಂಡಕ್ಕೆ ಪಾರಿತೋಷಕ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕೃಷ್ಣಾನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ.ಪಾಂಡು, ಜಿಲ್ಲಾ ಪಂಚಾಯ್ತಿ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಶಿವಶಂಕರ್ ಕುಂಟೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲೇಶ್, ಸದಸ್ಯ ಬಸವರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಹೆಚ್.ಶಿವಣ್ಣ, ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ಪಿ.ಕೆ.ಮಂಜೇ ಗೌಡ ಎಸ್‌ಡಿಎಂಸಿ ಸದಸ್ಯರಾದ ದಿಗಂಬರ ಶೆಟ್ಟಿ, ಚಂದ್ರೇಗೌಡ ಬಿ.ಕೆ. ಮನು ಇದ್ದರು.