ಇಂದು ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ
ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ನೇತಾಜಿ ಯುವ ಸಂಘ, ಎ.ವಿ. ಕಾಂತಮ್ಮ ಮಹಿಳಾ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಗರದ ಎ.ವಿ.ಕೆ. ಕಾಲೇಜು ಸಭಾಂಗಣದಲ್ಲಿ ಜನವರಿ 17ರಂದು ಬೆಳಗ್ಗೆ 11ಕ್ಕೆ ಜಿಲ್ಲಾಮಟ್ಟದ ಜಾನಪದ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ ಉದ್ಘಾಟಿಸುವರು. ಎ.ವಿ.ಕೆ. ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಜಿ.ಟಿ. ಕುಮಾರ್ ಅಧ್ಯಕ್ಷತೆ ವಹಿಸುವರು. ಎವಿಕೆ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ. ಶೈಲಜಾ ಕುಮಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್.ಎಸ್. ಶಶಿಕಲಾ, ಯುವಜನ ಮತ್ತು ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಮೂರ್ತಪ್ಪ ಭಾಗವಹಿಸುವರು. ಜಿಲ್ಲಾಮಟ್ಟದ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ಕೋಲೆ ಬಸವ ವಿಶೇಷ ಕಾರ್ಯಕ್ರಮ ಪ್ರದರ್ಶನ ಹಾಗೂ ಕೋಲಾಟ, ಕಂಸಾಳೆ ನೃತ್ಯ, ಪೂಜಾ ಕುಣಿತ, ಚಿಟ್ಟಿ ಮೇಳ, ವೀರಗಾಸೆ, ಜನಪದ ಗೀತೆ, ತತ್ವ ಪದಗಳು, ಗೀಗಿ ಪದ, ಸೋಬಾನೆ ಪದ, ವೀರಭದ್ರ ಕುಣಿತ ನಾನಾ ಜನಪದ ಕಲಾ ಪ್ರದರ್ಶನಗಳು ನಡೆಯಲಿವೆ.
ಟೆನಿಸ್ ಬಾಲ್ ಕ್ರಿಕೆಟ್
ಆಲೂರು: ತಾಲೂಕಿನ ಬಿಜ್ಜನಹಳ್ಳಿ ಗ್ರಾಮದಲ್ಲಿ ಜ. 18 ಮತ್ತು 19ರಂದು ಜಯ ಕರ್ನಾಟಕ ಕ್ರಿಕೆಟರ್ಸ್ ವತಿಯಿಂದ 5ನೇ ವರ್ಷದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ರು. 8000 ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರು. 4000 ಹಾಗೂ ಟ್ರೋಫಿ ಇದ್ದು, ಪ್ರವೇಶ ಶುಲ್ಕ ರು. 650 ಇರುತ್ತದೆ. ಆಸಕ್ತ ತಂಡಗಳು ದೂ.ಸಂ. 497000522, 7353997525, 9686284758 ಸಂಪರ್ಕಿಸಬಹುದು. ಭಾಗವಹಿಸುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇದೆ. ಪಂದ್ಯಾವಳಿಯನ್ನು ಸಿಂಗಾಪೂರ ದೇವಾಲಯದ ಸಮೀಪದ ವೇ ಬ್ರಿಡ್ಜ್ ಎದುರು ಏರ್ಪಡಿಸಲಾಗಿದೆ.
ವಿವೇಕಾನಂದರ ಜನ್ಮದಿನ ಆಚರಣೆ
ಜಾವಗಲ್: ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವಂತೆ ಉಪನ್ಯಾಸಕ ಬಿ.ಎಂ. ನಾಗರಾಜು ತಿಳಿಸಿದರು. ಪಟ್ಟಣದ ಬನಶಂಕರಿ ಸಾಂಸ್ಕೃತಿಕ ಸಂಘದ ಟೇಕ್ವಾಂಡೋ ತರಬೇತಿ ಶಾಲೆ ಸ್ವಾಮಿ ವಿವೇಕಾನಂದರ 151ನೇ ಜನ್ಮ ದಿನಾಚರಣೆಯನ್ನು ಆಚರಿಸಿ ಮಾತನಾಡಿ, ಯುವಕರಿಗೆ ಅಪಾರವಾದ ಶಕ್ತಿ ಇದೆ. ನಿಮ್ಮ ಬಾಳಿನ ಶಿಲ್ಪಿ ನೀವೇ, ಜೀವನದ ದೌರ್ಬಲ್ಯವೇ ಮರಣ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ ಎಂದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖ್ಯ ಶಿಕ್ಷಕ ಗಿರೀಶ್, ಬನಶಂಕರಿ ಸಾಂಸ್ಕತಿಕ ಸಂಘದ ಅಧ್ಯಕ್ಷೆ ಶಾಂತಮ್ಮ, ತರಬೇತುದಾರ ಉದಯ್ ಇದ್ದರು.
ಸಂಶೋಧನಾ ಗುಣ ಬೆಳೆಸಿಕೊಳ್ಳುವುದು ಅಗತ್ಯ
ಹಾಸನ: ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆ ಸಂಶೋಧನಾ ಗುಣಗಳನ್ನು ಬೆಳೆಸಬೇಕು ಎಂದು ಬಿಜಿವಿಎಸ್ ಕಾರ್ಯದರ್ಶಿ ಅಹಮದ್ ತಿಳಿಸಿದ್ದಾರೆ. ನಗರದಲ್ಲಿ ಬಿಜಿವಿಎಸ್ ವತಿಯಿಂದ ಬಾಲ ವಿಜ್ಞಾನಿ ಘಟಕ ಉದ್ಘಾಟಿಸಿ ಮಾತನಾಡಿದರು. ಬಿಜಿವಿಎಸ್ನ ಖಜಾಂಚಿ ಕೆ.ವಿ. ಕವಿತಾ ಪ್ರಾಸ್ತಾವಿಕ ನುಡಿಗಳನ್ನಾಗಿ ಈಗಿನ ಶಿಕ್ಷಣ ಪದ್ಧತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಶೇ 75 ಕಲಿಕೆಯನ್ನು ತನ ಮುಂದಿನ ಜೀವನಕ್ಕೆ ಬೇಡದ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾನೆ ಎಂದರು.
ತಾನು ವಿದ್ಯಾಭ್ಯಾಸ ಮುಗಿಸಿದ ನಂತರ, ತಾನು ಮಾಡುವ ಕೆಲಸಕ್ಕೂ ತನ್ನ ವಿದ್ಯಾರ್ಥಿ ಜೀವನದಲ್ಲಿ ಕಲಿತ ವಿಷಯಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನಂತರ ದುಡ್ಡಿಗಾಗಿ ಜೀವನ- ಜೀವಕ್ಕಾಗಿ ದುಡಿಮೆ (ದುಡ್ಡು) ಇಷ್ಟೇ ಆಗಿ ಬಿಡುತ್ತದೆ. ಇದರಿಂದ ವ್ಯಕ್ತಿಯು ಯಾವುದೇ ಆವಿಷ್ಕಾರಕ್ಕಾಗಲಿ, ಹೊಸ ಸಂಶೋಧನೆಗಾಗಲಿ ತಲೆಕೆಡಿಸಿಕೊಳ್ಳದೆ ಕೇವಲ ದುಡ್ಡಿಗಾಗಿ ಇತರ ದೇಶಗಳ ಕೈ ಕೆಳಗೆ ದುಡಿಯುತ್ತಾ ಜೀವನದುದ್ದಕ್ಕೂ ಸಾಗ ಬೇಕಾಗುತ್ತದೆ. ಹೀಗಾದರೆ, ನಮ್ಮ ದೇಶ ಎಲ್ಲಾ ವಿಷಯಗಳಲ್ಲೂ ಮುಂದುವರೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವೇದಶ್ರೀರಾಜ್ ವಹಿಸಿ ಮಾತನಾಡಿದರು. ದೀಪಕ್ ಸ್ವಾಗತಿಸಿ ನಿರೂಪಿಸಿದರು.
ಅಮಾನತುಗೊಂಡಿಲ್ಲ: ಸ್ಪಷ್ಟನೆ
ಹಾಸನ: ತಮ್ಮನ್ನು ಸೇವೆಯಿಂದ ಅಮಾನತು ಮಾಡಿಲ್ಲ. ಕರ್ತವ್ಯ ಪಾಲನೆಯಲ್ಲಿ ಯಾವುದೇ ಲೋಪ ಎಸಗಿಲ್ಲ ಎಂದು ಅರಕಲಗೂಡು ತಾಲೂಕು ರಾಮನಾಥಪುರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯ ಎಸ್.ಜಿ. ಮೋಹನ್ ಸ್ಪಷ್ಟನೆ ನೀಡಿದ್ದಾರೆ.
ವೃದ್ದೆಯೊಬ್ಬಳಿಗೆ ಚುಚ್ಚುಮದ್ದು ನೀಡುವಾಗ ಸೂಚಿ ಮುರಿದು ಹೋಗಿತ್ತು. ಇದರಿಂದ ರೋಗಿಗೆ ತೊಂದರೆಯಾಗಿತ್ತು. ಆಸ್ಪತ್ರೆಯಲ್ಲಿ ಆಲೋಪತಿ ಔಷಧಿಗಳಿದ್ದವು. ಆಸ್ಪತ್ರೆಯಲ್ಲಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಲೋಪ ಎಸಗಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಪ್ರತಿದಿನ ನೂರಾರು ರೋಗಿಗಳು ಬರುತ್ತಾರೆ. ಅವರಿಗೆ ಸಹನೆ, ತಾಳ್ಮೆ ಮತ್ತು ಪ್ರೀತಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಕಾರಣ ಕೇಳಿ ನೋಟಿಸ್: ಏತನ್ಮಧ್ಯೆ, ಕರ್ತವ್ಯ ನಿರ್ಲಕ್ಷ್ಯದ ದೂರಿನ ಮೇರೆಗೆ ಕಾರಣ ಕೇಳಿ ವೈದ್ಯ ಮೋಹನ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಆಯುರ್ವೇದ ಅಧಿಕಾರಿ ಡಾ. ನಂಜರಾಜ್ ತಿಳಿಸಿದ್ದಾರೆ. ತಾವು ಆಸ್ಪತ್ರೆಗೆ ಭೇಟಿ ನೀಡಿದಾಗ ಅಲೋಪತಿ ಔಷಧಿಗಳಿದ್ದವು. ಸೌಮ್ಯ ಎಂಬಾಕೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಆಯುರ್ವೇದ ಔಷಧಿ ದಾಸ್ತಾನು ವಿವರವನ್ನು ಸಮರ್ಪಕವಾಗಿ ವೈದ್ಯ ಮೋಹನ್ ವಿವರಿಸಲಿಲ್ಲ.
ಈ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ವರದಿಯನ್ನು ಜಿಪಂ ಸಿಇಓ ಮತ್ತು ರಾಜ್ಯ ಆಯುರ್ವೇದ ನಿರ್ದೇಶನಾಲಯದ ಕಾರ್ಯದರ್ಶಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ವ್ಯಕ್ತಿ ಸಾವು; ಕೊಲೆ ಶಂಕೆ
ಅರಕಲಗೂಡು: ತಾಲೂಕಿನ ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಬ್ಬಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೊಬ್ಬಳಿ ಗ್ರಾಮದ ಮಾಯಿಗೌಡ ಎಂಬುವವರ ಮಗ ಸ್ವಾಮಿಗೌಡ (35) ಎಂಬುವವರು ಸಾವನ್ನಪ್ಪಿದ್ದು,ಹಲವು ರೀತಿಯ ಅನುಮಾನಗಳಿಗೆ ಕಾರಣವಾಗಿದ್ದು, ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಮೂಲತಃ ಕೊಡಗಿನ ಕೂಡಿಗೆ ಗ್ರಾಮದವನಾದ ಸ್ವಾಮಿಗೌಡ, ಮರಳು ತೆಗೆಯುವ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದು, ಗೊಬ್ಬಳಿ ಗ್ರಾಮದ ತನ್ನ ಹೆಂಡತಿಯ ಮನೆಯಲ್ಲೇ ಇದ್ದ ಎನ್ನ ಲಾಗಿದೆ. ಬುಧವಾರ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈತನ ಸಾವು ಸಂಭವಿಸಿದ್ದು, ಬೈಕು ಮತ್ತು ಮೃತನ ದೇಹ ಬೇರೆ ಬೇರೆ ಸ್ಥಳದಲ್ಲಿ ಬಿದ್ದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕೊಣನೂರು ಪೊಲೀಸರು ಪ್ರಕರಣ ದಾಖಲಿಸಿ, ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಕಸಾಯಿಖಾನೆಗೆ ಸಾಗಾಟ ಜಾನುವಾರು ವಶ
ಸಕಲೇಶಪುರ: ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಹಿಂದುಪರ ಸಂಘಟನೆಗಳು ರಕ್ಷಿಸಿ ಗ್ರಾಮಾಂತರ ಠಾಣೆಗೆ ಒಪ್ಪಿಸಿದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಹಾಸನದಿಂದ-ಮಂಗಳೂರಿಗೆ ಕ್ಯಾಂಟರ್ನಲ್ಲಿ 19 ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದನ್ನು ಪತ್ತೆ ಮಾಡಿದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಕ್ಯಾಂಟರ್ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಪಡಿಸಿಕೊಂಡ ಜಾನುವಾರುಗಳನ್ನು ಹಲುಸುಲಿಗೆ ಗ್ರಾಮದಲ್ಲಿರುವ ಕಾಮದೇನು ಗೋಶಾಲೆಗೆ ಬೀಡಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶತಾಯುಷಿ ನಿಧನ
ಹೊಳೆನರಸೀಪುರ: ಪಟ್ಟಣದಲ್ಲಿನ ದಾಸಗೌಡರ ಬೀದಿಯ ನಿವಾಸಿ ಶತಾಯುಷಿ ಮಹಿಳೆ ಸಣ್ಣಮ್ಮ (104) ಅನಾರೋಗ್ಯದಿಂದ ಗುರುವಾರದಂದು ನಿಧನರಾದರು. ದಿ. ನರಸಿಂಹಯ್ಯ ಅವರ ಪತ್ನಿಯಾಗಿದ್ದ ಸಣ್ಣಮ್ಮ ಅವರು ಗುತ್ತಿಗೆದಾರರಾದ ಯೋಗಣ್ಣ ಅವರ ತಾಯಿಯಾಗಿದ್ದರು. 1 ಗಂಡು, 2 ಹೆಣ್ಣು ಮಕ್ಕಳು, 8 ಮೊಮ್ಮಕ್ಕಳು ಹಾಗೂ 15 ಮುಮ್ಮೊಕ್ಕಳನ್ನು ಹೊಂದಿದ್ದ ಸಣ್ಣಮ್ಮ ಅವರು ಶತಾಯುಷಿಯಾದರೂ ಕನ್ನಡಕ ಊರುಗೋಲಿನ ಸಹಾಯವಿಲ್ಲದೇ ಆರೋಗ್ಯದಿಂದ ಓಡಾಡುತ್ತಿದ್ದರು. ಇತ್ತೀಚಿನ ಕೆಲ ತಿಂಗಳುಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅನಾರೋಗ್ಯದಿಂದ ಶತಾಯುಷಿ ಸಣ್ಣಮ್ಮ ಅವರು ತಮ್ಮ ಪುತ್ರ ದಾಸಗೌಡರ ಬೀದಿಯ ನಿವಾಸಿ ಯೋಗಣ್ಣ ಅವರ ನಿವಾಸದಲ್ಲಿ ಗುರುವಾರದಂದು ಮಧ್ಯಾಹ್ನ ಕೊನೆಯುಸಿರೆಳೆದರು. ಸಣ್ಣಮ್ಮ ಅವರು, 30 ವರ್ಷಗಳ ಹಿಂದೆ ರೇಣುಕಾ ಸಂಪ್ರದಾಯದಲ್ಲಿ ದೀಕ್ಷೆ ಪಡೆದಿದ್ದರು. ಮೃತರ ಅಂತ್ಯ ಸಂಸ್ಕಾರವನ್ನು ದೀಕ್ಷೆ ಪಡೆದಿರುವ ಹಿರಿಯರ ಸಮ್ಮುಖದಲ್ಲಿ ಸಂಜೆ ನೆರವೇರಿಸಲಾಯಿತು.
ರಾಜ್ಯಮಟ್ಟದ ಬೈಕ್ ರೇಸ್
ಹಾಸನ: ಚನ್ನರಾಯಪಟ್ಟಣ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಡರ್ಟ್ ರೇಸ್ ಹೆಸರಿನಲ್ಲಿ ಜ.18ರಂದು ರಾಜ್ಯ ಮಟ್ಟದ ಬೈಕ್ ರೇಸ್ ಅನ್ನು ಏರ್ಪಡಿಸಿರುವುದಾಗಿ ಕ್ಲಬ್ನ ಅಧ್ಯಕ್ಷ ಶಿವು ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರು ಭಾಗವಹಿಸಲಿದ್ದಾರೆ. ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಹಾಗೂ ಇತರರು ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು. ತಹಸೀಲ್ದಾರ್ ನಾಗರಾಜ್, ಇನ್ಸ್ಪೆಕ್ಟರ್ ಶೈಲೇಂದ್ರ ಕುಮಾರ್, ಸಬ್ ಇನ್ಸ್ಪೆಕ್ಟರ್ ರಾಜು, ವೈದ್ಯ ಡಾ. ಮಹೇಶ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಣಿ, ಮನು, ಲೋಹಿತ್ ಇದ್ದರು.