ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೆಡಿಎಸ್ ಧರಣಿಗೆ ಕಾಂಗ್ರೆಸ್ ಶಹಬ್ಬಾಸ್‌ಗಿರಿ!

Vishwanath S
Updated On : 17 Jan 2014, 1:09 am

ಕ.ಪ್ರ.ವಾರ್ತೆ , ಹಾಸನ , ಜ 16
ನಕಲಿ ಸಹಿ ಮಾಡಿ ಒಬ್ಬರ ಆಸ್ತಿಯನ್ನು ಇನ್ನೊಬ್ಬರಿಗೆ ಖಾತೆ ಮಾಡಿಕೊಡುವ ಪ್ರವೃತ್ತಿ ನಗರಸಭೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಧರಣಿ ನಡೆಸಿದರೆ, ಇತ್ತ, ಪ್ರತಿಪಕ್ಷದ ಸದಸ್ಯರಾದ ಕಾಂಗ್ರೆಸ್ ಸದಸ್ಯರು, ಆಡಳಿತಾರೂಢ ಪಕ್ಷದ ಸದಸ್ಯರೇ ಧರಣಿ ನಡೆಸುತ್ತಿದ್ದಾರೆ ಅಂತ ಚಪ್ಪಾಳೆ ತಟ್ಟಿ ಶಹಬ್ಬಾಸ್‌ಗಿರಿ ನೀಡಿದ ಅಪರೂಪ ಹಾಗೂ ವಿಲಕ್ಷಣ ಘಟನೆ ಗುರುವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಕಲಿ ಸಹಿಯಿಂದ ಅಕ್ರಮ: ನಗರದ ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷೆ ಶ್ರೀವಿದ್ಯಾ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಜೆಡಿಎಸ್ ಸದಸ್ಯ ಅನಿಲ್ ಕುಮಾರ್, ವಿಜಯ್ ಕುಮಾರ್, ಗೋಪಾಲ್ ಮಾತನಾಡಿ, ವಾರ್ಡ್ ನಂ. 33ರಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಕಲಿ ಸಹಿ ಮಾಡಿ ದೇವರಾಜ್ ಎಂಬುವರ ಆಸ್ತಿಗೆ ಸೇರಿದ ಖಾತೆಯನ್ನು ಕುಮಾರಸ್ವಾಮಿ ಎಂಬುವರಿಗೆ ಮಾಡಿಕೊಡಲಾಗಿದೆ. ಖಾತೆ ಬದಲಾವಣೆಯಲ್ಲಿ ನಕಲಿ ಸಹಿ ಕಂಡು ಬಂದ ಹಿನ್ನೆಲೆಯಲ್ಲಿ ಹಿಂದಿನ ಅಧ್ಯಕ್ಷರು ಈ ಬಗ್ಗೆ ಸರಿಯಾಗಿ ಪರಿಶೀಲಿಸುವಂತೆ ಸೂಚಿಸಿದ್ದರು. ಆದರೂ ಸಹ ಖಾತೆ ಮಾಡಿಕೊಡಲಾಗಿದೆ ಎಂದು ಅವರು ಆರೋಪಿಸಿದರು.
ಧರಣಿ: ನಕಲಿ ಸಹಿ ಮಾಡಿ ಖಾತೆ ಮಾಡಿಸಿಕೊಂಡಿರುವಂತಹ ಘಟನೆಗಳು ಹೆಚ್ಚಾಗುತ್ತಿರುವುದರಿಂದ ಈ ಬಗ್ಗೆ ಲೋಕಾಯುಕ್ತ ತನಿಖೆಗೆವಹಿಸಬೇಕು. ಯಾರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ಕಬಳಿಸಿದ್ದಾರೆ ಅಂತ ಬಯಲಾಗಬೇಕು. ಇದಕ್ಕೆ ಕೇಸ್ ವರ್ಕರ್ ಆಗಿರುವಂತಹ ಧನಂಜಯ್ ಕುಮಾರ್ ಅವರೇ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದು ಧರಣಿಗೆ ಮುಂದಾದರು.
ತನಿಖೆಗೆ ಸಿದ್ಧ: ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ರಮೇಶ್ ಬಾಬು ಮಾತನಾಡಿ, ಆ ಆಸ್ತಿಯು ತಂದೆಯಿಂದ ಮಗನಿಗೆ ಖಾತೆಯಾಗಬೇಕಿತ್ತು. ಮಂಜುನಾಥ್ ಎಂಬುವರು ನನಗೆ ಗೊತ್ತಿದ್ದ ವ್ಯಕ್ತಿಯಾಗಿದ್ದರಿಂದ ಅವರು ನನಗೆ ಎಂದು ಪತ್ರವನ್ನು ನೀಡಿದ್ದರಷ್ಟೇ. ಅಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಒಳಪಡಿಸಿದರೆ ಆದಕ್ಕೆ ನಾನು ಸಿದ್ಧನಿದ್ದೇನೆ ಎಂದರು.
ಯಶ್ವಂತ್, ಕುಮಾರ್ ಮಾತನಾಡಿ, ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಪರಿಶೀಲನೆ ನಡೆಸಬೇಕು. ಈ ರೀತಿಯ ನಕಲಿ ವ್ಯವಸ್ಥೆಗಳು ನಡೆಯುತ್ತಿರುವುದು ಸತ್ಯವಾದರೆ ಅದಕ್ಕೆ ಕಡಿವಾಣವನ್ನು ಹಾಕಬೇಕು. ಇದನ್ನು ತನಿಖೆಗೆ ಒಳಪಡಿಸಲಿ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು. ಈ ರೀತಿ ನಾನಾ ವಾರ್ಡ್‌ಗಳಲ್ಲಿ ಸರ್ಕಾರಿ ಜಾಗಗಳು ಇದ್ದು ಬೇರೆಯವರಿಗೆ ಖಾತೆ ಮಾಡಲಾಗಿದೆ ಎಂದರು.    
ಕುಂಬಳಕಾಯಿ ಕಳ್ಳ...: ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಂಡಿದ್ದಾರೆ ಎಂದು ಸದಸ್ಯ ಅನಿಲ್ ಕುಮಾರ್ ಹೇಳುವಾಗ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಅವರು ಮಾತಿನ ಮಧ್ಯೆ ಬಾಯಿ ಹಾಕಿದ್ದರಿಂದ ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳುತ್ತೀರಾ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರಾದ ಯಶ್ವಂತ್, ರಮೇಶ್ ಬಾಬು, ಕುಮಾರ್ ಆಕ್ರೋಶ ವ್ಯಕ್ತಪಡಿಸಿ, ಈ ಪದವನ್ನು ಬಳಕೆ ಮಾಡಬಾರದು. ಅಲ್ಲಿ ತಪ್ಪು ನಡೆದಿದ್ದರೆ ಅದನ್ನು ತನಿಖೆ ಮಾಡಿಸಲಿ. ನಂತರ ತನಿಖೆಯಿಂದ ತಪ್ಪು ಹೊರ ಬರಲಿದೆ. ಆದನ್ನು ಬಿಟ್ಟು ಬಾಯಿಗೆ ಬಂದಂತೆ ಹರಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಖರ್ಚು ಜಾಸ್ತಿ: ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ಕಸದಿಂದ ಗೊಬ್ಬರ ತೆಗೆಯುವ ಸಂಬಂಧ 3 ವಾರ್ಡ್‌ಗಳಲ್ಲಿ ಕ್ರಮಕೈಗೊಳ್ಳಲಾಗಿದೆ. ಅದರಿಂದ ಆದಾಯಕಿಂತ ವೆಚ್ಚವೇ ಹೆಚ್ಚಾಗಿದೆ. ಯಾವುದೇ ಕಾರ್ಯ ಮಾಡುವ ಮುನ್ನ ಅದರ ಸಾಧಕ ಭಾದಕಗಳನ್ನು ಪರಿಶೀಲಿಸಬೇಕು ಎಂದರು.
ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಕಸದಿಂದ ರಸ ತೆಗೆಯುವ ನಿಟ್ಟಿನಲ್ಲಿ ಗೊರೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಕಸದ ರಾಶಿಯಿಂದ ಗೊಬ್ಬರ ಮಾಡುವ ಕಾರ್ಯವನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಈಗಾಗಲೇ ಅವರು ಯಂತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಮೈಸೂರಿನಲ್ಲಿ ಶೂನ್ಯ ತ್ಯಾಜ್ಯ ಘಟಕಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಮಾಡಿ ಯಶಸ್ಸು ಕಂಡಿದ್ದಾರೆ. ಅದೇ ಮಾದರಿಯಲ್ಲಿ ನಾವು ಇಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ನಿಗದಿಪಡಿಸಿರುವ ಜಾಗದಲ್ಲಿ ಕಸ ಹಾಕಲು ಮುಂದಾದರೇ ಆ ವಿರುದ್ಧ ಜನ ವಿರೋಧ ವ್ಯಕ್ತಪಡಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇರ್ಷಾದ್ ಪಾಷ ಹಾಗೂ ಇತರರು ಇದ್ದರು.
'ಕಸ ವಿಲೇವಾರಿಗೆ ಲಾರಿ ಬಂದಿಲ್ಲ'
ಸದಸ್ಯ ಯಶ್ವಂತ್ ಮಾತನಾಡಿ, ನಗರದ ಗೊರೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಕಸದ ರಾಶಿಯಿಂದ ಗೊಬ್ಬರ ತಯಾರಿಸುವ ಬಗ್ಗೆ ಕ್ರಮಕೈಗೊಂಡಿದ್ದು, ಆ ಸಂಬಂಧವಾಗಿ ನಿರ್ಮಿತಿ ಕೇಂದ್ರಕ್ಕೆ ರು. 2 ಕೋಟಿ ಹಣ ಸಂದಾಯ ಮಾಡಲಾಗಿದೆ. ಆದರೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರಾ ಅಂತ ಯಾರಿಗೂ ಗೊತ್ತಿಲ್ಲ. ಜೊತೆಗೆ ಅಗಿಲೆಗೆ ಕಸವನ್ನು ರವಾನಿಸಬೇಕು ಅಂತ ಆಗಿದ್ದರೂ ಸಹ ಆ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, 3 ಟಿಪ್ಪರ್ ಲಾರಿಗಳ ಖರೀದಿಗೆ 33 ಲಕ್ಷ ವೆಚ್ಚ ಮಾಡಿ 6 ತಿಂಗಳು ಕಳೆದರೂ ಇನ್ನೂ ಟಿಪ್ಪರ್ ಲಾರಿ ಬಂದಿಲ್ಲ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement