ಜೈನ ದೀಕ್ಷೆಗೆ ಧೀರಜ್ ಸಿದ್ಧ
ಹೊಳೆನರಸೀಪುರ: ವಯಸ್ಸಿನಲ್ಲಿಯೇ ಅಹಿಂಸೆಯೇ ಪರಮಧರ್ಮ ಎಂಬ ಸಾರವನ್ನು ಜೀವನದ ಗುರಿಯಾಗಿಸಿಕೊಂಡು ಸನ್ಯಾಸಿಯಾಗುವ ದೀಕ್ಷೆ ಸ್ವೀಕರಿಸಲು ಮುಂದಾಗಿರುವ ಟಿ.ನರಸೀಪುರದ ಜೈನ ಸಮುದಾಯದ ಯುವಕ ಧೀರಜ್ ಕುಮಾರ್(20)ನನ್ನು ಇಲ್ಲಿನ ಮಹಾವೀರ್ ಜೈನ ಸಮುದಾಯದ ಬಾಂಧವರು ಇತ್ತೀಚೆಗೆ ಪಟ್ಟಣಕ್ಕೆ ಕರೆತಂದು ಸತ್ಕರಿಸಿ, ಸನ್ಮಾನಿಸಿ, ಭಕ್ತಿಪೂರ್ವಕವಾಗಿ ಆಶೀರ್ವದಿಸಿದರು.
ಮೆರವಣಿಗೆ: ಟಿ. ನರಸೀಪುರದ ವ್ಯಾಪಾರಿ ಜೈನ ಸಮುದಾಯದ ನವಲ್ ಕುಮಾರ್ ಹಾಗೂ ಪುಷ್ಪಾದೇವಿ ಅವರ ಪುತ್ರ ಧೀರಜ್ ಕುಮಾರ್.1ರಂದು ಆಚಾರ್ಯ ರಮೇಶ್ ಅವರಿಂದ ಶ್ವೇತಾಂಬರ ಅಹಿಂಸಾ ಧರ್ಮದ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಗಳಲ್ಲಿನ ಜೈನ ಸಮುದಾಯದವರು, ದೀಕ್ಷೆ ಸ್ವೀಕರಿಸುತ್ತಿರುವ ಯುವಕನನ್ನು ತಮ್ಮ ನಗರಗಳಿಗೆ ಕರೆಸಿ ಸತ್ಕರಿಸಿ ಆಶೀರ್ವದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪಟ್ಟಣದಲ್ಲಿನ ಮಹಾವೀರ್ ಜೈನ ಸಮುದಾಯ ಸಹ ಯುವಕ ಧೀರಜ್ ಕುಮಾರ್‌ರನ್ನು ಕರೆಸಿ, ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ನಂತರ, ಪಟ್ಟಣದಲ್ಲಿನ ದೇವಾಂಗ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಯಾಸಿ ದೀಕ್ಷೆ ಸ್ವೀಕರಿಸುತ್ತಿರುವ ಯುವಕ ಧೀರಜ್ ಕುಮಾರ್ ಅವರನ್ನು ತಮ್ಮ ಸಂಪ್ರದಾಯದ ವಿಧಿ- ವಿಧಾನದಂತೆ ಶಾಸ್ತ್ರೋಕ್ತವಾಗಿ ಆಶೀರ್ವದಿಸಿ ಸತ್ಕರಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಹಾವೀರ್ ಜೈನ ಸಮುದಾಯದ ಮುಖಂಡರಾದ ಗೌತಮ್, ಸಿದ್ಧಾರ್ಥ, ಮಹಾವೀರ್, ಕಮಲ್, ರಾಮಲಾಲ್, ವಿಮಲ್, ಸಾಗರ್ ಮಲ್, ರಾಮಪ್ರಸಾದ್ ಇತರರು ನೇತೃತ್ವ ವಹಿಸಿದ್ದರು.