ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಭಿನ್ನಾಭಿಪ್ರಾಯ ಬದಿಗೊತ್ತಿ, ಅಭ್ಯರ್ಥಿ ಗೆಲ್ಲಿಸಿ'

Vishwanath S
Updated On : 17 Jan 2014, 1:11 am

ಕ.ಪ್ರ.ವಾರ್ತೆ , ಆಲೂರು , ಜ.16
ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಜೆ.ಡಿ.ಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಕರೆನೀಡಿದರು.
ಅವರು ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಯುವ ಶಕ್ತಿಗೆ ಸ್ಫೂರ್ತಿ ನೀಡಿ, ಅವರನ್ನು ಸಂಘಟಿಸಲು ನಾನು ಕಾರ್ಯೋನ್ಮುಖನಾಗಿದ್ದೇನೆಯೇ ವಿನಃ ನಾನ್ಯಾವ ಎಂ.ಪಿ. ಅಥವಾ ಎಂಎಲ್‌ಎ  ಸ್ಥಾನದ ಆಕಾಂಕ್ಷಿಯಲ್ಲ. ನನಗೆ ಅಧಿಕಾರ ದಾಹವಿಲ್ಲ. ಯುವಕನೊಬ್ಬ ಧೈರ್ಯದಿಂದ ಮುನ್ನುಗ್ಗಿದರೆ ಯಾವ ರೀತಿ ಬದಲಾವಣೆ ತರಬಹುದೆಂಬುದಕ್ಕೆ ಬೇಲೂರು ಕ್ಷೇತ್ರದಲ್ಲಿ ಪಕ್ಷ ತಾಲೂಕು ಹಾಗೂ ಪುರಸಭೆಗಳಲ್ಲಿ ಜಯ ಗಳಿಸಿದ್ದೇ ಸಾಕ್ಷಿ ಎಂದರು.
ತಂದೆಯವರಿಗೆ ವಯಸ್ಸಾಗಿದೆ: ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಅಂತರ 28 ಸಾವಿರದಿಂದ 3 ಸಾವಿರಕ್ಕೆ ಮತಗಳಿಗೆ ಇಳಿದಿದೆ. ನಮ್ಮ ತಂದೆಯವರಿಗೂ ವಯಸ್ಸಾಗುತ್ತಿದ್ದು ಇನ್ನು ಒಂದೆರಡು ಎಂಎಲ್‌ಎ ಹಾಗೂ ಒಂದು ಎಂ.ಪಿ. ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದರು.
ಕೊನೆ ಚುನಾವಣೆ: ದೇವೆಗೌಡರದ್ದು, ಇದು ಕಡೆಯ ಚುನಾವಣೆ. ಆದ್ದರಿಂದ ಪಕ್ಷ ಮುಂಬರುವ ದಿನಗಳಲ್ಲಿ ಯುವಕರಿಗೆ ಮಾನ್ಯತೆ ನೀಡಲಿದೆ. ಪಕ್ಷದಲ್ಲಿರುವ ಯುವಶಕ್ತಿ ಒಗ್ಗೂಡಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಏಳಿಗೆಗೆ ಕೆಲಸ ಮಾಡಬೇಕು ಎಂದರು.
ಗೌಡರ ಕೈ ಬಲಪಡಿಸಿ: ಇತರೆ ಪಕ್ಷದವರಿಂದ ನಮಗೆ ತೊಂದರೆಯಾಗುತ್ತದೆಂದು ಧೃತಿಗೆಡಬೇಡಿ. ನಮ್ಮ ಸ್ವಂತ ಕ್ಷೇತ್ರದಲ್ಲೇ ನಮ್ಮ ಕುಟುಂಬದವರ ಮೇಲೆ ಫೈರಿಂಗ್ ಹಾಗೂ ಆಸಿಡ್ ದಾಳಿಗಳಾದರೂ ನಾವು ಧೃತಿಗೆಡಲಿಲ್ಲ. ಕೇಂದ್ರದಲ್ಲಿ ತೃತೀಯ ರಂಗ ಬಲಗೊಳ್ಳುತ್ತಿದ್ದು ದೇವೇಗೌಡರು ಪುನಃ ಪ್ರಧಾನಿಯಾಗುವ ಸಾಧ್ಯತೆಯಿದೆ. ಅವರನ್ನು ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸುವುದರ ಜತೆಗೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ದೇವೇಗೌಡರ ಕೈ ಬಲಪಡಿಸಬೇಕು ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಜ. 17ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದು, ತಾವು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದ ಅವರು, ಪಕ್ಷದಲ್ಲಿ ಎಲ್ಲಾ ರೀತಿಯ ಅನುಕೂಲ ಪಡೆದು ಕೊನೆಗೆ ಪಕ್ಷ ತೊರೆದವರ ಸ್ಥಿತಿ ಈಗ ಏನಾಗಿದೆ ಎಂಬುದನ್ನು ಹೆಚ್.ಎಂ.ವಿಶ್ವನಾಥ್ ರವರನ್ನು ನೋಡಿ ತಿಳಿದುಕೊಳ್ಳಲಿ. ಈಗ ಅವರೂ ಎಲ್ಲಿಯೂ ಸಲ್ಲದೇ ಅತಂತ್ರರಾಗಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement