ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಜ 16
ಮದ್ಯದ ಅಂಗಡಿಯನ್ನು ತೆರೆಯದಂತೆ ಆಗ್ರಹಿಸಿ ಹೆತ್ತೂರು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಹೆತ್ತೂರು ಗ್ರಾಮದಲ್ಲಿ ಈ ಹಿಂದೆ ಮದ್ಯದ ಅಂಗಡಿ ಇತ್ತು. ಅಂಗಡಿಯವರು ಕಾನೂನು ಬಾಹಿರವಾಗಿ ವ್ಯಾಪಾರಗಳನ್ನು ಮಾಡಲಾಗುತ್ತಿತ್ತು. ಈ ಬಗ್ಗೆ ಹೆತ್ತೂರು ಗ್ರಾಮಸ್ಥರು ಗ್ರಾಮ ಪಂಚಾಯ್ತಿಯ ಮುಂದೆ ಪ್ರತಭಟನೆ ನಡೆಸಿದ ಪರಿಣಾಮವಾಗಿ ಅಕ್ರಮವಾಗಿ ನಡೆಯುತ್ತಿದ್ದಂತಹ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲಗಳು ಆಗಿವೆ.
ಪಟ್ಟು: ಆದರೆ ಹೆತ್ತೂರು ಗ್ರಾಮದ ಗೌಡಪ್ಪನ ಕೆರೆ ಬಡವಾಣೆಯಲ್ಲಿ ಕಳೆದ ನವೆಂಬರ್ ಅಂತ್ಯದೊಳಗೆ ಖಾಸಗಿ ಮದ್ಯದ ಅಂಗಡಿ ತೆರೆಯುವ ಬಗ್ಗೆ ವದಂತಿ ಕೇಳಿ ಬಂದಿದ್ದರಿಂದ ಈ ಬಡಾವಣೆಯ ಸಾರ್ವಜನಿಕರು ಮದ್ಯದ ಅಂಗಡಿಯನ್ನು ನಿಷೇಧಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಮತ್ತೆ ಮದ್ಯದ ಅಂಗಡಿಯನ್ನು ತೆರೆಯುವುದಾಗಿ ಕೇಳಿ ಬರುತ್ತಿರುವುದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು.
ಆರೋಪ: ಇಲ್ಲಿನ ಜನರು ಈಗ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದು, ಮದ್ಯದ ಅಂಗಡಿಗೆ ಅನುಮತಿ ನೀಡಿದರೆ ಇಲ್ಲಿರುವ ಶಾಂತಿಯ ವಾತಾವರಣ ಹಾಳಾಗಲಿದೆ. ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಸಾಧ್ಯವಾಗುವುದಿಲ್ಲ. ಕುಡುಕರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬೀಳಲಿವೆ. ನೆಮ್ಮದಿಯ ಜೀವನ ನಡೆಸಲು ಕಡಿವಾಣ ಹಾಕಿದಂತಾಗುತ್ತದೆ ಎಂದು ಆರೋಪಿಸಿದರು.
ಒತ್ತಾಯ: ಗ್ರಾಮದಲ್ಲಿ ಇದ್ದ ಮದ್ಯದ ಅಂಗಡಿಯನ್ನು ಗ್ರಾಮಸ್ಥರು ಹೋರಾಟ ಮಾಡಿ ಮುಚ್ಚಿಸಿರುವ ಸಂದರ್ಭದಲ್ಲಿ ಮತ್ತೆ ಖಾಸಗಿ ವ್ಯಕ್ತಿಗಳಿಗೆ ಇಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ. ಗ್ರಾಮಸ್ಥರೇ ಮದ್ಯದ ಅಂಗಡಿ ಬೇಡ ಅಂತ ಹೇಳುತ್ತಿರುವಾಗ ಒತ್ತಾಯಿದಿಂದ ಇಲ್ಲಿ ಅಂಗಡಿ ತೆರೆಯುವಂತಹ ಅವಶ್ಯಕತೆ ಏನಿದೆ. ಆದ್ದರಿಂದ ಕೂಡಲೇ ಅಂಗಡಿ ತೆರೆಯಬೇಕೆಂದಿರುವ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಚ್.ಎಂ. ಗುರುರಾಜ್, ಡಿ.ಎಂ.ಸತೀಶ್, ಎಚ್.ಎಂ.ಧರ್ಮೇಗೌಡ, ದಿವಾಕರ್, ಗೋವಿಂದೇಗೌಡ, ಸುಬ್ರಹ್ಮಣ್ಯ, ರಾಮಚಂದ್ರ, ಸಣ್ಣಪ್ಪ, ಚಂದ್ರಶೇಖರ್, ಎಚ್.ಎ.ರಘು, ಪುಟ್ಟಗೌರಮ್ಮ, ವಿಶಲಾಕ್ಷಿ, ಶೋಭ ಹಾಗೂ ಇತರರು ಇದ್ದರು.