ಮಹಿಳೆ ಬಲಿ ತೆಗೆದುಕೊಂಡಿದ್ದ ಸಲಗ ಸೆರೆ
ಕನ್ನಡಪ್ರಭ ವಾರ್ತೆ, ಆಲೂರು. ಜ 16
ತಾಲೂಕಿನ ಕೆಂಚಮ್ಮನಹೊಸಕೋಟೆ ಹೋಬಳಿಯ ದೊಡ್ಡಬೆಟ್ಟ ಅರಣ್ಯ ಪ್ರದೇಶ, ರಂಗನಬೆಟ್ಟ ಸುತ್ತಮುತ್ತಲ ಗ್ರಾಮಗಳಲ್ಲಿ ದಾಂಧಲೆ ನಡೆಸುತ್ತಿದ್ದ ಕಳೆದ ಗುರುವಾರವಷ್ಟೆ ಪುರಭೈರವನಹಳ್ಳಿ ಗ್ರಾಮದಲ್ಲಿ ಮಹಿಳೆಯೋರ್ವಳನ್ನು ಬಲಿ ತೆಗೆದುಕೊಂಡಿದ್ದ ಒಂಟಿ ಸಲಗವನ್ನು ಗುರುವಾರ ದೊಡ್ಡಬೆಟ್ಟ ಅರಣ್ಯ ಪ್ರದೇಶದ ನಾಗಾವಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದರು.
ಕಳೆದ 6 ದಿನಗಳಿಂದ ಕಾಡಾನೆ ಹಿಡಿಯಲು ಮಾಗಡಿಹಳ್ಳಿ ಬಳಿ ಕ್ಯಾಂಪ್ ನಿರ್ಮಿಸಿ ಕೊಡಗಿನ ಕೆ. ಗುಡಿ ಕ್ಯಾಂಪ್ನಿಂದ ವಿಕ್ರಂ, ಪ್ರಶಾಂತ್ ಹಾಗೂ ನಾಗರಹೊಳೆ ಕ್ಯಾಂಪ್ನಿಂದ ಅರ್ಜುನ, ಅಭಿಮನ್ಯು, ಬಲರಾಮ ಎಂಬ ಆನೆಗಳನ್ನು ಕರೆತಂದು ಇವುಗಳೊಂದಿಗೆ 30ಕ್ಕೂ ಹೆಚ್ಚು ಮಂದಿ ಕಾಡು ಕುರುಬರು, ಕಾವಾಡಿಗರು, ಮಾವುತರು ಸೇರಿದಂತೆ ವೈದ್ಯರು ಅರವಳಿಕೆ ತಜ್ಞರೊಂದಿಗೆ ಅರಣ್ಯಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು.
ಅರವಳಿಗೆ ಚುಚ್ಚುಮದ್ದು, ಚೆನೈನಿಂದ ಬರಲು 5 ದಿನ ತಡವಾದ ಕಾರಣ ಆಪರೇಷನ್ ಮಾಗಡಿಹಳ್ಳಿ ವಿಳಂಬವಾಗಿದ್ದು, ಗುರುವಾರ ಬೆಳಗ್ಗೆ ವೈದ್ಯರು ಹಾಗೂ ಗುರಿಕಾರರು ಕ್ಯಾಂಪ್ಗೆ ಆಗಮಿಸಿದರು.
ಸೆರೆ: ಸ್ಥಳಿಯರಾದ ಗುರಿಕಾರ ಹೊನ್ನವಳ್ಳಿ ವೆಂಕಟೇಶ್ ಅವರು ಕಳೆದ ದಿನದಿಂದ ಒಂಟಿ ಸಲಗ ಇರುವುದನ್ನು ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಗುರುತಿಸಿ ಅದರ ಇರುವಿಕೆಯ ನಿಖರ ಸ್ಥಳವನ್ನು ಹೇಳಿದರು. ಅದರಂತೆ ಬೆಳಗ್ಗೆ 10.30ಕ್ಕೆ ಕಾರ್ಯಾಚರಣೆ ಪ್ರಾರಂಭಿಸಿ ಕೇವಲ 2 ಗಂಟೆ ಅವಧಿಯಲ್ಲಿ ಕಾಡಾನೆಗೆ ನಾಗಾವಾರ ಅರಣ್ಯ ಪ್ರದೇಶದಲ್ಲಿ ಚುಚ್ಚುಮದ್ದು ನೀಡಲಾಯಿತು. ಚುಚ್ಚುಮದ್ದು ನೀಡಿದ ನಂತರ ಆನೆ ದಟ್ಟ ಅರಣ್ಯದೊಳಗೆ 2 ಕಿಮೀನಷ್ಟು ಓಡಿ ಹೋಗಿ ಪ್ರಜ್ಞೆ ತಪ್ಪಿತ್ತು. ತಕ್ಷಣ ಸಾಕಾನೆಗಳೊಂದಿಗೆ ಅರಣ್ಯ ಸಿಬ್ಬಂದಿಗಳು ಕಾಡಾನೆ ಬಿದ್ದ ಸ್ಥಳಕ್ಕೆ ಹೋಗಿ ಆನೆಯ ಮೇಲೆ ನೀರನ್ನು ಸುರಿದು ಹಗ್ಗ ಸರಪಳಿಗಳನ್ನು ಬಿಗಿದು ನಂತರ ಎಚ್ಚರಗೊಳಿಸಿದರು.
ಸಾಹಸ: ದುರ್ಗಮ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸಿಕ್ಕಿಬಿದ್ದಿದ್ದರಿಂದ ಕಾಡಾನೆಯನ್ನು ಕ್ಯಾಂಪ್ಗೆ ತರಲು ಅರಣ್ಯ ಸಿಬ್ಬಂದಿ ಪರದಾಡಿದರು. ಕಾಡಾನೆಯನ್ನು ಕಾಡಿನಿಂದ ಎಳೆತರುವ ಸಂದರ್ಭದಲ್ಲಿ ಪ್ರತಿರೋದ ತೋರಿ ದಣಿದಿದ್ದ ಕಾಡಾನೆ ಅಲ್ಲಿಯೇ ಕುಸಿದು ಬಿತ್ತು. ನಂತರ ಆನೆಗೆ ಗ್ಲೂಕೋಸ್ ನೀಡಿ ಪುನಃ ಮೈಮೇಲೆ ನೀರು ಹಾಕಿ ಎಚ್ಚರಗೊಳಿಸಲು ಅರಣ್ಯ ಸಿಬ್ಬಂದಿ ಪರದಾಡಬೇಕಾಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಶ್ರಮಪಡಬೇಕಾಯಿತು. ಜನರು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳಿಗೆ ಬಗ್ಗದ ಕಾರಣ ಜನರನ್ನು ಚದುರಿಸಲು ಸಾಕಾನೆಯನ್ನು ಕರೆತಂದು ಪ್ರಯತ್ನಿಸಿದರೂ ಸಹ ಜನರು ಸ್ಥಳದಿಂದ ಕದಲಲಿಲ್ಲ.
ಇದು ಆ ಆನೆಯಲ್ಲ!: ಇದರಿಂದ ರೋಸಿಹೋದ ಆರಣ್ಯ ಇಲಾಖೆಯವರು ಆನೆ ಕುಸಿದು ಬಿದ್ದಿದ್ದ ಸ್ಥಳದಲ್ಲೇ ಇದ್ದ ಒಂದು ಮರಕ್ಕೆ ಆನೆಯನ್ನು ಕಟ್ಟಲು ಸಿದ್ಧತೆ ಮಾಡಿಕೊಂಡದರು. ಹಿಡಿದಿರುವ ಕಾಡಾನೆ ಚಿಕ್ಕದಾಗಿದ್ದು, ಮಹಿಳೆಯನ್ನು ಬಲಿತೆಗೆದುಕೊಂಡು ಪುರಭೈರವನಹಳ್ಳಿ, ಅಡಿಬಯಲು ಸುತ್ತಮುತ್ತ ದಾಂಧಲೆ ನಡೆಸಿದ ಆನೆ ಇದಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಭಾಗದಲ್ಲಿ ದಾಂಧಲೆ ನಡೆಸುತ್ತಿರುವ ಒಂಟಿ ಸಲಗ, 14 ಅಡಿಗೂ ಎತ್ತರವಿದ್ದು, ದೊಡ್ಡದಾದ ದಂತಗಳನ್ನು ಹೊಂದಿದ್ದ ಬಲಿಷ್ಠ ಆನೆಯಾಗಿದೆ.
ಗ್ರಾಮಸ್ಥರ ಪಟ್ಟು: ಕಳೆದ ಬಾರಿಯೂ ದೊಡ್ಡ ಆನೆಯನ್ನು ಹಿಡಿಯುವುದಾಗಿ ಹೇಳಿ ಕಳೆದ ಬಾರಿಗಿಂತಲೂ ಚಿಕ್ಕ ಆನೆಯನ್ನು ಈ ಬಾರಿಯೂ ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ನಾವು ಎಲ್ಲಾ ಆನೆಗಳನ್ನು ಹಿಡಿಯುವವರೆಗೂ ಕ್ಯಾಂಪ್ ತೆರವುಗೊಳಿಸಲು ಬಿಡುವುದಿಲ್ಲ ಎಂದ ಗ್ರಾಮಸ್ಥರು ತಿಳಿಸಿದರು.
ಶಾಸಕರ ಆಶ್ವಾಸನೆ: ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರು, 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯವರು ಕಾಡಾನೆಯನ್ನು ಹಿಡಿದಿರುವುದು ಸ್ವಾಗತಾರ್ಹ. ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಮಾನವ ಹಾಗೂ ಕಾಡಾನೆ ಸಂಘರ್ಷಯನ್ನು ತಪ್ಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಈಗಾಗಾಲೇ ನಾವು ಇದೇ ಭಾಗದಲ್ಲಿ ಕೆ ಗುಡಿ, ನಾಗರಹೊಳೆ, ಕೊಡಗಿನ ತಿತುಮತಿ ಆರಣ್ಯಪ್ರದೇಶದಲ್ಲಿ ಇರುವಂತೆ ಶಾಶ್ವತ ಕ್ಯಾಂಪ್ ಅನ್ನು ಇದೇ ಭಾಗದಲ್ಲಿ ಸ್ಥಾಪಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಪ್ರದೇಶದಲ್ಲಿಯೇ ಆ ರೀತಿ ಆನೆ ಕ್ಯಾಂಪ್ ನಿರ್ಮಾಣವಾದರೆ ಇಲ್ಲಿಯೇ ಶಾಶ್ವತವಾಗಿ ಸಾಕಾನೆಗಳು, ಮಾವುತರು, ಕಾವಾಡಿಗಳು, ಸೇರಿದಂತೆ ತಜ್ಞರು ಇರುತ್ತಾರೆ. ಪುನಃ ಕಾಡಾನೆ ಸಮಸ್ಯೆ ತಲೆದೂರಿದರೆ ತಕ್ಷಣವೇ ಕ್ರಮಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ರಸ್ತೆ, ಸಾರಿಗೆ ಹಾಗೂ ಶೌಚಾಲಯ ಸೌಕರ್ಯಗಳನ್ನು ನೀಡಿ, ಇವೆ ಪ್ರಮುಖ ಕಾರಣಗಳಿಂದ ಜನ, ಆನೆಗಳಿಗೆ ಬಲಿಯಾಗುತ್ತಿದ್ದು, ಈ ಸೌಲಭ್ಯಗಳನ್ನು ನೀಡಿದರೆ, ಜನರಿಗೆ ಅನುಕೂಲವಾಗುತ್ತದೆ ಎಂದು ಶಾಸಕರಲ್ಲಿ ಮನವಿ ಸಲ್ಲಿಸಿದರು.
ಕಾರ್ಯಾಚರಣೆಯಲ್ಲಿ ಗುರಿಕಾರರಾದ ಹೊನ್ನವಳ್ಳಿ ವೆಂಕಟೇಶ್, ಕರಂಬಯ್ಯ, ಅಕ್ರಂ, ವೈದ್ಯರಾದ ಚಿಟ್ಟಿಯಪ್ಪ, ನಾಗರಾಜು, ಉಮಾಶಂಕರ್ ಹಾಗೂ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು. ಡಿಎಫ್ಓ ಅಪ್ಪುರಾವ್, ಎಸಿಎಫ್ ಮಂಜುನಾಥ್, ಡಿವೈಎಸ್ಪಿ ಕುಮಾರಸ್ವಾಮಿ ಹಾಗೂ ಇತರರು ಇದ್ದರು.