ರಸ್ತೆ ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆ
ಕ.ಪ್ರ.ವಾರ್ತೆ , ಹಾಸನ , ಜ 16
ಅರಸೀಕೆರೆ ತಾಲೂಕಿನ 45 ಹಳ್ಳಿಗಳ ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ ಎಂಬ ವರದಿಯನ್ನು ಮುಖ್ಯಮಂತ್ರಿಗಳ ಪರಿವೀಕ್ಷಣಾ ಕೋಶದಿಂದ ಸಾಬೀತಾಗಿದೆ ಎಂದು ಶಾಸಕರು ಹೇಳಿದ್ದಾರೆ. ಆದರೆ 6 ಇಂಚು ಕಾಂಕ್ರೀಟ್ ಹಾಕುವ ಮೂಲಕ ನಿಮಯ ಉಲ್ಲಂಘಿಸಿದ್ದಾರೆ.
ಹಿಂದೆ ಕಾಮಗಾರಿ ನಡೆದಿರುವುದೆಲ್ಲಾ ಅಕ್ರಮವೇ ಎಂದು ಆರೋಪಿಸಿದ್ದ ಜಿಲ್ಲಾ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಅಧ್ಯಕ್ಷ ಪಟೇಲ್ ಶಿವಪ್ಪ ಈಗ ಕಾಂಕ್ರಿಟ್ 6 ಇಂಚು ಹಾಕಬೇಕೆನ್ನುವ ನಿಯಮ ಉಲ್ಲಂಘಿಸಿದ್ದಾರೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇಷ್ಟಬಂದ ರೀತಿಯಲ್ಲಿ ಕಾಮಗಾರಿ: ರು. 25 ಕೋಟಿ ಕಾಮಗಾರಿಯನ್ನು ಎಎಸ್ಐಪಿ ಕಂಪನಿಗೆ ಕೊಡಿಸಿದ್ದಾರೆ. ಇಲ್ಲಿ ಗ್ರಾಮಗಳಲ್ಲಿ 9 ಇಂಚು ರಸ್ತೆಗೆ ಕಾಂಕ್ರೀಟ್ ಆಗದೇ, ಗ್ರಾಮಸ್ಥರು ಹೇಳಿದರು ಎಂಬ ಕಾರಣಕ್ಕೆ 6 ಇಂಚು ರಸ್ತೆಗಳನ್ನು ಮಾಡಿದ್ದಾರೆ. ನಿಯಮದ ಪ್ರಕಾರನೇ ಕಾಮಗಾರಿಗಳನ್ನು ಮಾಡಬೇಕು. ಅದನ್ನು ಬಿಟ್ಟು ತಮಗೆ ಇಷ್ಟ ಬಂದ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಸರಿಯಲ್ಲ ಎಂದರು.
ಶೇ. 30ರಷ್ಟು ಕೆಲಸ: ಚುನಾವಣೆಯ ನಂತರ ಮತ್ತೆ 3 ಇಂಚು ಕಾಂಕ್ರಿಟನ್ನು ಹಾಕಿದ್ದಾರೆ. ರು. 25 ಕೋಟಿ ವ್ಯವಹಾರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದ ಅವರು, ಜೊತೆಗೆ ಲ್ಯಾಂಡ್ ಆರ್ಮಿಯಿಂದ ಸಿಮೆಂಟನ್ನು ಪಡೆದು ಕಾಂಕ್ರೀಟ್ ರಸ್ತೆಗಳಿಗೆ ಬಳಸಿಕೊಳ್ಳಲಾಗಿದೆ. ಈ ರೀತಿಯಾಗಿ ಅರಸೀಕೆರೆ ಕ್ಷೇತ್ರದಲ್ಲಿ ಆಗಿರುವಂತಹ ಅಭಿವೃದ್ಧಿ ಕೆಲಸಗಳಲ್ಲಿ ಶೇ.30ರಷ್ಟು ಮಾತ್ರ ಕೆಲಸ ಆಗಿದೆ ಎಂದು ಹೇಳಿದರು. ಅರಸೀಕೆರೆಯಲ್ಲಿ ಸುಮಾರು ರು. 100 ಕೋಟಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದ ಅವರು, ಶಾಸಕರು ಬಹಿರಂಗ ಸಭೆಗೆ ಸಿದ್ಧ ಎಂದಿದ್ದಾರೆ. ಆದಕ್ಕೆ ನಾವು ಸಹ ಸಿದ್ಧವಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ನೀಲಕಂಠಪ್ಪ, ಅಜ್ಜಣ್ಣ, ಮಂಜಪ್ಪ ಇದ್ದರು.