'ಸೌಲಭ್ಯಕ್ಕಾಗಿ ಜಂಗಮರು ಹೋರಾಡಬೇಕು'
ಕ.ಪ್ರ.ವಾರ್ತೆ , ಅರಸೀಕೆರೆ , ಜ.16
ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಳ್ಳಬೇಕಾದರೆ ಬೇಡ ಜಂಗಮರು ಸಂಘಟಿತರಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಹಾಸನ ಜಿಲ್ಲಾ ಬೇಡ ಜಂಗಮರ ಸಮಾಜದ ಅಧ್ಯಕ್ಷ ಕೆ.ಜಿ. ರುದ್ರಸ್ವಾಮಿ ತಿಳಿಸಿದರು.
ತಾಲೂಕಿನ ತಳಲೂರು ಹಾಗೂ ಗಂಡಸಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೇಡ ಜಂಗಮರ ಹೋಬಳಿ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ಅಂಶ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ತಿಳಿದುಬಂದಿದೆ.
ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಇದುವರೆಗೂ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, 2014ರಲ್ಲಿ ನಡೆಯುವ ಜಾತಿ ಜನಗಣತಿಯ ವೇಳೆಯಲ್ಲಿ ಸಮಾಜ ಬಾಂಧವರು ಬೇಡ ಜಂಗಮ ಎಂದು ಮಾಹಿತಿ ನೀಡುವಂತೆ ಸಲಹೆ ನೀಡಿದರು.
ತಾಲ್ಲೂಕು ಉಪಾಧ್ಯಕ್ಷ ಮಾವುತನಹಳ್ಳಿ ಸಿದ್ದಯ್ಯ ಮಾತನಾಡಿದರು. ಮಲ್ಲಿಕಾರ್ಜುನ ಹಿರೇಮಠ್, ತರುಣ್ ದೇವ್, ಶಿವಣ್ಣ, ರಾಜು, ವಿರೂಪಾಕ್ಷಯ್ಯ ಇದ್ದರು. ಇದೇ ವೇಳೆ ತಾಲೂಕು ಅಧ್ಯಕ್ಷರಾಗಿ ತೋಂಟದಾರ್ಯ, ಗೌರವಾಧ್ಯಕ್ಷರಾಗಿ ಶಾಂತಯ್ಯ, ಉಪಾಧ್ಯಕ್ಷರಾಗಿ ಶಿವಶಂಕರಯ್ಯ ಹಾಗೂ ಗೀಜಿಹಳ್ಳಿ ಸಿದ್ದವೀರಯ್ಯ, ರೇಣುಕಯ್ಯ, ಟಿ.ಎಸ್. ಜಗದೀಶ್ ಅವರುಗಳನ್ನು ಹೋಬಳಿ ಮಟ್ಟದ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.