ಆತ್ಮ ಪರಿಶುದ್ಧವಾಗಿಟ್ಟುಕೊಳ್ಳುವುದು ಅಗತ್ಯ
ಕ.ಪ್ರ.ವಾರ್ತೆ , ಶ್ರವಣಬೆಳಗೊಳ , ಜ.17
ಪ್ರತಿಯೊಬ್ಬರೂ ಆತ್ಮವನ್ನು ಪರಿಶುದ್ಧವಾಗಿಟ್ಟುಕೊಳ್ಳುವುದು ಅಗತ್ಯ. ಇದಕ್ಕೆ ಧ್ಯಾನ ಅನುವು ಮಾಡಿಕೊಡುತ್ತದೆ ಎಂದು ಶ್ರವಣಬೆಳಗೊಳ ಜೈನ ಮಠದ ಪೀಠಾಧಿಪತಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಆಶೀರ್ವಚನ: ಜರ್ಮನಿಯ ಆನ್ಲೈನ್ ಪತ್ರಕರ್ತ ದಂಪತಿಗಳಾದ ಶ್ರೀಮತಿ ಕಾರ್ಲಾ ಜೀರ್ಡ್ಸ್ ಮತ್ತು ಕ್ರಿಶ್ಚಿಯನ್ ಜೀರ್ಡ್ಸ್ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಅಂಗವಾಗಿ ಜೈನ ಮಠದ ಸಭಾಂಗಣದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜೈನ ತತ್ವಶಾಸ್ತ್ರದ ಕೊಡುಗೆ ಕುರಿತಾದ ಸಾಹಿತಿಗಳು ಮತ್ತು ಸಂಶೋಧಕರೊಂದಿಗಿನ ಸಂವಾದ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪ್ರೇರಣೆ: ದೇಹದ ಅಸ್ತಿತ್ವವನ್ನು ಮರೆತು ಅಂತರಂಗ ದರ್ಶನ ಮಾಡಿಕೊಳ್ಳಲು ಧ್ಯಾನವನ್ನು ಅವಲಂಬಿಸಬೇಕು. ಜೈನ ಧರ್ಮವು ಅಂತರಂಗ ದರ್ಶನದತ್ತ ಗಮನ ಸೆಳೆಯುತ್ತದೆ. ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಮುಕ್ತಿ ಪಡೆಯುವ ಮಾರ್ಗ: ಪ್ರತಿಯೊಂದು ಜೀವವೂ ಮುಕ್ತಿ ಪಡೆಯಬಹುದು ಎಂಬುದುನ್ನು ಜೈನ ಸಿದ್ಧಾಂತ ಪ್ರತಿಪಾದಿಸುತ್ತದೆ. ಪ್ರಶ್ನೆ ಕೇಳುವುದು, ಉತ್ತರ ಪಡೆಯುವುದು, ತನ್ಮೂಲಕ ಸಂಪೂರ್ಣ ಜ್ಞಾನ ಪಡೆಯುವುದು ಶಾದ್ವಾದ ಎನಿಸಿಕೊಳ್ಳುತ್ತದೆ. ಅದೇ ಮುಕ್ತಿ ಪಡೆಯುವ ಮಾರ್ಗ ಎಂದು ತಿಳಿಸಿದರು.
ಗಮನಿಸಬೇಕಾದ ಅಂಶ: ಭಾರತದ ಬಗ್ಗೆ ಅತ್ಯಂತ ಆಸಕ್ತಿಯಿಂದ ಢಿಢಿಢಿ.ಜ್ಠಜಟ್ಟಿಢಿ4ಣ್ಟ್ಡ.ಟಿಜಡಿ ಎಂಬ ಆನ್ಲೈನ್ ಪತ್ರಿಕೆ ನಡೆಸುತ್ತಿರುವ ಶ್ರೀಮತಿ ಕಾರ್ಲಾ ಜೀರ್ಡ್ಸ್ ಮತ್ತು ಕ್ರಿಶ್ಚಿಯನ್ ಜೀರ್ಡ್ಸ್ ಅವರಲ್ಲಿರುವ ಜೈನಧರ್ಮದ ಆಸಕ್ತಿ ಕುರಿತು ಆಚಾರ್ಯ ತುಳಸಿ ಪರಂಪರೆಯವರಾದ ಆಚಾರ್ಯ ಮಹಾಪ್ರಜ್ಞ ಅವರು ಈ ಪತ್ರಕರ್ತ ದಂಪತಿಗೆ ಅಪರಿಗ್ರಹ ಮತ್ತು ಕರುಣಾ ಎಂಬ ಹೆಸರಿಟ್ಟಿರುವುದು ಗಮನಿಸಬೇಕಾದ ಅಂಶ ಎಂದು ಹೇಳಿದರು.
ಜೈನಧರ್ಮದ ಬಗ್ಗೆ ಕುತೂಹಲ: ಶ್ರೀಮತಿ ಕಾರ್ಲಾ ಜೀರ್ಡ್ಸ್ ಮತ್ತು ಕ್ರಿಶ್ಚಿಯನ್ ಜೀರ್ಡ್ಸ್ ಮಾತನಾಡಿ, ಜರ್ಮನಿಯಲ್ಲಿ ಭಾರತೀಯ ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಆಸಕ್ತಿ ಇದೆ. ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದ ಜೈನಧರ್ಮದ ಕುರಿತು ತಿಳಿಯುವ ಕುತೂಹಲ ಹೆಚ್ಚುತ್ತಿದೆ. ಜರ್ಮನಿಯ ವಿದ್ವಾಂಸರೊಬ್ಬರು ವಿವಿಧ 200 ಭಾಷೆಗಳನ್ನು ಕಲಿತು ಅಷ್ಟೂ ಭಾಷೆಗಳ ದರ್ಶನಗಳ ಮುಖ್ಯಾಂಶಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದಾರೆ. ಅವರ ಹೆಸರಿನಲ್ಲಿಯೇ ಒಂದು ವಿಶ್ವವಿದ್ಯಾನಿಲಯವಿದೆ. ಅಲ್ಲಿ ಅಧ್ಯಯನಕ್ಕೆ ವಿದ್ಯಾರ್ಥಿ ವೇತನವೂ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು. ನಾಡೋಜ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜಸ್ಥಾನ ಉದಯಪುರದ ಪ್ರೊ. ಪ್ರೇಮ್ ಸಮನ್ ಜೈನ್, ಧವಲೇತರ ಕನ್ನಡ ಅನುವಾದ ಯೋಜನೆ ನಿಪ್ಸಾರ್ ಸಂಯೋಜಕರಾದ ಜಾನಪದ ತಜ್ಞ ಡಾ. ಎಂ.ಎ. ಜಯಚಂದ್ರ ಮತ್ತು ಇತಿಹಾಸ ಪ್ರಾಧ್ಯಾಪಕ ಹೊಸಪೇಟೆಯ ಪ್ರೊ. ಜೀವನಧಾರಾ ಕುಮಾರ್ ಇದ್ದರು. ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಂ.ಜೆ. ಇಂದ್ರಕುಮಾರ್ ಸ್ವಾಗತಿಸಿದರು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ವಂದಿಸಿದರು.
ಸಂಕ್ರಾಂತಿ ದಿನ ನಡೆದ ಈ ಕಾರ್ಯಕ್ರಮದಲ್ಲಿ ಬಾಹುಬಲಿ ವಿದ್ಯಾಪೀಠದ ಬ್ರಹ್ಮಚಾರಿ ವಿದ್ಯಾರ್ಥಿಗಳು ಎಳ್ಳು ವಿತರಣೆ ಮಾಡಿದರು.