ಉತ್ತಮ ಕಾಮಗಾರಿ ನಿರ್ವಹಿಸಿ ಎಲ್ಲರಿಗೆ ಮಾದರಿಯಾಗಬೇಕು
ಕ.ಪ್ರ.ವಾರ್ತೆ , ಸಕಲೇಶಪುರ , ಜ.17
ಉತ್ತಮ ಕಾಮಗಾರಿ ನಿರ್ವಹಿಸುವ ಮೂಲಕ ಸ್ಥಳೀಯ ಗುತ್ತಿಗೆದಾರರು ಜಿಲ್ಲೆಗೆ ಮಾದರಿಯಾಗ ಬೇಕು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.
ಗುರುವಾರ ಪಟ್ಟಣದ ಪ್ರವಾಸಿಮಂದಿರದ ಅವರಣದಲ್ಲಿ ತಾಲೂಕು ಗುತ್ತಿಗೆದಾರರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಕೆಲವು ಅವೈಜ್ಞಾನಿಕ ಕ್ರಮಗಳಿಂದಾಗಿ ತಾಲೂಕಿನ ಗುತ್ತಿಗೆದಾರರರಿಗೆ ಮರಳು, ಜಲ್ಲಿ ದೊರಕದಾಗಿದ್ದು ದೂರದಿಂದ ಕಚ್ಚಾ ಪದಾರ್ಥಗಳನ್ನು ತರಬೇಕಾಗಿರುವುದರಿಂದ ನಷ್ಟ ಹೊಂದುವಂತಾಗಿದೆ.
ಸಚಿವರಿಂದ ಭರವಸೆ: ಅಲ್ಲದೆ ಹೆಚ್ಚುಮಳೆ ಬೀಳುವ ಪ್ರದೇಶಗಳಿಗೆ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಮಂಗಳೂರು ವೃತ್ತದಲ್ಲಿರುವ ದರನಿಗದಿ ಪಟ್ಟಿಯನ್ನು ಆಳವಡಿಸಲಾಗಿದೆ. ಆದರೆ, ತಾಲೂಕಿಗೆ ಇದು ಅನ್ವಯವಾಗದ ಕಾರಣ, ಗುತ್ತಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ವಿಚಾರವನ್ನು ಲೋಕಪಯೋಗಿ ಸಚಿವರಿಗೆ ಗಮನಕ್ಕೆ ತಂದಿದ್ದು ಶೀಘ್ರವೇ ಈ ಬಗ್ಗೆ ಪರಮಾರ್ಶಿಸುವ ಭರವಸೆ ಸಚಿವರಿಂದ ದೊರೆತಿದೆ ಎಂದರು.
ಈಗಿರುವ ಹಾಸನ ವೃತ್ತದ ದರ ನಿಗದಿ ಪಟ್ಟಿಯಿಂದಾಗಿ ಗುತ್ತಿಗೆದಾರರು ನಷ್ಟ ಹೊಂದುವಂತಾಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಗುತ್ತಿಗೆದಾರ ಸಂಕಷ್ಟ ಬಗೆಹರಿಸಿಕೊಳ್ಳುವ ದೃಷ್ಟಿಯಿಂದ ಸಂಘದ ಅಸ್ತಿತ್ವ ಒಳ್ಳೆಯ ಬೆಳವಣಿಗೆಯಾಗಿದ್ದು ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ನಿರ್ವಹಿಸಲು ಇರುವ ಸೀಮಿತಿ ಅವಧಿಯಲ್ಲಿ ಸ್ಥಳೀಯ ಗುತ್ತಿಗೆದಾರರು ಉತ್ತಮ ಕೆಲಸ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆಯನ್ನು ಅಬುಬೂಕ್ಕರ್ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯೆ ಸುಲೋಚನಾ ರಾಮಕೃಷ್ಣ, ಮಂಜಮ್ಮ, ಪುರಸಭೆ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಮುಖೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಕ್ಯಾಮನಹಳ್ಳಿರಾಜ್ ಕುಮಾರ್, ಜೆಡಿಎಸ್ ಅಧ್ಯಕ್ಷ ದೊಡ್ಡದೀಣ್ಣೆಸ್ವಾಮಿ ಇದ್ದರು.