ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏತ ನೀರಾವರಿ ಹೋರಾಟಗಾರರ ಮನವಿ

Vishwanath S
Updated On : 18 Jan 2014, 1:54 am

ಚನ್ನರಾಯಪಟ್ಟಣ: ಜುಟ್ಟನಹಳ್ಳಿ, ಹಿರೀಸಾವೆ ಏತ ನೀರಾವರಿ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ಕಾಲ್ನಡಿಗೆ ಮಾಡಿದ ಏತ ನೀರಾವರಿ ಹೋರಾಟಗಾರರು ಪಟ್ಟಣಕ್ಕೆ ಆಗಮಿಸಿ ತಾಲೂಕು ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಏತ ನೀರಾವರಿ ಕಾಮಗಾರಿಗೆ ಆಗ್ರಹಿಸಿ, ಶ್ರವಣಬೆಳಗೊಳದಿಂದ ಹಿರೀಸಾವೆವರೆಗೆ ಕಾಲ್ನಡಿಗೆ ಆರಂಭಿಸಿದ ತಾಲೂಕು ಬಿಜೆಪಿ ಮುಖಂಡ ಗಂಗಾಧರ್ ನೇತೃತ್ವದಲ್ಲಿ ಹಿರೀಸಾವೆಯಿಂದ ಬೈಕ್ ರ್ಯಾಲಿಯಲ್ಲಿ ತಾಲೂಕು ಕಚೇರಿಗೆ ಆಗಮಿಸಿ ಶಿರಸ್ತೇದಾರ್ ಅವರಿಗೆ ಮನವಿ ಸಲ್ಲಿಸಿದರು.
ಒತ್ತಾಯ: ಈ ಸಂದರ್ಭದಲ್ಲಿ ಗಂಗಾಧರ್ ಮಾತನಾಡಿ, ಜುಟ್ಟನಹಳ್ಳಿ ಹಿರೀಸಾವೆ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, 700ಅಡಿಗೂ ಹೆಚ್ಚು ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಕಾಣದಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಮುಂದೆ ಬಂದು ಹಿರೀಸಾವೆ ಜುಟ್ಟನಹಳ್ಳಿ ಭಾಗಕ್ಕೆ ಭೂಮಿಯಲ್ಲಿನ ಅಂತರ್ಜಲ ಹೆಚ್ಚಿಸಲು ಹಾಗೂ ಕುಡಿಯುವ ನೀರಿನ ಬರ ನೀಗಿಸಲು ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿದರು.
ಆರೋಪ: 2004ರಲ್ಲಿಯೇ ಯೋಜನೆಗೆ ಚಾಲನೆ ದೊರೆತರೂ ಸರ್ಕಾರ ಅನುದಾನ ನೀಡದ ಕಾರಣ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ. ಸರ್ಕಾರ ಹಾಗೂ ತಮ್ಮ ಜನಪ್ರತಿನಿಧಿಗಳು ಈ ಬಗ್ಗೆ ತೋರುತ್ತಿರುವ ನಿರ್ಲಕ್ಷವೇ ಕಾರಣವಾಗಿದೆ ಎಂದು ಆರೋಪಿಸಿದರು.
ಎಚ್ಚರಿಕೆ: ಸರ್ಕಾರ ಈ ಭಾಗದ ರೈತರ ಹಿತದೃಷ್ಟಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸೌಮ್ಯ ಚನ್ನಕೇಶವ ರಥೋತ್ಸವ ಪ್ರಯುಕ್ತ ಗಂಗಾಪೂಜೆ
ಹೊಳೆನರಸೀಪುರ: ಪಟ್ಟಣದ ಅಂಬೇಡ್ಕರ್ ನಗರದ ಶ್ರೀಸೌಮ್ಯ ಚನ್ನಕೇಶವಸ್ವಾಮಿ ರಥೋತ್ಸವ ಪ್ರಯುಕ್ತ ಶ್ರೀಚನ್ನಕೇಶವಸ್ವಾಮಿಗೆ ಹೇಮಾವತಿ ನದಿ ದಡದಲ್ಲಿ ಗಂಗಾಪೂಜೆಯನ್ನು ಶ್ರದ್ದಾ ಭಕ್ತಿ ಮತ್ತು ಅದ್ಧೂರಿಯಿಂದ ನಡೆಸಲಾಯಿತು. ಶ್ರೀ ಸೌಮ್ಯ ಚನ್ನಕೇಶವಸ್ವಾಮಿ ರಥೋತ್ಸವದ ಪ್ರಯುಕ್ತ ಸಂಕ್ರಾಂತಿ ದಿನದಂದು ಬೆಳಿಗ್ಗೆ ಶ್ರೀ ಸ್ವಾಮಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆದೊಯ್ಯಲಾಯಿತು. ಗುರುವಾರ ದೇವರಿಗೆ ಭಕ್ತರಿಂದ ಬುತ್ತಿ ಒಪ್ಪಿಸಿದರು. ಬ್ರಾಹ್ಮಣರಿಂದ ಹೋಮ, ನವಗ್ರಹ ಪೂಜೆ ಮತ್ತು ಪೂರ್ಣಾಹುತಿ ನಂತರ ಕುಂಭಲಗ್ನದಲ್ಲಿ ಶ್ರೀ ಸೌಮ್ಯ ಚನ್ನಕೇಶವಸ್ವಾಮಿ  ರಥೋತ್ಸವ ನಡೆಯಿತು ಎಂದು ದೇವಾಲಯದ ಅರ್ಚಕ ಕೋಡಪ್ಪ ತಿಳಿಸಿದ್ದಾರೆ. ರಥೋತ್ಸವದ ನಂತರ ಮೂರು ದಿನಗಳ ಕಾಲ ದೇವರಿಗೆ ವಿಶೇಷ ಪೂಜೆಗಳು ನಡೆದವು.. ರಥೋತ್ಸವದ ಪ್ರಯುಕ್ತ ಹಾಸನ ಅಜಿತ್ ಸೌಂಡ್ ಸಿಸ್ಟಮ್ ಅವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.
ಇಂದು ನಾಟಕಗಳ ಲೋಕಾರ್ಪಣೆ
ಬೇಲೂರು: ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಡಾ. ಎ. ರಾಮರೆಡ್ಡಿ  ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಶತನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿಯವರ 100 ನಾಟಕಗಳ 10 ಸಂಪುಟ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭವನ್ನು  ಜ. 18ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಶ್ರೀಮತಿ ಪುಟ್ಟಮ್ಮ - ಶ್ರೀ ಚನ್ನಕೇಶವೇಗೌಡರ  ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಶಾಸಕ ರುದ್ರೇಶಗೌಡ ಉದ್ಘಾಟಿಸುವರು. ಜಿಪಂ ಸದಸ್ಯ ಈ.ಹೆ. ಲಕ್ಷ್ಮ ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ವೇಲಾಪುರಿ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೆ.ಎಂ. ದಯಾನಂ  ಅಧ್ಯಕ್ಷತೆ ವಹಿಸುವರು. ಕಾರ್ಮಿಕ ಕಲ್ಯಾಣ ನಿಧಿಯ ಮಾಜಿ ಅಧ್ಯಕ್ಷ ಡಾ.ಎ.ರಾಮರೆಡ್ಡಿ  ಪುಸ್ತಕ ಸಂಪುಟ ಲೋಕಾರ್ಪಣೆ ಮಾಡುವರು. ಕವಿತಾ ಕೃಷ್ಣ ಮಾತನಾಡಲಿದ್ದಾರೆ.
ಇಂದು ಕಿಡ್ಸ್ ಕಿನ್ನರಿ ಕಾರ್ಯಕ್ರಮ
ಚನ್ನರಾಯಪಟ್ಟಣ: ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಚೇತನಾ ಮಹಿಳಾ ಸಂಸ್ಥೆ ವತಿಯಿಂದ  ನಡೆಯುತ್ತಿರುವ ಕಿಡ್ಸ್ ಕಾನ್ವೆಂಟ್‌ನ ಶಾಲಾ ವಾರ್ಷಿಕೋತ್ಸವ ಸಮಾರಂಭ ಜ. 18ರಂದು  ಸಂಜೆ 5 ಗಂಟೆಗೆ ಶಾಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ  ಹೆ.ಕೆ. ಪಾಂಡು, ಲೀಲಾವತಿ ಭಾಗವಹಿಸುವರು. ಕಾನ್ವೆಂಟ್‌ನ ಅಧ್ಯಕ್ಷೆ ಎ. ಗೀತಾ ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸುವರು.
ಬತ್ತದ ಕಣಕ್ಕೆ ವಿಶೇಷ ಪೂಜೆ
ಹಾಸನ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಕಣ ಪೂಜೆ ಆಚರಿಸಲಾಯಿತು. ತಾಲೂಕಿನ ತಟ್ಟೇಕೆರೆ ಹೋಬಳಿಯ ಸಿಂಗಾಪಟ್ಟಣದಲ್ಲಿ ಕೊಯ್ಯಲಾಗಿದ್ದ ಬತ್ತದ ಕಣಕ್ಕೆ ಸಂಕ್ರಾಂತಿ ಹಬ್ಬದ ದಿವಸ ಸಂಜೆ ಹಬ್ಬದ ತಿನಿಸುಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿದರು.  ನಂತರ ಮಕ್ಕಳು ಸಂಭ್ರಮದಿಂದ ಕುಣಿದು ನಲಿದರು. ಎಡೆ ಇಟ್ಟ ಕಡುಬನ್ನು ಗೋಪುರವಾಗಿ ಇಡಲಾಗಿರುವ ಭತ್ತದ ಒಳಗೆ ಇಡಲಾಗುತ್ತದೆ. ಕತ್ತಲಾದ ಮೇಲೆ ಒಬ್ಬರೇ ಹೋಗಿ ಹುಡುಕಿಕೊಂಡು ತಿನ್ನುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ.
ಗರುಡಗಂಬ ಏರುವ ಸ್ಪರ್ಧೆ
ಅರಸೀಕೆರೆ: ಪೊಂಗಲ್ ಹಬ್ಬದ ಅಂಗವಾಗಿ ಪಟ್ಟಣದ ಹಾಸನ ರಸ್ತೆ ಕಟ್ಟೆ ಮಾರಿಯಮ್ಮ ಯುವಕ ಸಂಘ ವತಿಯಿಂದ ಗುರುವಾರ ಗರುಡಗಂಬ ಏರುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹೊಸ ರೀತಿಯ ಈ ಸ್ಪರ್ಧೆ ಸುತ್ತಮುತ್ತಲಿನ ಜನರ ಮನಸೆಳೆಯಿತು. ಪೊಂಗಲ್ ಹಬ್ಬದ ಅಂಗವಾಗಿ ಪಟ್ಟಣದ ಹಾಸನ ರಸ್ತೆಯನ್ನು ಕೇಸರಿ ಧ್ವಜಗಳು ಹಾಗೂ ಕೇಸರಿತೋರಣಗಳಿಂದ ನವವಧುವಿನಂತೆ ಶೃಂಗರಿಸಿದ್ದರಲ್ಲದೆ, ಬುಧವಾರ ಬೆಳಗ್ಗೆ ಕಟ್ಟೆ ಮಾರಿಯಮ್ಮ ದೇವಿಗೆ ಅಭಿಷೇಕ, ಸಹಸ್ರ ನಾಮಾಚರಣೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಭಕ್ತಾಧಿಗಳಿಗೆ ಪೊಂಗಲ್ ವಿತರಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement