ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕರಡಿ ದಾಳಿ: ಇಬ್ಬರಿಗೆ ತೀವ್ರ ಗಾಯ

Vishwanath S
Updated On : 18 Jan 2014, 1:54 am

ಅರಸೀಕೆರೆ: ಗ್ರಾಮದಲ್ಲಿ ಕಾಣಿಸಿಕೊಂಡ ಕರಡಿ ಬೆದರಿಸಿ ಓಡಿಸಲು ಹೋದ ಗ್ರಾಮಸ್ಥರ ಮೇಲೆ ಕರಡಿಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮತ್ತೋರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿ ತೀವ್ರವಾಗಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಕಣಕಟ್ಟೆ ಹೋಬಳಿಯ ಅಹಮದ್‌ಪುರ ಗ್ರಾಮದ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕರಡಿ ಗ್ರಾಮದ ಆಸುಪಾಸಿನಲ್ಲಿದೆ ಎಂಬ ಸುದ್ದಿ ತಿಳಿದ ಅಹಮದ್ ಪುರ ಹಾಗೂ ಗಿರಿಬೊಮ್ಮನಹಳ್ಳಿ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ಪೊದೆಯಲ್ಲಿ ಅಡಗಿದ್ದ ಕರಡಿಯತ್ತ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕರಡಿ ಕೈಗೆ ಸಿಕ್ಕ ಗಿರಿಬೊಮ್ಮನಹಳ್ಳಿಯ ಗಿರಿಯಜ್ಜ (60) ಅವರಿಗೆ ತಲೆ, ಮುಖ ಪರಚಿ ತೀವ್ರವಾಗಿ ಗಾಯಗೊಳಿಸಿದ್ದು, ಅರಣ್ಯ ರಕ್ಷಕ ರಮೇಶ್ (33) ಅವರಿಗೆ ಕೈ, ಕಾಲು ಪರಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಪಟ್ಟಣದ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಘಟನೆಯ ವಿವರ: ಮೊದಲೇ ಗಾಯಗೊಂಡಿದ್ದ ಕರಡಿ ಆಹಾರ ಹಾಗೂ ನೀರನ್ನು ಹುಡುಕುತ್ತಾ ಗ್ರಾಮದತ್ತ ಧಾವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಸಿಬ್ಬಂದಿ ಕರಡಿ ಬೆದರಿಸಿ ಅರಣ್ಯದತ್ತ ಕಳುಹಿಸಲು ಮುಂದಾದ ವೇಳೆ ಕೆಲ ಕಿಡಿಗೇಡಿಗಳು ಮನಬಂದಂತೆ ಕಲ್ಲುತೂರಾಟ ನಡೆಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಕರಡಿ ಜನರತ್ತ ಧಾವಿಸಿ ಕೈಗೆ ಸಿಕ್ಕವರನ್ನು ಕಚ್ಚಿ ಗಾಯಗೊಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಕರಡಿ ಕೊಂದರು: ಇಬ್ಬರನ್ನು ಗಾಯಗೊಳಿಸಿದ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕರಡಿಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ. ನಂತರ ಅರಣ್ಯ ಇಲಾಖೆಯ ಸಿಬ್ಬಂಧಿ ಉದ್ರಿಕ್ತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ನಂತರ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಭೀತಿ ವಾತಾವರಣ: ತಾಲ್ಲೂಕಿನ ಕಣಕಟ್ಟೆ ಹೋಬಳಿಯಲ್ಲಿ ಪದೇ ಪದೇ ಕರಡಿ ಕಾಣಿಸಿಕೊಂಡು ಗ್ರಾಮಸ್ಥರು, ರೈತಾಪಿ ವರ್ಗವನ್ನು ಪರಚಿ ಗಾಯಗೊಳಿಸುತ್ತಿದ್ದು ಗ್ರಾಮಗಳಲ್ಲಿ ಹೊಲ ತೋಟ ಜಮೀನಿಗೆ ಹೋಗಲು ಹಿಂಜರಿಯುವಂತಹ ಪರಿಸ್ಥಿತಿ ಉಂಟಾಗಿದೆ.
ಕರಡಿ ದಾಳಿಯಿಂದ ಈಗಾಗಲೇ ಕಂಗೆಟ್ಟಿರುವ ಕಣಕಟ್ಟೆ, ಬಾಣಾವರ ಹೋಬಳಿಯ ಜನತೆ ಇದೀಗ ಆತಂಕಕ್ಕೋಳಗಾಗಿದ್ದು ಕೂಡಲೇ ಕರಡಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement