ನ್ಯಾಯಬೆಲೆ ಅಂಗಡಿಗಾಗಿ ಪ್ರತಿಭಟನೆ
ಕ.ಪ್ರ.ವಾರ್ತೆ , ಆಲೂರು , ಜ 17
ತಾಲೂಕಿನ ಪಾಳ್ಯ ಹೋಬಳಿಯ ಸಿಂಗಟಗೆರೆ ಗ್ರಾಮದಲ್ಲಿ ಪಡಿತರ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಒತ್ತಾಯಿಸಿ ನಾನಾ ಗ್ರಾಮಸ್ಥರು ಜೈಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ನೀಡಿದರು.
ಸಿಂಗಟಗೆರೆ, ಸಿಂಗಟಗೆರೆ ಕಾಲೋನಿ, ಕಗ್ಗರವಳ್ಳಿ, ಕಟ್ಟಗದ್ದೆ ಗ್ರಾಮಸ್ಥರು ಪಟ್ಟಣದ ಬಸ್ ನಿಲ್ದಾದ ಮುಂಭಾಗ ಜಮಾಹಿಸಿ ಈ ಗ್ರಾಮಗಳಿಂದ 6 ಕಿಮೀ ದೂರದಲ್ಲಿ ಇರುವ ಸಿಂಗೋಡಿ ಗ್ರಾಮದಲ್ಲಿ ಪಡಿತರ ಕೇಂದ್ರವಿದ್ದು, ಈ ನಾಲ್ಕು ಗ್ರಾಮಗಳ ಸಾವಿರಾರು ಗ್ರಾಮಸ್ಥರು ಸಿಂಗೋಡನಹಳ್ಳಿ ಗ್ರಾಮಕ್ಕೆ ಹೋಗಿ ತರಬೇಕಿದೆ. ಆದ್ದರಿಂದ ತೀವ್ರ ತೊಂದರೆ ಉಂಟಾಗುತ್ತಿದ್ದು, ವಯೋವೃದ್ಧರು ಪಡಿತರ ತರಲಾಗದೆ ಬೇರೆಯವರಿಂದ ಪಡಿತರ ತರಿಸಲು ಚೀಟಿಯನ್ನು ನೀಡಿದಾಗ ಅವರು ಸರಿಯಾದ ರೀತಿ ಪಡಿತರ ತಂದು ಕೊಡದೆ ತೊಂದರೆ ನೀಡಿರುವ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ, ಸಿಂಗಟಗೆರೆಯಲ್ಲೇ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈಡೇರದ ಭರವಸೆ: ಈ ಹಿಂದೆ ಸಿಂಗಟಗೆರೆ ಗ್ರಾಮದಲ್ಲಿ ಉಪಕೇಂದ್ರ ಗ್ರಾಮದಲ್ಲಿ ತೆರೆಯವುದಾಗಿ ಭರವಸೆ ನೀಡಿದ್ದರು. ತಾರತಮ್ಯ ನೀತಿ ಅನುಸರಿಸಿ ಗ್ರಾಮಸ್ಥರಿಗೆ ಅನ್ಯಾಯ ಎಸಗಿದ್ದಾರೆ. ಆದ್ದರಿಂದ ಕೂಡಲೇ ಪಡಿತರ ಉಪಕೇಂದ್ರವನ್ನು ಸಿಂಗಟಗೆರೆ ಗ್ರಾಮದಲ್ಲಿ ತೆರೆಯಬೇಕು ಎಂದು ಒತ್ತಾಯಿಸಿದರು.
ಇಲ್ಲವಾದಲ್ಲಿ ಪಾಳ್ಯ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನಂತರ ತಹಸೀಲ್ದಾರ್ ಕಚೇರಿಗೆ ಹೋಗಿ ಉಪ ತಹಸೀಲ್ದಾರ್ ರಮೇಶ್ ಅವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಜೈಕರ್ನಾಟಕ ಸಂಘಟನೆಯ ತಾ ಅಧ್ಯಕ್ಷ ಹನುಮಂತೇಗೌಡ, ಪ್ರದೀಪ್, ರಂಗೇಗೌಡ, ಮಧು, ನಾಗರಾಜ್, ವಸಂತ, ರಾಮೇಗೌಡ, ಪುಟ್ಟೇಗೌಡ, ಕಟ್ಟೇಗದ್ದೆ ಪಟೇಲರು ಹಾಗೂ ಇತರರು ಇದ್ದರು.