ಬಂಧನದಿಂದ ಪಾರಾಗಲು ಯತ್ನಿಸಿದ ಸಲಗ
ಕ.ಪ್ರ.ವಾರ್ತೆ , ಆಲೂರು , ಜ.17
ತಾಲೂಕಿನ ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿಯ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಳೆದ 1 ತಿಂಗಳಿನಿಂದ ಎಡೆಬಿಡದೆ ದಾಳಿ ನಡೆಸಿ ಇತ್ತೀಚೆಗೆ ಮಹಿಳೆಯೋರ್ವರನ್ನು ಬಲಿ ತೆಗೆದುಕೊಂಡು ಈ ಭಾಗದ ಜನರಲ್ಲಿ ಭಯವನ್ನು ಹುಟ್ಟಿಸಿದ್ದ ಕಾಡಾನೆಯನ್ನು ಗುರುವಾರವಷ್ಟೇ ಹಿಡಿದಿದ್ದ ಅರಣ್ಯ ಇಲಾಖೆಯವರು ಶುಕ್ರವಾರ ಹರಸಾಹಸಪಟ್ಟು ಕೊಡಗಿನ ತಿತಿಮತಿ ಅರಣ್ಯದಲ್ಲಿ ಇರುವ ಆನೆಧಾಮಕ್ಕೆ ಸಾಗಿಸಿದರು.
ಗುರುವಾರ ಬೆಳಗ್ಗೆ 10.30ಕ್ಕೆ ಕಾರ್ಯಾಚರಣೆ ಪ್ರಾರಂಭಿಸಿದ ಅರಣ್ಯ ಇಲಾಖೆಯವರು ಕೇವಲ 2 ಗಂಟೆ ಅಂತರದಲ್ಲಿ ಕಾಡಾನೆಯನ್ನು ಹಿಡಿಯುವಲ್ಲಿ ಸಫಲರಾಗಿದ್ದರು. ಈ ಸಂದರ್ಭದಲ್ಲಿ ದಟ್ಟ ಅರಣ್ಯದಲ್ಲಿ ಓಡಿ ಹೋಗಿ ಅರವಳಿಕೆ ಚುಚ್ಚುಮದ್ದಿನ ಪ್ರಭಾವದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ಕಾಡಾನೆಯನ್ನು ಕ್ಯಾಂಪಿಗೆ ತರಲು ಪರದಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಸಾಧ್ಯವಾಗದೇ ಕಾಡಾನೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಮರಕ್ಕೆ ಕಟ್ಟಿದ್ದರು. ಇಷ್ಟಕ್ಕೇ ಸುಮ್ಮನಾಗದ ಪುಂಡ ಕಾಡಾನೆ ಅರಣ್ಯ ಇಲಾಖೆಯವರನ್ನು ರಾತ್ರಿಯಿಡೀ ಎಡೆಬಿಡದೆ ಗೋಳು ಹೊಯ್ದುಕೊಂಡಿತ್ತು.
ಹಗ್ಗ ಕಚ್ಚಿ ತುಂಡರಿಸಿದ್ದ ಸಲಗ: ರಾತ್ರಿ 3 ಗಂಟೆಯಲ್ಲಿ ತನ್ನ ಕುತ್ತಿಗೆಗೆ ಕಟ್ಟಿಕೊಂಡಿದ್ದ ಸೆಣಬಿನ ಹಗ್ಗವನ್ನು ಬಾಯಿಯಲ್ಲಿ ಹಾಕಿಕೊಂಡು ಕಚ್ಚಿ ತುಂಡರಿಸಿದ್ದ ಆನೆ ತನ್ನ ಎರಡು ಕಾಲಿಗೆ ಕಟ್ಟಿದ್ದ ಹಗ್ಗದ ಪೈಕಿ ಎಡಗಾಲಿನ ಹಗ್ಗವನ್ನೂ ತುಂಡರಿಸಿಕೊಂಡಿತ್ತು. ಆನೆ ಕಟ್ಟಿದ್ದ ಸ್ಥಳದಲ್ಲಿದ್ದ ಮಾವುತನೊಬ್ಬ ಹಗ್ಗ ಹರಿದುಕೊಂಡಿದ್ದನ್ನು ನೋಡದೆ ಹೋಗಿದ್ದರೆ ಆನೆ ಪುನಃ ಕಾಡಿಗೆ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಇತ್ತು. ಮಾವುತನ ಸಮಯಪ್ರಜ್ಞೆಯಿಂದಾಗಿ ಈ ಅನಾಹುತ ತಪ್ಪಿದಂತಾಯಿತು.
ಮತ್ತೆ ಬಂಧನ: ಆ ಸಮಯದಲ್ಲಿ ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ ಮಾವುತ ಇತರೆ ಮಾವುತರೊಡಗೂಡಿ, ಸಾಕಾನೆಗಳೊಂದಿಗೆ ಕಾಡಾನೆ ತಪ್ಪಿಸಿಕೊಳ್ಳದಂತೆ ಸುತ್ತುವರೆದು ನಿಲ್ಲಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ವೈದ್ಯರಾದ ಚಿಟ್ಟಿಯಪ್ಪ, ನಾಗರಾಜ್, ಉಮಾಶಂಕರ್, ಗುರಿಕಾರರಾದ ವೆಂಕಟೇಶ್, ಅಕ್ರಂ, ಕರಂಬಯ್ ಅವರು ಮಾಗಡಿಹಳ್ಳಿ ಕ್ಯಾಂಪಿನಿಂದ ರಾತ್ರೋರಾತ್ರಿ ಆನೆ ಕಟ್ಟಲಾಗಿದ್ದ ಸ್ಥಳಕ್ಕೆ ಆಗಮಿಸಿ, ಸಾಕಾನೆಗಳ ಸಹಾಯದೊಂದಿಗೆ ಪುನಃ ಆನೆಯನ್ನು ಬಂಧಿಸುವಲ್ಲಿ ಸಫಲರಾದರು.
ಸ್ನೇಹಿತನ ಬಂಧನಕ್ಕೆ ವಿರೋಧ: ಇಷ್ಟೇ ಅಲ್ಲದೆ ರಾತ್ರಿ 12 ಗಂಟೆಯಿಂದಲೂ ತನ್ನ ಹಿಂಡಿನಿಂದ ಸ್ನೇಹಿತನೊಬ್ಬನನ್ನು ಹಿಡಿದುಕೊಂಡು ಬಂದಿದ್ದಕ್ಕೆ ಕೋಪಿಸಿಕೊಂಡಿದ್ದ ಇತರೆ ಹಿಂಡಾನೆಗಳು ಆನೆ ಕಟ್ಟಿದ್ದ ಸ್ಥಳಕ್ಕೆ ಬಂದು ಬಂಧಿಸಲಾಗಿದ್ದ ಆನೆಯನ್ನು ಬಿಡಿಸಿಕೊಳ್ಳಲು ಪ್ರಯತ್ನಪಟ್ಟವು. ಈ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಪಟಾಕಿಗಳನ್ನು ಸಿಡಿಸಿ, ಅರಣ್ಯ ಇಲಾಖೆ ಸಿಬ್ಬಂದಿ 6 ಬಾರಿ ಆನೆ ಹಿಂಡನ್ನು ಹಿಮ್ಮೆಟ್ಟಿಸುವಲ್ಲಿ ಸಾಕು ಸಾಕಾದರು.
ಅಲ್ಲದೇ, ಬೆಳಗಿನ ಜಾವ 5 ಗಂಟೆಯಲ್ಲಿ ಕ್ಯಾಂಪಿನಲ್ಲಿ ಸಿದ್ಧವಾಗಿದ್ದ ಆನೆ ಸಾಕಾಣಿಕೆ ಲಾರಿಯನ್ನು ಸ್ಥಳಕ್ಕೆ ತರಿಸಿಕೊಂಡು ಅಭಿಮನ್ಯು, ಬಲರಾಮ, ಅರ್ಜುನ ಆನೆಗಳ ಸಹಕಾರದಿಂದ ಲಾರಿಗೆ ಹತ್ತಿಸಲು ಸತತ ಮೂರು ತಾಸು ಬೇಕಾಯಿತು. ನಂತರ ಆನೆಯನ್ನು ಮಡಿಕೇರಿಯ ತಿತಿಮತಿ ಆನೆಧಾಮಕ್ಕೆ ಹೊಳೆನರಸೀಪುರ- ಹುಣಸೂರು ಮಾರ್ಗವಾಗಿ ಕರೆದೊಯ್ಯಲಾಯಿತು.
ಇದರೊಂದಿಗೆ ಅಭಿಮನ್ಯು, ಅರ್ಜುನ, ಬಲರಾಮ ಆನೆಗಳು ಸಹ ಇತರೆ ಲಾರಿಯಲ್ಲಿ ಕ್ಯಾಂಪಿಗೆ ಹೋದವು. ಉಳಿದ ಎರಡು ಆನೆಗಳಾದ ವಿಕ್ರಂ, ಪ್ರಶಾಂತ್ ಆನೆಗಳು ಮಾಗಡಿಹಳ್ಳಿ ಕ್ಯಾಂಪಿನಲ್ಲೇ ಉಳಿದಿವೆ. ಹಿಡಿದ ಆನೆಯನ್ನು ಕ್ಯಾಂಪಿನಲ್ಲಿ ಇರುವ ಖೆಡ್ಡಾಕ್ಕೆ ಹಾಕಿ ಪುನಃ ಸಾಕಾನೆಗಳು ಹಾಗೂ ಸಿಬ್ಬಂದಿ ಮಾಗಡಿಹಳ್ಳಿ ಕ್ಯಾಂಪಿಗೆ ವಾಪಸ್ಸಾಗಲಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.