ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರ ತಾಪಂ ಅಧ್ಯಕ್ಷರ ದಿಢೀರ್ ರಾಜಿನಾಮೆ

Vishwanath S
Updated On : 18 Jan 2014, 1:53 am

ಹೊಳೆನರಸೀಪುರ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಇಲ್ಲಿನ ತಾಲೂಕು ಪಂಚಾಯ್ತಿ  ಅಧ್ಯಕ್ಷೆಯಾಗಿದ್ದ ಜೆಡಿಎಸ್‌ನ ಪುಷ್ಪಾಗೌಡೇಗೌಡ ಹಾಗೂ ಉಪಾಧ್ಯಕ್ಷ ನಂಜುಂಡಪ್ಪ ಅವರು ಕೇವಲ ಐದು ತಿಂಗಳ ಅಧಿಕಾರಾವಧಿಯ ನಂತರ, ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವುದಾಗಿ ವರದಿಯಾಗಿದೆ.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಸಂಕನಹಳ್ಳಿ ತಾಪಂ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಪುಷ್ಪಾಗೌಡೇಗೌಡ ಹಾಗೂ ಸಾಮಾನ್ಯ ಕ್ಷೇತ್ರದಿಂದ ಎಲೆಚಾಗಹಳ್ಳಿ ಕ್ಷೇತ್ರದಿಂದ ಜಯಗಳಿಸಿದ್ದ ನಂಜುಂಡಪ್ಪ ಅವರು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ 2013ರ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಕೇವಲ 5ತಿಂಗಳಷ್ಟೇ ಅಧಿಕಾರದಲ್ಲಿದ್ದ ಇವರು ತಮ್ಮ ಜೆಡಿಎಸ್ ನಾಯಕ ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರ ಮೌಖಿಕ ನಿರ್ದೇಶನದ ಮೇರೆಗೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ತಿಳಿದುಬಂದಿದೆ.
20-20 ತಿಂಗಳ ಅಧಿಕಾರ:ಇಲ್ಲಿನ ತಾಲೂಕು ಪಂಚಾಯ್ತಿಯ 15 ಸ್ಥಾನಗಳಿಗೆ ಕಳೆದ2011ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 14ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಮೊದಲ ಅವಧಿಗೆ ಹಳೇಕೋಟೆ ತಾ.ಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎನ್.ಆರ್.ಅನಂತಕುಮಾರ್ ಅಧ್ಯಕ್ಷರಾಗಿ ಹಾಗೂ ದೊಡ್ಡಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪಿ.ಸಿ.ಶಶಿಕಲ ಉಪಾಧ್ಯಕ್ಷೆಯಾಗಿಯೂ 20 ತಿಂಗಳುಗಳ ಕಾಲ ಅಧಿಕಾರ ನಡೆಸಿದ್ದರು.
ನಂತರ ಬದಲಾದ ಮೀಸಲಾತಿಯನ್ವಯ ಎರಡನೆಯ ಅವಧಿಗೆ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾದ ಹಿನ್ನೆಲೆಯಲ್ಲಿ ಶ್ರವಣೂರು ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಕೆ.ಎಂ. ಚಂದ್ರಮತಿ ಅಧ್ಯಕ್ಷೆಯಾಗಿಯೂ, ದೊಡ್ಡಕುಂಚೆ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಹುಚ್ಚೇಗೌಡ ಅವರು ಉಪಾಧ್ಯಕ್ಷರಾಗಿಯೂ 10 ತಿಂಗಳು ಅಧಿಕಾರದಲ್ಲಿದ್ದರು.
ಇನ್ನಿಬ್ಬರಿಗೆ ಅವಕಾಶ?: ಇತ್ತೀಚಿನ ಅಚ್ಚರಿಯ ಬೆಳವಣಿಗೆಯಲ್ಲಿ ಕೇವಲ ಐದು ತಿಂಗಳುಗಳ ಕಾಲವಷ್ಟೇ ಅಧಿಕಾರದಲ್ಲಿದ್ದ ಅಧ್ಯಕ್ಷೆ ಪುಷ್ಪಾಗೌಡೇಗೌಡ ಮತ್ತು ಉಪಾಧ್ಯಕ್ಷ ನಂಜುಂಡಪ್ಪ ಅವರನ್ನು ಬದಲಾಯಿಸಿ ಇನ್ನಿಬ್ಬರಿಗೆ ಅವಕಾಶ ನೀಡುವ ಉದ್ದೇಶದಿಂದ ಇವರುಗಳನ್ನು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸುವಂತೆ ಇವರ ನಾಯಕರು ಸೂಚಿಸಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ 2013ರ ಡಿ. 27ರಂದೇ ಉಪಾಧ್ಯಕ್ಷ ನಂಜುಂಡಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಅಧ್ಯಕ್ಷೆ ಪುಷ್ಪಾಗೌಡೇಗೌಡ ಅವರಿಗೆ ಸಲ್ಲಿಸಿದ್ದು, ಇದೀಗ ಅಧ್ಯಕ್ಷೆ ತಮ್ಮ ಹಾಗೂ ಉಪಾಧ್ಯಕ್ಷರ ರಾಜೀನಾಮೆ ಪತ್ರವನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳ ಬಳಿಗೆ ತೆರಳಿದ್ದರು. ಜಿಲ್ಲಾಧಿಕಾರಿಗಳು ಸಿಗದ ಹಿನ್ನೆಲೆಯಲ್ಲಿ ಕೇವಲ ಉಪಾಧ್ಯಕ್ಷರ ರಾಜೀನಾಮೆ ಪತ್ರವನ್ನು ಉಪ-ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಆಗಮಿಸಿದ ನಂತರ ಅಧ್ಯಕ್ಷೆ ಪುಷ್ಪಾಗೌಡೇಗೌಡ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿರುವುದಾಗಿ ಹೇಳಲಾಗಿದೆ.
ಇವರಿಬ್ಬರಿಂದ ತೆರವಾದ ಸ್ಥಾನಗಳಿಗೆ ಬಿದರಕ್ಕ ತಾ.ಪಂ ಕ್ಷೇತ್ರದಿಂದ ಆಯ್ಕೆಗೊಂಡಿರುವ ಕುಸುಮ ಅಧ್ಯಕ್ಷರಾಗಿಯೂ, ಮಳಲಿ ಕ್ಷೇತ್ರದಿಂದ ಆಯ್ಕೆಗೊಂಡಿರುವ ಹಿರಿಯ ಸದಸ್ಯ ಡಿ. ಕೃಷ್ಣಪ್ಪ ಅವರು ಉಪಾಧ್ಯಕ್ಷರಾಗಿಯೂ ಆಯ್ಕೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement